ADVERTISEMENT

ಇಂಗ್ಲೆಂಡ್ ವಿರುದ್ಧ ಹೊಸ ಅಸ್ತ್ರ ಪ್ರಯೋಗಿಸಲಿರುವ ಜಸ್‌ಪ್ರೀತ್ ಬೂಮ್ರಾ!

ಜಂಬೋ ಶೈಲಿಯಲ್ಲಿ ಲೆಗ್ ಸ್ಪಿನ್ ದಾಳಿ ನಡೆಸಿ ಹೃದಯ ಗೆದ್ದ ಬೂಮ್ರಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಜನವರಿ 2021, 13:02 IST
Last Updated 30 ಜನವರಿ 2021, 13:02 IST
ಜಸ್‌ಪ್ರೀತ್ ಬೂಮ್ರಾ (ಸಂಗ್ರಹ ಚಿತ್ರ)
ಜಸ್‌ಪ್ರೀತ್ ಬೂಮ್ರಾ (ಸಂಗ್ರಹ ಚಿತ್ರ)   

ಮುಂಬೈ: ಭಾರತ ಕ್ರಿಕೆಟ್ ತಂಡದ ಬಲಗೈ ವೇಗದ ಬೌಲರ್ ಜಸ್‌ಪ್ರೀತ್ ಬೂಮ್ರಾ ಅವರು ಜಂಬೋ ಖ್ಯಾತಿಯ ಮಾಜಿ ಲೆಗ್ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ ಶೈಲಿಯಲ್ಲಿ ಬೌಲಿಂಗ್ ಮಾಡುವ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.

ನಿಮಗೆಲ್ಲರಿಗೂ ತಿಳಿದಿರುವಂತೆಯೇ ಗಾಯದ ಸಮಸ್ಯೆಯಿಂದಾಗಿ ಆಸ್ಟ್ರೇಲಿಯಾ ವಿರುದ್ಧ ಗಾಬಾದಲ್ಲಿ ನಡೆದ ಅಂತಿಮ ಟೆಸ್ಟ್ ಪಂದ್ಯಕ್ಕೆ ಜಸ್‌ಪ್ರೀತ್ ಬೂಮ್ರಾ ಅಲಭ್ಯವಾಗಿದ್ದರು. ಬೂಮ್ರಾ ಅನುಪಸ್ಥಿತಿಯಲ್ಲೂ ಗಾಬಾ ಭದ್ರಕೋಟೆ ಮುರಿದಿದ್ದ ಭಾರತ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು 2-1ರ ಅಂತರದಲ್ಲಿ ಮಣಿಸಿ ಐತಿಹಾಸಿಕ ಟೆಸ್ಟ್ ಸರಣಿ ಗೆಲುವು ದಾಖಲಿಸಿತ್ತು. ಕಳೆದ 32 ವರ್ಷಗಳಲ್ಲೇ ಆಸೀಸ್ ಗಾಬಾದಲ್ಲಿ ಎದುರಿಸಿದ ಮೊದಲ ಸೋಲು ಇದಾಗಿತ್ತು.

ಈಗ ತವರಿಗೆ ಮರಳಿರುವ ಟೀಮ್ ಇಂಡಿಯಾ ಮುಂಬರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಸಜ್ಜಾಗುತ್ತಿದೆ. ಭಾರತ ತಂಡದ ಮುಂಚೂಣಿಯ ವೇಗದ ಬೌಲರ್ ಆಗಿರುವ ಜಸ್‌ಪ್ರೀತ್ ಬೂಮ್ರಾ, ಫಿಟ್ನೆಸ್ ಮರಳಿ ಪಡೆದು ತಂಡಕ್ಕೆ ಭರ್ಜರಿ ಪುನರಾಗಮನವನ್ನು ಎದುರು ನೋಡುತ್ತಿದ್ದಾರೆ.

