ಐಪಿಎಲ್
ಚಿತ್ರ: IPL ವೆಬ್‌ಸೈಟ್
ಹಾಲಿ ಚಾಂಪಿಯನ್ ಕೋಲ್ಕತ್ತ ನೈಟ್ ರೈಡರ್ಸ್ (ಕೆಕೆಆರ್) ತಂಡದ ವಿರುದ್ಧ ಮಂಗಳವಾರ ರಾತ್ರಿ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ತಂಡವು 16 ರನ್ ಅಂತರದ ಜಯ ಸಾಧಿಸಿತು.
ಚಂಡೀಗಢದ ಮುಲ್ಲನಪುರದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕಿಂಗ್ಸ್, 15.3 ಓವರ್‌ಗಳಲ್ಲಿ 111 ರನ್ ಗಳಿಸಿ ಆಲೌಟ್ ಆಯಿತು. ಕೆಕೆಆರ್ ಬ್ಯಾಟರ್‌ಗಳು ಈ ಮೊತ್ತ ಬೆನ್ನತ್ತಲು ಆತಿಥೇಯ ತಂಡದ ಬೌಲರ್‌ಗಳು ಬಿಡಲಿಲ್ಲ.
ವೇಗಿ ಮಾರ್ಕೊ ಯಾನ್ಸನ್ (17ಕ್ಕೆ 3 ವಿಕೆಟ್) ಹಾಗೂ ಸ್ಪಿನ್ನರ್ ಯುಜವೇಂದ್ರ ಚಾಹಲ್ (28ಕ್ಕೆ 4 ವಿಕೆಟ್) ಪರಿಣಾಮಕಾರಿ ದಾಳಿ ನಡೆಸಿದರು. ಅವರಿಗೆ ಉತ್ತಮ ಸಹಕಾರ ನೀಡಿದ ಷೇವಿಯರ್ ಬರ್ಟ್ಲೆಟ್, ಅರ್ಶದೀಪ್ ಸಿಂಗ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಒಂದೊಂದು ವಿಕೆಟ್ ಉರುಳಿಸಿದರು.
ಕಿಂಗ್ಸ್ ಪಡೆಯ ಅತ್ಯುತ್ತಮ ಬೌಲಿಂಗ್ ಎದುರು ತತ್ತರಿಸಿದ ರೈಡರ್ಸ್, ಕೇವಲ 95 ರನ್ ಗಳಿಸುವಷ್ಟರಲ್ಲೇ ಸರ್ವಪತನ ಕಂಡಿತು. ಹೀಗಾಗಿ, ಅಲ್ಪ ಗುರಿ ಎದುರು ಪರಾಭವಗೊಂಡಿತು.
ಇದರೊಂದಿಗೆ, ಐಪಿಎಲ್‌ನಲ್ಲಿ ಅತಿ ಕಡಿಮೆ ಮೊತ್ತ ಗಳಿಸಿಯೂ ಗೆದ್ದ ತಂಡ ಎಂಬ ಖ್ಯಾತಿ ಪಂಜಾಬ್ ಪಡೆಯದ್ದಾಯಿತು.
ನಂತರದ ಸ್ಥಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಇದ್ದು, ಈ ತಂಡದ 2009ರಲ್ಲಿ ಪಂಜಾಬ್ ವಿರುದ್ಧ ಕೇವಲ 116 ರನ್ ಗಳಿಸಿಯೂ ಜಯ ದಕ್ಕಿಸಿಕೊಂಡಿತ್ತು.
ಐಪಿಎಲ್‌ನಲ್ಲಿ ಕಡಿಮೆ ಮೊತ್ತ ಗಳಿಸಿಯೂ ಗೆದ್ದ ತಂಡಗಳು
ಮುಲ್ಲನಪುರದಲ್ಲಿ ನಡೆದ ಪಂದ್ಯದಲ್ಲಿ ಪಂದ್ಯದಲ್ಲಿ (ಮಂಗಳವಾರ –ಏಪ್ರಿಲ್ 15) ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ 111 ರನ್ ಗಳಿಸಿ ಆಲೌಟ್ ಆಗಿತ್ತು. ಗುರಿ ಬೆನ್ನತ್ತಿದ ಕೆಕೆಆರ್ ಕೇವಲ 95 ರನ್ ಗಳಿಸಿ ಆಲೌಟ್ ಆಯಿತು.
2009ರಲ್ಲಿ ಡರ್ಬನ್‌ನಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 9 ವಿಕೆಟ್‌ಗೆ 116 ರನ್ ಗಳಿಸಿತ್ತು. ಈ ಗುರಿ ಎದುರು ಪಂಜಾಬ್ ಕಿಂಗ್ಸ್ 8 ವಿಕೆಟ್‌ಗೆ 92 ರನ್ ಗಳಿಸಲಷ್ಟೇ ಶಕ್ತವಾಗಿತ್ತು.
ಸನ್‌ರೈಸರ್ಸ್ ಹೈದರಾಬಾದ್ ತಂಡವು, 2018ರಲ್ಲಿ ಮುಂಬೈನಲ್ಲಿ ಆತಿಥೇಯ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ 118 ರನ್ ಗಳಿಸಿ ಆಲೌಟ್ ಆಗಿತ್ತು. ಆದಾಗ್ಯೂ, ಎದುರಾಳಿಯನ್ನು 87 ರನ್ ಗಳಿಗೆ ಕಟ್ಟಿಹಾಕಿ ಜಯ ಸಾಧಿಸಿತ್ತು.
2009ರಲ್ಲಿ ಡರ್ಬನ್‌ನಲ್ಲಿ ನಡೆದ ಪಂದ್ಯಲ್ಲಿ ಪಂಜಾಬ್ ಕಿಂಗ್ಸ್ 3 ರನ್ ಅಂತರದ ಜಯ ಸಾಧಿಸಿತ್ತು. ಆ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಕಿಂಗ್ಸ್ 8 ವಿಕೆಟ್‌ಗೆ 119 ರನ್ ಗಳಿಸಿದರೆ, ಮುಂಬೈ ಇಂಡಿಯನ್ಸ್ 7 ವಿಕೆಟ್‌ಗೆ 116 ರನ್ ಗಳಿಸಿ ಹೋರಾಟ ಮುಗಿಸಿತ್ತು.
2013ರಲ್ಲಿ ಪುಣೆಯಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಸನ್‌ರೈಸರ್ಸ್ ಹೈದರಾಬಾದ್ 8 ವಿಕೆಟ್‌ಗೆ 119 ರನ್ ಗಳಿಸಿತ್ತು. ಈ ಗುರಿ ಎದುರು ಆತಿಥೇಯ ಪುಣೆ ವಾರಿಯರ್ಸ್ 108 ರನ್ ಗಳಿಸಿ ಆಲೌಟ್ ಆಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.