ADVERTISEMENT

IPL, RCB vs PBKS |ಕ್ವಾಲಿಫೈಯರ್‌ ಇಂದು: ಫೈನಲ್ ಪ್ರವೇಶದತ್ತ ಬೆಂಗಳೂರು ಚಿತ್ತ

​ಪ್ರಜಾವಾಣಿ ವಾರ್ತೆ
Published 28 ಮೇ 2025, 23:30 IST
Last Updated 28 ಮೇ 2025, 23:30 IST
<div class="paragraphs"><p>ವಿರಾಟ್ ಕೊಹ್ಲಿ&nbsp;</p></div>

ವಿರಾಟ್ ಕೊಹ್ಲಿ 

   

ಮುಲ್ಲನಪುರ, ಚಂಡೀಗಡ: ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಹದಿನೆಂಟನೇ ಆವೃತ್ತಿಯ ಎರಡು ಸಮಬಲಶಾಲಿ ತಂಡಗಳಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್‌ ಗುರುವಾರ ನಡೆಯಲಿರುವ ಕ್ವಾಲಿಫೈಯರ್‌ನಲ್ಲಿ ಮುಖಾಮುಖಿಯಾಗಲಿವೆ. 

ಈ ಟೂರ್ನಿಯಲ್ಲಿ ಉಭಯ ತಂಡಗಳೂ ತಲಾ 19 ಅಂಕಗಳನ್ನು ಗಳಿಸಿವೆ. ಆದರೆ ನಿವ್ವಳ ರನ್‌ರೇಟ್‌ನಲ್ಲಿ ತುಸು ಹೆಚ್ಚಿನ ಸಾಧನೆ ಮಾಡಿರುವ ಆತಿಥೇಯ ಪಂಜಾಬ್ ಮೊದಲ ಹಾಗೂ ನಂತರದ ಸ್ಥಾನದಲ್ಲಿ ಬೆಂಗಳೂರು ಇದೆ. ತಲಾ 14 ಪಂದ್ಯಗಳನ್ನು ಆಡಿವೆ. ತಲಾ 4 ಸೋತು, 9ರಲ್ಲಿ ಜಯಿಸಿವೆ. ಮಳೆಯಿಂದ ಒಂದೊಂದು ಪಂದ್ಯ ರದ್ದಾಗಿವೆ. ಪಂಜಾಬ್ ಮತ್ತು ಆರ್‌ಸಿಬಿ ತಂಡಗಳು  ಲೀಗ್ ಹಂತದಲ್ಲಿ ಉಭಯ ತಂಡಗಳು ಎರಡು ಬಾರಿ ಮುಖಾಮುಖಿಯಾಗಿವೆ. ಶ್ರೇಯಸ್ ಅಯ್ಯರ್ ನಾಯಕತ್ವದ ಪಂಜಾಬ್ ತಂಡವು ಬೆಂಗಳೂರಿನಲ್ಲಿ ಮತ್ತು ರಜತ್ ಪಾಟೀದಾರ್ ಮುಂದಾಳತ್ವದ ಆರ್‌ಸಿಬಿಯು ಮುಲ್ಲನಪುರದಲ್ಲಿ ಜಯಿಸಿತ್ತು. 

ADVERTISEMENT

ಇನ್ನೊಂದು ವಿಶೇಷವೆಂದರೆ;  ಈ ಎರಡೂ ತಂಡಗಳೂ 2008ರಿಂದ ಐಪಿಎಲ್‌ನಲ್ಲಿ ಆಡುತ್ತಿವೆ. ಆದರೆ ಇದುವರೆಗೂ ಪ್ರಶಸ್ತಿ ಜಯಿಸಿಲ್ಲ. ಅದರಲ್ಲೂ ಕಿಂಗ್ಸ್ ತಂಡವು 11 ವರ್ಷಗಳ ನಂತರ ಕ್ವಾಲಿಫೈಯರ್ ಪ್ರವೇಶ ಗಿಟ್ಟಿಸಿದೆ. ಈ ತಂಡಗಳ ಸಾಮರ್ಥ್ಯ –ದೌರ್ಬಲ್ಯಗಳು ಇಲ್ಲಿವೆ;