ADVERTISEMENT

ಇದರಂತೆ ನೆಟ್ಸ್‌ನಲ್ಲಿ ಅಭ್ಯಾಸ ನಡೆಸುತ್ತಿರುವ ವೇಳೆ ಕರ್ನಾಟಕದ ಮಾಜಿ ದಿಗ್ಗಜ ಅನಿಲ್ ಕುಂಬ್ಳೆ ಬೌಲಿಂಗ್ ಶೈಲಿಯನ್ನು ಅನುಕರಿಸಿದ್ದಾರೆ. ಕುಂಬ್ಳೆ ಶೈಲಿಯಲ್ಲಿ ವೈವಿಧ್ಯಮಯ ಬೌಲಿಂಗ್ ಕೌಶಲ್ಯವನ್ನು ಪ್ರದರ್ಶಿಸಿದ ಬೂಮ್ರಾ, ಇಂಗ್ಲೆಂಡ್ ಸರಣಿಯಲ್ಲಿ ಅಗತ್ಯವೆನಿಸಿದರೆ ಮಗದೊಂದು ಅಸ್ತ್ರ ಪ್ರಯೋಗಿಸಲು ಸಿದ್ದವಾಗಿದ್ದೇನೆ ಎಂಬ ಸಂದೇಶ ನೀಡಿದ್ದಾರೆ.

'ಯಾರ್ಕರ್ ಸ್ಟಾರ್' ಎಂದೇ ಪ್ರಸಿದ್ಧಿ ಪಡೆದಿರುವ ಬೂಮ್ರಾ ಲೆಗ್ ಸ್ಪಿನ್ ಬೌಲಿಂಗ್ ಮಾಡಿರುವುದು ಅಭಿಮಾನಿಗಳಲ್ಲೂ ಕುತೂಹಲ ಮೂಡಿಸಿದೆ. ಪ್ರಸ್ತುತ ವಿಡಿಯೊವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಅನಿಲ್ ಕುಂಬ್ಳೆ ಹಾಗೂ ಜಸ್‌ಪ್ರೀತ್ ಬೂಮ್ರಾ ಬೌಲಿಂಗ್ ಮಿಶ್ರಣದ ವಿಡಿಯೊ ತುಣುಕನ್ನು ಅಭಿಮಾನಿಗಳಿಗಾಗಿ ಹಂಚಿದೆ.

ಭಾರತದ ಅತ್ಯಂತ ಯಶಸ್ವಿ ಬೌಲರ್ ಆಗಿರುವ ಅನಿಲ್ ಕುಂಬ್ಳೆ, ಟೆಸ್ಟ್ ಕ್ರಿಕೆಟ್‌ನಲ್ಲಿ 619 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದರೊಂದಿಗೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಅತಿ ಹೆಚ್ಚು ವಿಕೆಟ್ ಗಳಿಸಿದ ಬೌಲರ್‌ಗಳ ಪೈಕಿ ಶ್ರೀಲಂಕಾದ ಮಾಜಿ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ (800) ಹಾಗೂ ಆಸ್ಟ್ರೇಲಿಯಾದ ಮಾಜಿ ಲೆಗ್ ಸ್ಪಿನ್ ದಿಗ್ಗಜ ಶೇನ್ ವಾರ್ನ್ (708) ಬಳಿಕ ಮೂರನೇ ಸ್ಥಾನದಲ್ಲಿದ್ದಾರೆ.

ಕುಂಬ್ಳೆಗೆ ನಿಕಟ ಪೈಪೋಟಿ ಒಡ್ಡುತ್ತಿರುವ ಸಮಕಾಲೀನ ವೇಗದ ಬೌಲರ್ ಇಂಗ್ಲೆಂಡ್‌ನ ಜೇಮ್ಸ್ ಆಂಡ್ರೆಸನ್ 606 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಭಾರತ ವಿರುದ್ಧ ಸಾಗಲಿರುವ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಂಡ್ರೆಸನ್ ಸಹ ಭಾಗವಹಿಸುತ್ತಿದ್ದಾರೆ ಎಂಬುದು ಇಲ್ಲಿ ಗಮನಾರ್ಹವೆನಿಸುತ್ತದೆ.

ಅಂದ ಹಾಗೆ ಭಾರತ ಹಾಗೂ ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿಯ ಮೊದಲ ಪಂದ್ಯವು ಚೆನ್ನೈನಲ್ಲಿ ಫೆಬ್ರವರಿ 5ರಂದು ಆರಂಭವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.