ದಿಗ್ವೇಶ್ ರಾಠಿ
(ರಾಯಿಟರ್ಸ್ ಚಿತ್ರ)
ಬೆಂಗಳೂರು: 2025ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ 'ಟಿಕ್ ದಿ ನೋಟ್‌ಬುಕ್' ಸೆಲೆಬ್ರೇಷನ್ ಮೂಲಕ ಚರ್ಚೆಗೆ ಗ್ರಾಸವಾಗಿದ್ದ ಮಿಸ್ಟರಿ ಸ್ಪಿನ್ನರ್ ದಿಗ್ವೇಶ್ ರಾಠಿ ಮತ್ತೆ ಸುದ್ದಿಯಲ್ಲಿದ್ದಾರೆ.
ಐಪಿಎಲ್‌ನಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡವನ್ನು ದಿಗ್ವೇಶ್ ಪ್ರತಿನಿಧಿಸಿದ್ದರು. ಈಗ ಲಖನೌ ಫ್ರಾಂಚೈಸಿ ಅಧಿಕೃತ 'ಎಕ್ಸ್' ಖಾತೆಯಲ್ಲಿ ದಿಗ್ವೇಶ್ ಐದು ಎಸೆತಗಳಲ್ಲಿ ಐದು ವಿಕೆಟ್ ಪಡೆಯುತ್ತಿರುವ ವಿಡಿಯೊವನ್ನು ಹಂಚಿಕೊಂಡಿದೆ.
ಲಖನೌ ತಂಡದ ಮಾಲೀಕ ಸಂಜೀವ್ ಗೋಯೆಂಕಾ ಸಹ ಈ ವಿಡಿಯೊವನ್ನು ಹಂಚಿದ್ದಾರೆ.
ಇದು ಯಾವ ಪಂದ್ಯ ಎಂಬುದಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಆದರೆ ಐದು ವಿಕೆಟ್ ಗಳಿಸಿರುವ ದಿಗ್ವೇಶ್ ಸಾಧನೆಯನ್ನು ಗೋಯೆಂಕಾ ಕೊಂಡಾಡಿದ್ದಾರೆ.
ಸ್ಥಳೀಯ ಟಿ20 ಟೂರ್ನಿಯೊಂದರಲ್ಲಿ ದಿಗ್ವೇಶ್ ಸತತ ಐದು ಎಸೆತಗಳಲ್ಲಿ ಐದು ವಿಕೆಟ್ ಗಳಿಸಿದ್ದಾರೆ ಎಂದು ಗೋಯೆಂಕಾ ಉಲ್ಲೇಖಿಸಿದ್ದಾರೆ. ಒಟ್ಟಾರೆಯಾಗಿ ಪಂದ್ಯದಲ್ಲಿ ಏಳು ವಿಕೆಟ್‌ಗಳ ಸಾಧನೆ ಮಾಡಿದ್ದರು.
ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್ 18ನೇ ಆವೃತ್ತಿಗೂ ಮುನ್ನ ನಡೆದ ಹರಾಜಿನಲ್ಲಿ ₹30 ಲಕ್ಷ ನೀಡಿ ದಿಗ್ವೇಶ್ ಅವರನ್ನು ಲಖನೌ ಫ್ರಾಂಚೈಸಿ ಖರೀದಿಸಿತ್ತು.
ಮೊದಲ ಆವೃತ್ತಿಯಲ್ಲೇ ಗಮನಾರ್ಹ ಪ್ರದರ್ಶನ ನೀಡಿದ್ದ ದಿಗ್ವೇಶ್ 13 ಪಂದ್ಯಗಳಲ್ಲಿ ಒಟ್ಟು 14 ವಿಕೆಟ್ ಗಳಿಸಿದ್ದರು.
ಆದರೆ ವಿಕೆಟ್ ಪಡೆದಾಗ ನೋಟ್‌ಬುಕ್ ಸಂಭ್ರಮದಿಂದಾಗಿ ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿದ್ದರು. ಅಲ್ಲದೆ ಹಲವು ಬಾರಿ ದಂಡನೆಗೆ ಒಳಗಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.