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಾಮರ್ಥ್ಯ

  • ಬ್ಯಾಟಿಂಗ್‌ ವಿಭಾಗದಲ್ಲಿ ಸಂಘಟಿತ ಶಕ್ತಿ. ವಿರಾಟ್ ಕೊಹ್ಲಿ (602 ರನ್), ಫಿಲ್ ಸಾಲ್ಟ್ (331), ರಜತ್ ಪಾಟೀದಾರ್ (271), ಜಿತೇಶ್ ಶರ್ಮಾ (237) ಮತ್ತು ಟಿಮ್ ಡೇವಿಡ್ (187) ಅಮೋಘ ಲಯದಲ್ಲಿದ್ದಾರೆ.

  • ಪಂದ್ಯಗಳ ಗೆಲುವಿಗೆ ಕಾರಣರಾದ ಇಬ್ಬರು ಆಲ್‌ರೌಂಡರ್‌ಗಳು ಕೃಣಾಲ್ ಪಾಂಡ್ಯ (15 ವಿಕೆಟ್) ಮತ್ತು ರೊಮೆರಿಯೊ ಶೆಫರ್ಡ್‌. ಇವರೂ ಕೂಡ ಬ್ಯಾಟಿಂಗ್‌ ಮತ್ತು ಬೌಲಿಂಗ್‌ ಎರಡರಲ್ಲೂ ಮಿಂಚಿದವರು.

  • ಈ ಬಾರಿ ತಂಡವು ಕೇವಲ ಒಬ್ಬರು ಅಥವಾ ಇಬ್ಬರು ತಾರೆಗಳ ಮೇಲೆ ಅವಲಂಬಿತವಾಗಿಲ್ಲ. ಏಳನೇ ಕ್ರಮಾಂಕದ ಬ್ಯಾಟರ್‌ಗಳವರೆಗೂ ಉಪಯುಕ್ತ ಕಾಣಿಕೆ ನೀಡುತ್ತಿದ್ದಾರೆ. 

ದೌರ್ಬಲ್ಯಗಳು

  • ಬೌಲಿಂಗ್ ವಿಭಾಗದಲ್ಲಿ ಜೋಶ್ ಹ್ಯಾಜಲ್‌ವುಡ್ ತಂಡಕ್ಕೆ ಮರಳಿದ್ದಾರೆ. ಆದರೆ ಅವರು ಏಪ್ರಿಲ್ 27ರಂದು ಭುಜದ ಗಾಯದಿಂದ ಚಿಕಿತ್ಸೆಗೆ ತೆರಳಿದ್ದರು. ಅದರ ನಂತರ ಅವರು ಯಾವುದೇ ಪಂದ್ಯದಲ್ಲಿಯೂ ಆಡಿಲ್ಲ. ತಮ್ಮ ತವರು ಆಸ್ಟ್ರೇಲಿಯಾಕ್ಕೆ ಮರಳಿದ್ದ ಅವರು ಅಲ್ಲಿ ಚಿಕಿತ್ಸೆ ಪಡೆದು ಮರಳಿದ್ದಾರೆ. ಲೀಗ್ ಹಂತದ ಕೊನೆಯ ಪಂದ್ಯದಲ್ಲಿಯೂ ಅವರು ಆಡಲಿಲ್ಲ. ಆದ್ದರಿಂದ ಅವರ ಫಿಟ್‌ನೆಸ್‌ ಕುರಿತು ಯಾವುದೇ ಸ್ಪಷ್ಟ ಮಾಹಿತಿ ಇಲ್ಲ. 

  • ಭುವನೇಶ್ವರ್ ಕುಮಾರ್ ಮತ್ತು ಯಶ್ ದಯಾಳ್ ಅವರ ಫಾರ್ಮ್‌ನಲ್ಲಿ ಏರಿಳಿತಗಳಿವೆ. ಆದರೆ ಈ ಹಂತದಲ್ಲಿ ಅವರು ತಮ್ಮ ಪೂರ್ಣ ಸಾಮರ್ಥ್ಯ ವಿನಿಯೋಗಿಸುವ ಸವಾಲು ಇದೆ. ಸ್ಪಿನ್ ವಿಭಾಗದಲ್ಲಿ ಪಂದ್ಯ ಗೆಲ್ಲಿಸುವ ಸಮರ್ಥ ಬೌಲರ್‌ಗಳ ಕೊರತೆ ಇದೆ. ಕೃಣಾಲ್ ಪಾಂಡ್ಯ  ಒಬ್ಬರೇ ಒತ್ತಡ ನಿಭಾಯಿಸಬೇಕಿದೆ.

