ADVERTISEMENT

ಐಪಿಎಲ್‌ ‘ದಶಾವತಾರ’ ಇಂದಿನಿಂದ: ಅರಬ್ಬಿ ಅಲೆಗಳಲ್ಲಿ ಕ್ರಿಕೆಟ್ ಅಬ್ಬರ

ಮುಂಬೈ, ಪುಣೆಯಲ್ಲಿ ಪಂದ್ಯಗಳ ಆಯೋಜನೆ; ಹತ್ತು ತಂಡಗಳ ಹಣಾಹಣಿ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2022, 19:45 IST
Last Updated 25 ಮಾರ್ಚ್ 2022, 19:45 IST
ಇಂಡಿಯನ್ ಪ್ರೀಮಿಯರ್ ಲೀಗ್
ಇಂಡಿಯನ್ ಪ್ರೀಮಿಯರ್ ಲೀಗ್   

ಮುಂಬೈ: ಅರಬ್ಬಿ ಸಮುದ್ರಕ್ಕೆ ಹಲವು ನದಿಗಳು ಬಂದು ಸೇರುವ ಮಾದರಿಯಲ್ಲಿಯೇ ದೇಶ–ವಿದೇಶಗಳ ಕ್ರಿಕೆಟಿಗರು ಈ ಮಾಯಾನಗರಿಗೆ ಬಂದು ಸೇರಿದ್ದಾರೆ.

ಶನಿವಾರ ರಾತ್ರಿ ಶುರುವಾಗಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ–20 ಕ್ರಿಕೆಟ್ ಮೇಳದಲ್ಲಿ ತಮ್ಮ ಸಾಮರ್ಥ್ಯ ತೋರಲು ಸಿದ್ಧರಾಗಿದ್ದಾರೆ. ಕ್ರಿಕೆಟ್ ಜಗತ್ತಿನ ಅತ್ಯಂತ ಶ್ರೀಮಂತ ಲೀಗ್ ಟೂರ್ನಿ ಎರಡು ವರ್ಷಗಳ ನಂತರ ಭಾರತಕ್ಕೆ ಮರಳಿದೆ. ಅದರಿಂದಾಗಿಯೇ ಅಭಿಮಾನಿಗಳ ಉತ್ಸಾಹವೂ ಹೊಳೆಯಾಗಿ ಹರಿಯುವ ವಾತಾವರಣ ಸೃಷ್ಟಿಯಾಗಿದೆ.

ಕೋವಿಡ್ ಸೃಷ್ಟಿಸಿದ ಬಿಕ್ಕಟ್ಟಿನಿಂದಾಗಿ 2020ರಲ್ಲಿ ಟೂರ್ನಿಯು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆದಿತ್ತು. 2021ರ ಏಪ್ರಿಲ್‌ನಲ್ಲಿ ಭಾರತದ ನಡೆಯುತ್ತಿದ್ದ ಟೂರ್ನಿಯನ್ನು ಕೋವಿಡ್ ಎರಡನೇ ಅಲೆ ವ್ಯಾಪಿಸಿದ್ದ ಕಾರಣಕ್ಕಾಗಿ ಸ್ಥಗಿತಗೊಳಿಸಿ, ಉಳಿದ ಭಾಗವನ್ನು ಯುಎಇಯಲ್ಲಿ ಆಯೋಜಿಸಲಾಗಿತ್ತು. ಆದರೆ ಈ ವರ್ಷ ಪರಿಸ್ಥಿತಿ ತಿಳಿಯಾಗಿರುವುದರಿಂದ ಟೂರ್ನಿಯನ್ನು ಭಾರತದ ನೆಲದಲ್ಲಿಯೇ ಪೂರ್ತಿಗೊಳಿಸುವ ವಿಶ್ವಾಸದಲ್ಲಿ ಆಯೋಜಕರು ಇದ್ದಾರೆ. ಆದರೂ ಹಲವಾರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.

ADVERTISEMENT

ಬಯೋಬಬಲ್‌ನಲ್ಲಿ ಟೂರ್ನಿ
ತಂಡಗಳು ಊರಿಂದ ಊರಿಗೆ ಪ್ರಯಾಣಿಸುವುದನ್ನು ತಪ್ಪಿಸಲು ಮುಂಬೈನ ಮೂರು ಮತ್ತು ಪುಣೆಯ ಒಂದು ಕ್ರೀಡಾಂಗಣದಲ್ಲಿ ಲೀಗ್ ಹಂತದ ಎಲ್ಲ ಪಂದ್ಯಗಳನ್ನು ಆಯೋಜಿಸಲಾಗುತ್ತಿದೆ. ಆಟಗಾರರು ಅಭ್ಯಾಸ ಅಥವಾ ಪಂದ್ಯಗಳಲ್ಲಿ ಆಡಲು ಇಳಿಯುವ ಮುನ್ನ ಮೂರು ದಿನಗಳ ಕಡ್ಡಾಯ ಕ್ವಾರಂಟೈನ್ ಪಾಲಿಸಬೇಕು. ಆರ್‌ಟಿ ಪಿಸಿಆರ್ ಟೆಸ್ಟ್‌ಗೆ ಒಳಪಡುವುದೂ ಕಡ್ಡಾಯ. ಪ್ರತಿ ಐದು ದಿನಗಳಿಗೊಮ್ಮೆ ಪರೀಕ್ಷೆ ನಡೆಸಲಾಗುತ್ತಿದೆ. ತಂಡಗಳು ತಂಗಿರುವ ಹೋಟೆಲ್‌ಗಳಲ್ಲಿ ಅವರಿಗೆ ಪ್ರತ್ಯೇಕ ಹಾದಿ ಮತ್ತು ಕೋಣೆಗಳ ವ್ಯವಸ್ಥೆ ಮಾಡಲಾಗಿದೆ. ಕಾರ್ಯನಿರ್ವಹಿಸುವ ಸಿಬ್ಬಂದಿಗೂ ಬಯೋಬಬಲ್ ನಿಯಮ ಅನ್ವಯವಾಗಲಿದೆ.

