
ಶ್ರೀಲಂಕಾ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡದ ಆಟಗಾರರು
– ಎಕ್ಸ್ ಚಿತ್ರ
ಕೊಲಂಬೊ / ರಾವಲ್ಪಿಂಡಿ: ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಆಡಲು ಪಾಕಿಸ್ತಾನ ಪ್ರವಾಸದಲ್ಲಿರುವ ಶ್ರೀಲಂಕಾದ ಆಟಗಾರರು, ಇಸ್ಲಾಮಾಬಾದ್‌ನಲ್ಲಿ ನಡೆದ ಭೀಕರ ಬಾಂಬ್ ಸ್ಫೋಟದ ಬಳಿಕ ತವರಿಗೆ ಮರಳಲು ನಿರ್ಧರಿಸಿದ್ದಾರೆ.
ಆದರೆ ಸರಣಿ ಮುಂದುವರಿಯಲಿದ್ದು, ಪಂದ್ಯಗಳನ್ನು ಮರುನಿಗದಿ ಮಾಡಲಾಗುವುದು ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಹೇಳಿದ್ದಾರೆ.
ಸರಣಿಯ ಎಡರನೇ ಪಂದ್ಯ ಗುರುವಾರ (ನವೆಂಬರ್ 14 ರಂದು) ರಾವಲ್ಪಿಂಡಿಯಲ್ಲಿ ನಿಗದಿಯಾಗಿತ್ತು. ಅದನ್ನು ಶುಕ್ರವಾರಕ್ಕೆ ಮುಂದೂಡಲಾಗಿದೆ. ನವೆಂಬರ್ 15ರ ಪಂದ್ಯ 16ಕ್ಕೆ ಮರುನಿಗದಿ ಮಾಡಲಾಗಿದೆ. ಎರಡೂ ಪಂದ್ಯಗಳೂ ರಾವಲ್ಪಿಂಡಿಯಲ್ಲೇ ನಡೆಯಲಿದೆ.
ಸರಣಿಗೆ 16 ಸದಸ್ಯರ ತಂಡವನ್ನು ಶ್ರೀಲಂಕಾ ಕಳುಹಿಸಿದ್ದು, ಈ ಪೈಕಿ 8 ಆಟಗಾರರು ಕೊಲಂಬೊಗೆ ಮರಳುವುದಾಗಿ ಹೇಳಿದ್ದಾರೆ.
ಆದರೆ ಸರಣಿ ಪೂರ್ಣಗೊಳಿಸುವಂತೆ ಶ್ರೀಲಂಕಾ ಕ್ರಿಕೆಟ್ ಮಂಡಳಿ ಆಟಗಾರರಿಗೆ ಸೂಚಿಸಿದೆ.
‘ಬೆಳವಣಿಗೆ ಬೆನ್ನಲ್ಲೇ ಶ್ರೀಲಂಕಾ ಕ್ರಿಕೆಟ್ ಮಂಡಳಿ ಆಟಗಾರರೊಂದಿಗೆ ಮಾತುಕತೆ ನಡೆಸಿದ್ದು, ಅವರ ಆತಂಕಗಳನ್ನು ಪಿಸಿಬಿ ಜೊತೆ ಹಂಚಿಕೊಳ್ಳಲಾಗುವುದು. ಪ್ರವಾಸದಲ್ಲಿರುವ ತಂಡ ಪ್ರತಿಯೊಬ್ಬ ಸದಸ್ಯನ ಸುರಕ್ಷತೆ ಮತ್ತು ಯೋಗ ಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಸಂಬಂಧಿತ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗುವುದು’ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
‘ಪಾಕಿಸ್ತಾನ ಪ್ರವಾಸವನ್ನು ಮುಂದುವರಿಸಲು ನಿರ್ಧರಿಸಿರುವ ಶ್ರೀಲಂಕಾ ತಂಡದ ನಿರ್ಧಾರಕ್ಕೆ ಆಭಾರಿ. ಉಭಯ ತಂಡಗಳ ನಡುವಿನ ಮುಂದಿನ ಎರಡು ಪಂದ್ಯಗಳು ನವೆಂಬರ್ 14 ಹಾಗೂ 16ರಂದು ನಡೆಯಲಿದೆ’ ಎಂದು ಪಿಸಿಬಿ ಮುಖ್ಯಸ್ಥ ನಖ್ವಿ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ತವರಿಗೆ ಮರಳಲು ಬಯಸುವವರ ಬದಲಿಗೆ ಬೇರೆ ಆಟಗಾರರನ್ನು ಕಳುಹಿಸಲಾಗುವುದು ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ಹೇಳಿದೆ.