  • ಆರಂಭಿಕ ಬ್ಯಾಟರ್ ವಿರಾಟ್ ಕೊಹ್ಲಿ ಅವರ ಉತ್ತಮ ಬ್ಯಾಟಿಂಗ್‌ನಿಂದ ತಂಡಕ್ಕೆ ಹೆಚ್ಚು ಗೆಲುವುಗಳು ಸಾಧ್ಯವಾಗಿವೆ.  ಅವರು ಈ ಸಲ ಎಂಟು ಅರ್ಧಶತಕ ದಾಖಲಿಸಿದ್ದಾರೆ. ಆದರೆ ಆರ್‌ಸಿಬಿ ಸೋತಿರುವ ನಾಲ್ಕು ಪಂದ್ಯಗಳಲ್ಲಿಯೂ ಅವರು ಅರ್ಧಶತಕ ಹೊಡೆದಿಲ್ಲ. ಆದ್ದರಿಂದ ಪಂಜಾಬ್ ಬೌಲರ್‌ಗಳು ಅವರನ್ನು ಕಟ್ಟಿಹಾಕಲು ಹೆಚ್ಚು ಗಮನ ನೀಡುವ ಸಾಧ್ಯತೆ ಹೆಚ್ಚು

ಪಂಜಾಬ್ ಕಿಂಗ್ಸ್ ತಂಡದ ಸಾಮರ್ಥ್ಯ

  • ಅಗ್ರ ಕ್ರಮಾಂಕದ ಮೂವರು ಬ್ಯಾಟರ್‌ಗಳು ತಲಾ 400ಕ್ಕಿಂತ ಹೆಚ್ಚು ರನ್‌ಗಳನ್ನು ಗಳಿಸಿದ್ದಾರೆ. ನಾಯಕ ಶ್ರೇಯಸ್ ಅಯ್ಯರ್ (514 ರನ್), ಪ್ರಭಸಿಮ್ರನ್ ಸಿಂಗ್ (499) ಮತ್ತು ಪ್ರಿಯಾಂಶ್ ಆರ್ಯ (424) ಅವರು ಅಮೋಘ ಲಯದಲ್ಲಿದ್ದಾರೆ. 

  • ಮಧ್ಯಮಕ್ರಮಾಂಕದಲ್ಲಿ ನೆಹಲ್ ವದೇರಾ (298), ಶಶಾಂಕ್ ಸಿಂಗ್ (284) ಮತ್ತು ಜೋಶ್ ಇಂಗ್ಲಿಸ್ (197) ಅವರು ಕೂಡ ತಂಡದ ಬ್ಯಾಟಿಂಗ್‌ ವಿಭಾಗವನ್ನು ಬಲಾಢ್ಯಗೊಳಿಸಿದ್ದಾರೆ.

  • ತಂಡದ ಸ್ಪಿನ್ನರ್ ಯಜುವೇಂದ್ರ ಚಾಹಲ್  (14 ವಿಕೆಟ್) ಮತ್ತು ಹರಪ್ರೀತ್ ಬ್ರಾರ್ (10 ವಿಕೆಟ್) ಅಮೋಘ ಲಯದಲ್ಲಿದ್ದಾರೆ. ವೇಗಿ ಅರ್ಷದೀಪ್ ಸಿಂಗ್ ಕೂಡ ಉತ್ತಮ ಲಯದಲ್ಲಿದ್ದಾರೆ. 