ಕ್ರೀಡಾಂಗಣಗಳ ಆಸನ ಸಾಮರ್ಥ್ಯದ ಶೇ 25ರಷ್ಟು ಪ್ರೇಕ್ಷಕರಿಗೆ ಅವಕಾಶ ಕಲ್ಪಿಸಲಾಗಿದೆ.ಈ ಬಾರಿಯ ಟೂರ್ನಿಯಲ್ಲಿ ಬದಲಾವಣೆಯ ಗಾಳಿ ಬೀಸಿದೆ. ಮಹೇಂದ್ರಸಿಂಗ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವವನ್ನು ರವೀಂದ್ರ ಜಡೇಜಗೆ ಹಸ್ತಾಂತರಿಸಿದ್ದಾರೆ. ಕಳೆದ 12 ವರ್ಷಗಳಿಂದ ಅವರು ಈ ತಂಡವನ್ನು ಮುನ್ನಡೆಸಿದ್ದರು. ಬಳಗವು ನಾಲ್ಕು ಬಾರಿ ಚಾಂಪಿಯನ್ ಆಗಿತ್ತು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವವನ್ನು ವಿರಾಟ್ ಕೊಹ್ಲಿ ಬಿಟ್ಟುಕೊಟ್ಟಿದ್ದಾರೆ. ದಕ್ಷಿಣ ಆಫ್ರಿಕಾದ ಫಫ್ ಡುಪ್ಲೆಸಿ ಈ ತಂಡದ ಸಾರಥಿಯಾಗಿದ್ದಾರೆ.

ಭಾರತ ಕ್ರಿಕೆಟ್ ತಂಡದ ಭವಿಷ್ಯದ ಭರವಸೆಯ ತಾರೆಗಳಾಗಿರುವ ಕೆ.ಎಲ್. ರಾಹುಲ್, ರಿಷಭ್ ಪಂತ್, ಶ್ರೇಯಸ್ ಅಯ್ಯರ್, ಆರಂಭಿಕ ಬ್ಯಾಟರ್ ಮಯಂಕ್ ಅಗರವಾಲ್, ಹಾರ್ದಿಕ್ ಪಾಂಡ್ಯ ಮತ್ತು ಸಂಜು ಸ್ಯಾಮ್ಸನ್ ಅವರ ಸತ್ವಪರೀಕ್ಷೆಗೂ ಈ ಟೂರ್ನಿ ವೇದಿಕೆಯಾಗಲಿದೆ. ಮುಂಬೈ ತಂಡದ ರೋಹಿತ್ ಶರ್ಮಾ ಮತ್ತು ಸನ್‌ರೈಸರ್ಸ್ ಕೆನ್ ವಿಲಿಯಮ್ಸನ್ ಅವರಿಬ್ಬರೇ ಈಗ ಉಳಿದೆಲ್ಲ ತಂಡಗಳ ನಾಯಕರಿಗಿಂತಲೂ ಹೆಚ್ಚು ಅನುಭವಿಗಳಾಗಿದ್ದಾರೆ. ಯುವಶಕ್ತಿಯ ಸವಾಲನ್ನು ಅವರು ಹೇಗೆ ಎದುರಿಸುವರೆಂಬ ಕುತೂಹಲ ಗರಿಗೆದರಿದೆ.

ಕಾಮೆಂಟ್ರಿ ಬಾಕ್ಸ್‌ನಲ್ಲಿ ಕನ್ನಡಿಗರು
ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರರಾದ ವೆಂಕಟೇಶ್ ಪ್ರಸಾದ್ ಮತ್ತು ವಿಜಯ್ ಭಾರದ್ವಾಜ್ ಐಪಿಎಲ್ ಕನ್ನಡ ವೀಕ್ಷಕ ವಿವರಣೆಗಾರರಾಗಿ ಕಾರ್ಯನಿರ್ವಹಿಸುವರು. ಸ್ಟಾರ್ ಸ್ಪೋರ್ಟ್ಸ್ ಕನ್ನಡ ವಾಹಿನಿಯಲ್ಲಿ ಮಹಿಳಾ ತಂಡದ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಕೂಡ ಕಾಣಿಸಿಕೊಳ್ಳುವರು.

ಇವರೊಂದಿಗೆ ಮಧು ಮೈಲಂಕೋಡಿ, ರೀನಾ ಡಿಸೋಜಾ, ಕಿರಣ ಶ್ರೀನಿವಾಸ, ಸುಮೇಶ್ ಗೋಣಿ, ಪಿ. ಶ್ರೀನಿವಾಸಮೂರ್ತಿ, ಭರತ್ ಚಿಪ್ಲಿ, ಅಖಿಲ್ ಬಾಲಚಂದ್ರ, ಪವನ್ ದೇಶಪಾಂಡೆ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.