ADVERTISEMENT

IPL ಮಿನಿ ಹರಾಜಿನಲ್ಲೂ RTM ಬಳಸಬಹುದಾ? ವಿದೇಶಿ ಆಟಗಾರರಿಗೂ ಗರಿಷ್ಠ ಮೊತ್ತ ನಿಗದಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಡಿಸೆಂಬರ್ 2025, 13:00 IST
Last Updated 15 ಡಿಸೆಂಬರ್ 2025, 13:00 IST
ಐಪಿಎಲ್ ಮಿನಿ ಹರಾಜು: ಆರ್‌ಸಿಬಿ ₹35.4 ಕೋಟಿ ಪರ್ಸ್ ಹೊಂದಿದೆ.
ಐಪಿಎಲ್ ಮಿನಿ ಹರಾಜು: ಆರ್‌ಸಿಬಿ ₹35.4 ಕೋಟಿ ಪರ್ಸ್ ಹೊಂದಿದೆ.   

ಇಂಡಿಯನ್ ಪ್ರೀಮಿಯರ್ ಲೀಗ್ 2026ನೇ ಸಾಲಿನ ಮಿನಿ ಹರಾಜು ನಾಳೆ (ಡಿಸೆಂಬರ್ 16) ನಡೆಯಲಿದೆ. ಅದಕ್ಕೂ ಮುನ್ನ ಎಲ್ಲಾ ಫ್ರಾಂಚೈಸಿಗಳು ಕೂಡ ಯಾವ ಆಟಗಾರರನ್ನು ಖರೀದಿಸಬೇಕು ಎಂಬ ನೀಲನಕ್ಷೆ ಸಿದ್ಧಪಡಿಸಿಕೊಂಡಿವೆ. ಈ ನಡುವೆ ಕಳೆದ ವರ್ಷ ಮೆಗಾ ಹರಾಜಿನಲ್ಲಿದ್ದ ಕೆಲವು ನಿಯಮಗಳು ಮಿನಿ ಹರಾಜಿನಲ್ಲಿ ಇರುವುದಿಲ್ಲ.

ರೈಟ್ ಟು ಮ್ಯಾಚ್ ಕಾರ್ಡ್ (RTM)

ಈ ಬಾರಿಯ ಮಿನಿ ಹರಾಜಿನಲ್ಲಿ ರೈಟ್ ಟು ಮ್ಯಾಚ್ ಕಾರ್ಡ್ ವಿಧಾನ ಇರುವುದಿಲ್ಲ. ಯಾವುದೇ ಆಟಗಾರನನ್ನು ಐಪಿಎಲ್ ಫ್ರಾಂಚೈಸಿಗಳು ನೇರವಾಗಿ ಬಿಡ್‌ನಲ್ಲಿ ಭಾಗವಹಿಸಿ ಖರೀದಿಸಬಹುದು. ಹೊರತುಪಡಿಸಿ, ಕಳೆದ ವರ್ಷದಂತೆ ಆಟಗಾರನೊಬ್ಬ ತಮ್ಮ ಫ್ರಾಂಚೈಸಿಯಲ್ಲಿ ಆಡಿದ್ದ ಮಾತ್ರಕ್ಕೆ ಆತನನ್ನು ತಂಡಕ್ಕೆ ಸೇರಿಸಿಕೊಳ್ಳುವ ಯಾವುದೇ ಅವಕಾಶ ಇರುವುದಿಲ್ಲ.

ADVERTISEMENT

ಏನಿದು ಆರ್‌ಟಿಎಂ ಕಾರ್ಡ್?

ಯಾವುದೇ ಒಬ್ಬ ಆಟಗಾರ ಕಳೆದ ವರ್ಷ ತಮ್ಮ ತಂಡದ ಪರ ಆಡಿದ್ದರೆ, ಬಿಡ್‌ನಲ್ಲಿ ಭಾಗವಹಿಸದೆ ಆತನನ್ನು ಬೇರೊಂದು ಫ್ರಾಂಚೈಸಿ ಅಧಿಕ ಮೊತ್ತದ ಹರಾಜು ಕೂಗಿದಾಗ ಈ ಆರ್‌ಟಿಎಂ ಕಾರ್ಡ್ ಬಳಕೆ ಮಾಡಬಹುದು. ಫ್ರಾಂಚೈಸಿ ತಮ್ಮ ಮಾಜಿ ಆಟಗಾರನನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳುವ ಆಸಕ್ತಿ ಇದ್ದರೆ, ಅದಕ್ಕಿಂತ ಅಧಿಕ ಮೊತ್ತ ನೀಡಿ ಅಥವಾ ಅಷ್ಟೇ ಹಣ ನೀಡಿ ಆಟಗಾರನನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳುವುದು.

ಸದ್ಯ, ಇದು ಮಿನಿ ಹರಾಜು ಆಗಿರುವುದರಿಂದ ಈ ನಿಯಮವನ್ನು ಫ್ರಾಂಚೈಸಿಗಳಿಗೆ ನೀಡಿಲ್ಲ. ಬದಲಾಗಿ ಯಾವುದೇ ಆಟಗಾರ ತಮ್ಮ ತಂಡಕ್ಕೆ ಅಗತ್ಯವಿದ್ದರೆ, ನೇರವಾಗಿ ಬಿಡ್‌ನಲ್ಲಿ ಭಾಗವಹಿಸುವ ಮೂಲಕ ಖರೀದಿಸಬಹುದಾಗಿದೆ.

ವಿದೇಶಿ ಆಟಗಾರನ ಗರಿಷ್ಠ ಮೊತ್ತದ ನಿಯಯ

ಯಾವುದೇ ವಿದೇಶಿ ಆಟಗಾರ ಮಿನಿ ಹರಾಜಿನಲ್ಲಿ ಅತ್ಯಧಿಕ ₹18 ಕೋಟಿ ಮಾತ್ರ ಪಡೆಯಬಹುದು. ಅದಕ್ಕಿಂತ ಅಧಿಕ ಹಣ ಪಡೆಯುವಂತಿಲ್ಲ ಎಂಬ ನಿಯಮ ತರಲಾಗಿದೆ. ಆದರೆ, ಬಿಡ್ ಬಂದಾಗ ಆ ಆಟಗಾರನಿಗೆ ಫ್ರಾಂಚೈಸಿ ಇನ್ನೂ ಅಧಿಕ ಮೊತ್ತ ನೀಡುವುದಾಗಿ ಬಿಡ್ ಕೂಗಬಹುದು. ಆದರೆ, ಆಟಗಾರ ಮಾತ್ರ ₹18 ಕೋಟಿ ಮಾತ್ರ ಪಡೆಯುತ್ತಾನೆ. ಉಳಿದ ಹಣವನ್ನು ಐಪಿಎಲ್ ಸಮಿತಿ ಆಟಗಾರರ ಶ್ರೇಯೋಭಿವೃದ್ಧಿಗೆ ವಿನಿಯೋಗ ಮಾಡಲಿದೆ.