ದೌರ್ಬಲ್ಯಗಳು

  • ಪಂಜಾಬ್ ತಂಡದಲ್ಲಿರುವ ಬಹುತೇಕ ಆಟಗಾರರಿಗೆ ಇದು ಮೊದಲ ಕ್ವಾಲಿಫೈಯರ್ ಪಂದ್ಯವಾಗಿದೆ. ತಂಡವು 11 ವರ್ಷಗಳ ನಂತರ ಪ್ಲೇಆಫ್‌ ಹಂತಕ್ಕೆ ಪ್ರವೇಶಿಸಿರುವುದು ಇದಕ್ಕೆ ಕಾರಣ. ಚಾಹಲ್, ಶ್ರೇಯಸ್ ಅವರಿಗೆ ಈ ಹಿಂದೆ ಪ್ಲೇಆಫ್‌ಗಳಲ್ಲಿ ಆಡಿದ ಅನುಭವ ಇದೆ. 

  • ಪಂಜಾಬ್ ಬೌಲರ್‌ಗಳು ವಿಕೆಟ್‌ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಓವರ್‌ಗೆ 8.5 ರನ್‌ಗಳನ್ನು ಬಿಟ್ಟುಕೊಟ್ಟು ದುಬಾರಿ ಕೂಡ ಆಗಿದ್ದಾರೆ. 

  • ಮುಲ್ಲನಪುರದಲ್ಲಿಯೇ ನಡೆದಿದ್ದ ಲೀಗ್ ಹಂತದ ಪಂದ್ಯದಲ್ಲಿ ಆರ್‌ಸಿಬಿಯು ಪಂಜಾಬ್ ತಂಡವನ್ನು ಸೋಲಿಸಿತ್ತು. 

ಪಿಚ್ ಹೇಗಿದೆ?‌

ಈ ಭಾಗದಲ್ಲಿ ಬೇಸಿಗೆಯ ಕಾವು ಜೋರಾಗಿದೆ. ಪಂದ್ಯ ನಡೆಯಲಿರುವ ದಿನ ಗರಿಷ್ಠ 38 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ ಎಂದು ಹವಾಮಾನ ಮನ್ಸೂಚನೆಗಳಿವೆ. ಈ ಕ್ರೀಡಾಂಗಣದಲ್ಲಿ ನಡೆದ ಕಳೆದೆರಡೂ ಪಂದ್ಯಗಳ ಮೂರು ಇನಿಂಗ್ಸ್‌ಗಳಲ್ಲಿ 200 ರನ್‌ಗಳಿಗಿಂತಲೂ ಹೆಚ್ಚಿನ ಮೊತ್ತಗಳು ದಾಖಲಾಗಿವೆ. ಆದ್ದರಿಂದ ಈ ಫಂದ್ಯದಲ್ಲಿಯೂ ರನ್‌ ಹೊಳೆ ಹರಿಯುವ ಎಲ್ಲ ಸಾಧ್ಯತೆಗಳೂ ಇವೆ.

ತಂಡಗಳು

ರಾಯಲ್ ಚಾಲೆಂಜರ್ಸ್ ಬೆಂಗಳೂರು: ರಜತ್ ಪಾಟೀದಾರ್ (ನಾಯಕ), ವಿರಾಟ್ ಕೊಹ್ಲಿ, ಫಿಲಿಪ್ ಸಾಲ್ಟ್, ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ, ಟಿಮ್ ಡೇವಿಡ್, ಕೃಣಾಲ್ ಪಾಂಡ್ಯ, ಲಿಯಾಮ್ ಲಿವಿಂಗ್‌ಸ್ಟೋನ್, ರೊಮೆರಿಯೊ ಶೆಫರ್ಡ್, ಭುವನೇಶ್ವರ್ ಕುಮಾರ್, ಜೇಕಬ್ ಬೆಥೆಲ್, ಸ್ವಪ್ನಿಲ್ ಸಿಂಗ್, ಜೋಶ್ ಹ್ಯಾಜಲ್‌ವುಡ್, ನುವಾನ ತುಷಾರ, ಯಶ್ ದಯಾಳ್, ಸುಯಶ್ ಶರ್ಮಾ, ಮನೋಜ್ ಭಾಂಡಗೆ, ಮಯಂಕ್ ಅಗರವಾಲ್, ಬ್ಲೆಸಿಂಗ್ ಮುಝರಬಾನಿ, ಟೀಪ್ ಸೀಫರ್ಟ್

