ADVERTISEMENT

ಸಿದ್ಧತೆಗೆ ಅವಕಾಶ ಸಿಗದಿದ್ದರೆ ವಿಶ್ವಕಪ್‌‌ ಮುಂದೂಡಿ: ಜೇಸನ್‌ ರಾಯ್‌ ಅಭಿಪ್ರಾಯ

ಇಂಗ್ಲೆಂಡ್‌ ಕ್ರಿಕೆಟಿಗ

ಪಿಟಿಐ
Published 4 ಮೇ 2020, 19:30 IST
Last Updated 4 ಮೇ 2020, 19:30 IST
ಜೇಸನ್‌ ರಾಯ್‌ 
ಜೇಸನ್‌ ರಾಯ್‌    

ಲಂಡನ್‌: ‘ಟ್ವೆಂಟಿ–20 ವಿಶ್ವಕಪ್‌ಗೆ ಸಿದ್ಧತೆ ಕೈಗೊಳ್ಳಲು ಎಲ್ಲಾ ತಂಡಗಳಿಗೂ ಸಾಕಷ್ಟು ಸಮಯ ಸಿಗದಿದ್ದರೆ ಟೂರ್ನಿಯನ್ನು ಮುಂದೂಡುವುದು ಸೂಕ್ತ’ ಎಂದು ಇಂಗ್ಲೆಂಡ್ ಕ್ರಿಕೆಟ್‌ ತಂಡದ ಆಟಗಾರ ಜೇಸನ್‌ ರಾಯ್‌ ಅಭಿಪ್ರಾಯಪಟ್ಟಿದ್ದಾರೆ.

ವಿಶ್ವಕಪ್‌ ಟೂರ್ನಿ ಈ ವರ್ಷದ ಅಕ್ಟೋಬರ್‌ ಹಾಗೂ ನವೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಿಗದಿಯಾಗಿದೆ. ಕೊರೊನಾ ಮಹಾಮಾರಿಯ ಅಟ್ಟಹಾಸ ಹೆಚ್ಚುತ್ತಿರುವ ಕಾರಣ ಟೂರ್ನಿಯನ್ನು ಖಾಲಿ ಕ್ರೀಡಾಂಗಣದಲ್ಲಿ ನಡೆಸಲು ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಹಾಗೂ ಕ್ರಿಕೆಟ್‌ ಆಸ್ಟ್ರೇಲಿಯಾ (ಸಿಎ) ಚಿಂತಿಸುತ್ತಿವೆ.ಇದಕ್ಕೆ ಹಲವರು ವಿರೋಧ ವ್ಯಕ್ತಪಡಿಸಿದ್ದು ಟೂರ್ನಿಯನ್ನು ಮುಂದೂಡುವಂತೆ ಒತ್ತಾಯಿಸಿದ್ದಾರೆ.

‘ಆಟಗಾರರ ಸಿದ್ಧತೆಗೆ ಸಮಯವೇ ಸಿಗದೆ ಹೋದರೆ ವಿಶ್ವಕಪ್‌ ನಡೆಸಿ ಪ್ರಯೋಜನವಿಲ್ಲ. ಅಂತಹ ಪರಿಸ್ಥಿತಿ ಎದುರಾದರೆ ಟೂರ್ನಿಯನ್ನು ಮುಂದಕ್ಕೆ ಹಾಕುವುದೇ ಒಳಿತು’ ಎಂದಿದ್ದಾರೆ.

ADVERTISEMENT

‘ನಿಗದಿತ ವೇಳಾಪಟ್ಟಿಯ ಪ್ರಕಾರವೇ ಟೂರ್ನಿ ನಡೆಯುತ್ತದೆ ಎಂದಾದರೆ ಅದಕ್ಕೂ ನಾವು ಸಿದ್ಧರಾಗಿದ್ದೇವೆ. ಕ್ರಿಕೆಟ್‌ ಆಡುವುದೇ ನಮ್ಮ ಕೆಲಸ. ಸಿದ್ಧತೆಗೆ ಕೇವಲ ಮೂರು ವಾರ ಸಮಯ ಕೊಟ್ಟರೂ ನಾವು ಆ ಅವಧಿಯಲ್ಲಿ ಸಾಧ್ಯವಾದಷ್ಟು ತಯಾರಿ ಮಾಡಿಕೊಳ್ಳಲೇಬೇಕಾಗುತ್ತದೆ. ಅದು ಅನಿವಾರ್ಯ ಕೂಡ’ ಎಂದು 29 ವರ್ಷ ವಯಸ್ಸಿನ ಆರಂಭಿಕ ಬ್ಯಾಟ್ಸ್‌ಮನ್‌ ಜೇಸನ್‌‌ ನುಡಿದಿದ್ದಾರೆ.

‘ಅಂಗಳಕ್ಕಿಳಿಯಲು ಆಟಗಾರರೆಲ್ಲಾ ತುದಿಗಾಲಿನಲ್ಲಿ ನಿಂತಿದ್ದಾರೆ. ಕ್ರಿಕೆಟ್‌ ಮಂಡಳಿಗಳು ಹಸಿರು ನಿಶಾನೆ ತೋರಿದ ಕೂಡಲೇ ನೆಟ್ಸ್‌ನಲ್ಲಿ ಅಭ್ಯಾಸ ಶುರುಮಾಡಿಬಿಡುತ್ತಾರೆ’ ಎಂದು ತಿಳಿಸಿದ್ದಾರೆ.

‘ಹೇಗಾದರೂ ಸರಿ ಮೈದಾನದಲ್ಲಿ ಪಂದ್ಯಗಳನ್ನು ಆಡಬೇಕು. ಆಸ್ಟ್ರೇಲಿಯಾಕ್ಕೆ ಹೋಗಿ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುವುದು ವಿಶಿಷ್ಟ ಅನುಭವ. ಖಾಲಿ ಕ್ರೀಡಾಂಗಣದಲ್ಲಿ ಟೂರ್ನಿ ನಡೆದರೂ ಆಡಲು ನಾನು ಸಿದ್ಧನಿದ್ದೇನೆ’ ಎಂದು ಹೇಳಿದ್ದಾರೆ.

ಕೊರೊನಾ ವೈರಾಣುವಿನ ಉಪಟಳದಿಂದಾಗಿ ಆಂಗ್ಲರ ನಾಡಿನಲ್ಲೂ ಕ್ರಿಕೆಟ್‌ ಚಟುವಟಿಕೆಗಳು ಸ್ತಬ್ಧಗೊಂಡಿವೆ.

ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿಯು (ಇಸಿಬಿ) ಜುಲೈ ಒಂದರವರೆಗೆ ಯಾವುದೇ ಟೂರ್ನಿಗಳನ್ನು ನಡೆಸದಿರಲು ತೀರ್ಮಾನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.