‘ಪ್ರವಾಸ ಮುಂದುವರಿಸಿ ಎನ್ನುವ ಶ್ರೀಲಂಕಾ ಕ್ರಿಕೆಟ್‌ನ ನಿರ್ದೇಶನದ ಹೊರತಾಗಿಯೂ, ಯಾರಾದರೊಬ್ಬ ಆಟಗಾರ ಮರಳಲು ಬಯಸಿದರೆ, ಪ್ರವಾಸ ನಿರಾಂತಂಕವಾಗಿ ಮುಂದುವರಿಯುವುನ್ನು ಖಚಿತ ಪಡಿಸಿಕೊಳ್ಳಲು ಅವರ ಬದಲಿಗೆ ಬೇರೊಬ್ಬ ಆಟಗಾರರನ್ನು ತಕ್ಷಣವೇ ಕಳಹಿಸಲಿದ್ದೇವೆ’ ಎಂದು ಶ್ರೀಲಂಕಾ ಕ್ರಿಕೆಟ್ ಹೇಳಿದೆ.
‘ನಮ್ಮ ನಿರ್ದೇಶನದ ಹೊರತಾಗಿಯೂ ಆಟಗಾರರು ಅಥವಾ ಸಹಾಯಕ ಸಿಬ್ಬಂದಿ ಮರಳಿದರೆ, ಅವರ ನಿರ್ಧಾರವನ್ನು ಔಪಚಾರಿಕವಾಗಿ ಪರಿಶೀಲನೆ ನಡೆಸಿ, ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತದೆ’ ಎಂದು ಹೇಳಿದೆ.
ಪಂದ್ಯ ನಡೆಯುವ ರಾವಲ್ಪಿಂಡಿ ನಗರವು ಇಸ್ಲಾಮಾಬಾದ್‌ಗೆ ಸಮೀಪ ಇರುವುದರಿಂದ ಶ್ರೀಲಂಕಾ ಆಟಗಾರರಲ್ಲಿ ಭಯ ಮನೆ ಮಾಡಿದೆ. ಏತನ್ಮಧ್ಯೆ ಉಭಯ ನಗರಗಳಲ್ಲೂ ಭದ್ರತೆ ಹೆಚ್ಚಿಸಲಾಗಿದೆ.
ಮೂರು ಪಂದ್ಯಗಳ ಏಕದಿನ ಸರಣಿಗೆ ಶ್ರೀಲಂಕಾ ತಂಡವು ಪಾಕಿಸ್ತಾನಕ್ಕೆ ತೆರಳಿದ್ದು, ಮಂಗಳವಾರ ಮೊದಲ ಪಂದ್ಯದಲ್ಲಿ ಪಾಕಿಸ್ತಾನ 6 ರನ್‌ಗಳಿಂದ ಗೆಲುವು ಸಾಧಿಸಿತ್ತು.
ಈ ಸರಣಿಯ ಬೆನ್ನಲ್ಲೇ, ಪಾಕಿಸ್ತಾನ–ಶ್ರೀಲಂಕಾ ಹಾಗೂ ಜಿಂಬಾಬ್ವೆ ನಡುವೆ ತ್ರಿಕೋನ ಸರಣಿ ಕೂಡ ನಿಗದಿಯಾಗಿದೆ.
ಇಸ್ಲಾಮಾಬಾದ್‌ನ ನ್ಯಾಯಾಂಗ ಸಂಕೀರ್ಣದ ಸಮೀಪ ಮಂಗಳವಾರ ಆತ್ಮಾಹುತಿ ಬಾಂಬರ್ ನಡೆಸಿದ ಸ್ಫೋಟದಲ್ಲಿ 12 ಮಂದಿ ಸಾವಿಗೀಡಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.