ಪಂಜಾಬ್ ಕಿಂಗ್ಸ್: ಶ್ರೇಯಸ್ ಅಯ್ಯರ್ (ನಾಯಕ), ಪ್ರಿಯಾಂಶ್  ಆರ್ಯ, ಪ್ರಭಸಿಮ್ರನ್ ಸಿಂಗ್, ಜೋಶ್ ಇಂಗ್ಲಿಸ್, ಮಾರ್ಕಸ್ ಸ್ಟೊಯಿನಿಸ್, ಪ್ರವೀಣ ದುಬೆ, ಅಜ್ಮತ್‌ಉಲ್ಲಾ ಒಮರ್‌ಝೈ, ಶಶಾಂಕ್ ಸಿಂಗ್, ಯಜುವೇಂದ್ರ ಚಾಹಲ್, ಅರ್ಷದೀಪ್ ಸಿಂಗ್, ಝೇವಿಯರ್ ಬಾರ್ಟಲೆಟ್, ಕುಲದೀಪ್ ಸೇನ್, ವೈಶಾಖ ವಿಜಯಕುಮಾರ್,  ಯಶ್  ಠಾಕೂರ್, ಮಿಚೆಲ್ ಓವೆನ್, ಕೈಲ್ ಜೆಮಿಸನ್, ಮುಷೀರ್ ಖಾನ್, ನೆಹಲ್ ವದೇರಾ. 

ಬಲಾಬಲ

ಪಂದ್ಯ; 35

ಆರ್‌ಸಿಬಿ ಜಯ; 17

ಕಿಂಗ್ಸ್‌ ಜಯ; 18

ಮುಂಬರುವ ವಾರವು ನಮ್ಮ ತಂಡಕ್ಕೆ ಅತ್ಯಂತ ಸಂಭ್ರಮದ ಅವಧಿಯಾಗುವ ಸಂಭವವಿದೆ. ಅಷ್ಟೇ ಅಲ್ಲ. ಮಹತ್ವದ ಸಾಧನೆಯ ವಾರ ಇದಾಗಲಿದೆ. ನಮ್ಮ ಮನೋದಾರ್ಢ್ಯದ ಪಾತ್ರ ಮಹತ್ವದ್ದಾಗಲಿದೆ
–ಮೊ ಬೊಬಾಟ್, ಆರ್‌ಸಿಬಿ ನಿರ್ದೇಶಕ
ಇಲ್ಲಿಯವರೆಗೂ ನಮ್ಮ ತಂಡದ ಸಾಧನೆಯು ಅದ್ಭುತವಾಗಿದೆ. ಪಾಯಿಂಟ್‌ ಪಟ್ಟಿಯಲ್ಲಿ ಅಗ್ರ ಎರಡರಲ್ಲಿ ಸ್ಥಾನ ಪಡೆಯುವುದು ನಮ್ಮ ಗುರಿಯಾಗಿತ್ತು.ಆ ಸಾಧನೆಯನ್ನು ನಾವೆಲ್ಲರೂ ಮನತುಂಬಿ ಸಂಭ್ರಮಿಸಿದ್ದೇವೆ. ಮುಂಬರುವ ಸಮಯವೂ ಅದೇ ತರಹ ಇರಲಿದೆ
–ರಿಕಿ ಪಾಂಟಿಂಗ್‌, ಪಂಜಾಬ್ ಕಿಂಗ್ಸ್‌ ಮುಖ್ಯ ಕೋಚ್
ಪಂಜಾಬ್ ಕಿಂಗ್ಸ್‌ ತಂಡದ ನಾಯಕ ಶ್ರೇಯಸ್ ಅಯ್ಯರ್ ಮತ್ತು ಸಹಮಾಲೀಕರಾದ ಬಾಲಿವುಡ್ ತಾರೆ ಪ್ರೀತಿ ಜಿಂಟಾ  –ಪಿಟಿಐ ಚಿತ್ರ

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌, ಜಿಯೊ ಹಾಟ್‌ಸ್ಟಾರ್ ಆ್ಯಪ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.