ಬೆಂಗಳೂರು: ಇಲ್ಲಿಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೇ 23ರಂದು ನಡೆಯಬೇಕಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್‌ರೈಸರ್ಸ್ ಹೈದರಾಬಾದ್ ಪಂದ್ಯವನ್ನು ಲಖನೌಗೆ ಸ್ಥಳಾಂತರಿಸಲಾಗಿದೆ.
ಪಂದ್ಯದ ದಿನ ಬೆಂಗಳೂರಿನಲ್ಲಿ ಮಳೆ ಸುರಿಯುವ ಮುನ್ಸೂಚನೆ ಇರುವುದರಿಂದ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಈ ನಿರ್ಧಾರ ಕೈಗೊಂಡಿದೆ. ಮೇ 17ರಂದು ಇಲ್ಲಿ ಆಯೋಜನೆಗೊಂಡಿದ್ದ ಆರ್‌ಸಿಬಿ ಮತ್ತು ಕೋಲ್ಕತ್ತ ನೈಟ್ ರೈಡರ್ಸ್ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಉಭಯ ತಂಡಗಳಿಗೂ ತಲಾ ಒಂದು ಅಂಕ ಹಂಚಲಾಗಿತ್ತು.
ಈ ಕುರಿತು ಐಪಿಎಲ್ ಆಡಳಿತ ಸಮಿತಿ ಮತ್ತು ಬಿಸಿಸಿಐ ಪದಾಧಿಕಾರಿಗಳು ಸಮಾಲೋಚನೆ ನಡೆಸಿದ ನಂತರ ಈ ನಿರ್ಧಾರ ಕೈಗೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಟೂರ್ನಿಯ ಪ್ಲೇ ಆಫ್ ಮತ್ತು ಫೈನಲ್ ಪಂದ್ಯದ ತಾಣಗಳನ್ನೂ ನಿರ್ಧರಿಸಲಾಗಿದೆ.
ಭಾರತ ಮತ್ತು ಪಾಕಿಸ್ತಾನ ಸೇನಾ ಸಂಘರ್ಷದಿಂದಾಗಿ ಮೇ 8ರಿಂದ 16ವರೆಗೆ ಐಪಿಲ್ ಟೂರ್ನಿಗೆ ಬಿಡುವು ನೀಡಲಾಗಿತ್ತು. ಪುನರಾರಂಭ ಹಂತದ ಮೊದಲ ಪಂದ್ಯವನ್ನು ಮೇ 17ರಂದು ಬೆಂಗಳೂರಿನಲ್ಲಿ ನಿಗದಿಪಡಿಲಾಗಿತ್ತು.
ಆರ್‌ಸಿಬಿ ತಂಡವು ಈಗಾಗಲೇ ಪ್ಲೇಆಫ್ ಹಂತಕ್ಕೆ ಪ್ರವೇಶಿಸಿದೆ. ಇನ್ನುಳಿದ ಎರಡೂ ಪಂದ್ಯಗಳಲ್ಲಿ ಗೆದ್ದು ಪಾಯಿಂಟ್ ಪಟ್ಟಿಯ ಅಗ್ರಸ್ಥಾನಕ್ಕೇರುವ ಛಲದಲ್ಲಿದೆ.
ಅಹಮದಾಬಾದ್‌ಗೆ ಫೈನಲ್: ಈ ಸಲದ ಐಪಿಎಲ್ ಟೂರ್ನಿಯ ಫೈನಲ್ ಪಂದ್ಯವನ್ನು ಅಹಮದಾಬಾದಿನಲ್ಲಿ ಜೂನ್ 3ರಂದು ನಡೆಸಲಾಗುವುದು. ಇದೇ ತಾಣದಲ್ಲಿ ಜೂನ್ 1ರಂದು ಎರಡನೇ ಕ್ವಾಲಿಫೈಯರ್ ಕೂಡ ನಡೆಯಲಿದೆ.
ಮೊದಲ ಕ್ವಾಲಿಫೈಯರ್ (ಮೇ 29) ಮತ್ತು ಎಲಿಮಿನೇಟರ್ (ಮೇ 30) ಪಂದ್ಯಗಳು ಚಂಡೀಗಡದ ಮುಲ್ಲನಪುರದಲ್ಲಿ ನಡೆಯಲಿವೆ.
2022 ಮತ್ತು 2023ರ ಆವೃತ್ತಿಯ ಫೈನಲ್‌ಗಳನ್ನು ಅಹಮದಾಬಾದಿನಲ್ಲಿ ಆಯೋಜಿಸಲಾಗಿತ್ತು.
‘ಹವಾಮಾನ ಮುನ್ಸೂಚನೆಗಳನ್ನು ಗಮನದಲ್ಲಿಟ್ಟುಕೊಂಡು ಪಂದ್ಯಗಳ ತಾಣಗಳನ್ನು ನಿಗದಿಪಡಿಸಲಾಗಿದೆ. ಪ್ಲೇಆಫ್ ಹಂತ ಮತ್ತು ಮಂಗಳವಾರದಿಂದ ನಡೆಯುವ ಲೀಗ್ ಪಂದ್ಯಗಳಿಗೆ ಪ್ಲೇಯಿಂಗ್ ಕಂಡಿಷನ್ ನಿಯಮದಲ್ಲಿ ಒಂದು ಗಂಟೆ ಹೆಚ್ಚುವರಿ ಸಮಯವನ್ನು ನೀಡಲಾಗುತ್ತದೆ’ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ಮೊದಲಿನ ವೇಳಾಪಟ್ಟಿಯ ಪ್ರಕಾರ ಫೈನಲ್ ಪಂದ್ಯವು ಮೇ 25ರಂದು ಕೋಲ್ಕತ್ತದ ಈಡನ್ ಗಾರ್ಡನ್‌ನಲ್ಲಿ ನಡೆಯಬೇಕಿತ್ತು.
23ರಂದು ಲಖನೌದಲ್ಲಿ ಆರ್‌ಸಿಬಿ– ಎಸ್‌ಆರ್‌ಎಚ್ ಮುಖಾಮುಖಿ
ಅಹಮದಾಬಾದಿನಲ್ಲಿ ಜೂನ್ 3ರಂದು ಫೈನಲ್ ಹಣಾಹಣಿ
ಮುಲ್ಲನಪುರದಲ್ಲಿ ಮೊದಲ ಕ್ವಾಲಿಫೈಯರ್, ಎಲಿಮಿನೇಟರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.