ADVERTISEMENT

ಶ್ರೇಷ್ಠ ತಯಾರಿಯನ್ನೇ ನಡೆಸುತ್ತೇನೆ: ಟೀಕಾಕಾರರಿಗೆ ಬೂಮ್ರಾ ತಿರುಗೇಟು

ಪಿಟಿಐ
Published 23 ಜೂನ್ 2025, 3:01 IST
Last Updated 23 ಜೂನ್ 2025, 3:01 IST
<div class="paragraphs"><p>ಜಸ್‌ಪ್ರೀತ್ ಬೂಮ್ರಾ</p></div>

ಜಸ್‌ಪ್ರೀತ್ ಬೂಮ್ರಾ

   

(ರಾಯಿಟರ್ಸ್ ಚಿತ್ರ)

ಲೀಡ್ಸ್: ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಐದು ವಿಕೆಟ್‌ಗಳ ಸಾಧನೆ ಮಾಡಿರುವ ಟೀಮ್ ಇಂಡಿಯಾದ ಅಗ್ರಮಾನ್ಯ ಬೌಲರ್ ಜಸ್‌ಪ್ರೀತ್ ಬೂಮ್ರಾ, ಪ್ರತಿಯೊಂದು ಪಂದ್ಯದಲ್ಲೂ ಶ್ರೇಷ್ಠ ತಯಾರಿಯನ್ನೇ ನಡೆಸುತ್ತೇನೆ ಎಂದು ಹೇಳಿದ್ದಾರೆ.

ADVERTISEMENT

ಅಸಂಪ್ರದಾಯಿಕ ಬೌಲಿಂಗ್ ಶೈಲಿ ಹಾಗೂ ಸತತವಾಗಿ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಬೂಮ್ರಾ ಅವರ ವೃತ್ತಿ ಜೀವನ ಬೇಗನೇ ಮುಗಿಯಲಿದೆ ಎಂಬ ವಿಮರ್ಶೆಯ ಕುರಿತು ಪ್ರತಿಕ್ರಿಯಿಸಿರುವ ಅವರು, 'ನನ್ನಿಂದ ಎಂಟು ತಿಂಗಳು, 10 ತಿಂಗಳು ಮಾತ್ರ ಆಡಲು ಸಾಧ್ಯ ಎಂದು ಹಲವರು ಹೇಳಿದ್ದರು. ಆದರೆ ನಾನು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸುಮಾರು 10 ವರ್ಷಗಳಿಂದ ಆಡುತ್ತಿದ್ದೇನೆ. 12-13 ವರ್ಷಗಳ ಕಾಲ ಐಪಿಎಲ್ ಆಡಿದ್ದೇನೆ' ಎಂದು ಹೇಳಿದ್ದಾರೆ.

'ಈಗಲೂ ಪ್ರತಿ ಗಾಯದ ಬಳಿಕವೂ ನನ್ನ ಕೆರಿಯರ್ ಮುಗಿಯಿತು ಎಂದು ಕೆಲವರು ಹೇಳುತ್ತಾರೆ. ಅವರು ಹೇಳಲಿ, ನಾನು ನನ್ನ ಕೆಲಸ ಮಾಡುತ್ತೇನೆ. ಪ್ರತಿ ನಾಲ್ಕು ತಿಂಗಳಿಗೊಮ್ಮೆ ಇಂತಹ ಟೀಕೆಗಳು ಬರುತ್ತವೆ. ಆದರೆ ದೇವರು ಬಯಸುವವರೆಗೂ ನಾನು ಮುಂದುವರಿಯುತ್ತೇನೆ' ಎಂದು ತಿಳಿಸಿದ್ದಾರೆ.

'ನಾನು ನನ್ನಿಂದ ಸಾಧ್ಯವಾಗುವಷ್ಟು ಶ್ರೇಷ್ಠ ತಯಾರಿಯನ್ನೇ ಮಾಡುತ್ತೇನೆ. ಉಳಿದೆಲ್ಲವೂ ದೇವರಿಗೆ ಬಿಟ್ಟು ಬಿಡುತ್ತೇನೆ' ಎಂದು ಹೇಳಿದ್ದಾರೆ.

'ಜನರ ಗ್ರಹಿಕೆಗಳನ್ನು ಬದಲಾಯಿಸಲು ನನ್ನಿಂದ ಸಾಧ್ಯವಿಲ್ಲ. ಅವರು ಏನು ಹೇಳುತ್ತಾರೆ ಎಂಬುದು ನನ್ನ ನಿಯಂತ್ರಣದಲ್ಲಿಲ್ಲ. ನನ್ನ ಬಗ್ಗೆ ಏನು ಬರೆಯಬೇಕೆಂದು ಸಲಹೆ ನೀಡಲು ಸಾಧ್ಯವಿಲ್ಲ. ನನ್ನ ಹೆಸರಲ್ಲಿ ಹೆಚ್ಚಿನ ವೀಕ್ಷಣೆ ಪಡೆಯಬಹುದು. ಆದರೆ ಇವೆಲ್ಲಕ್ಕೂ ನಾನು ತಲೆಕೆಡಿಸಿಕೊಳ್ಳುವುದಿಲ್ಲ' ಎಂದು ಹೇಳಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಮೊದಲ ಇನಿಂಗ್ಸ್‌ನಲ್ಲಿ ಬೂಮ್ರಾ 24.4 ಓವರ್‌ಗಳಲ್ಲಿ 83 ರನ್ ತೆತ್ತು ಐದು ವಿಕೆಟ್ ಗಳಿಸಿದ್ದಾರೆ. ಇದರಲ್ಲಿ ಐದು ಮೇಡನ್ ಓವರ್ ಸೇರಿತ್ತು.

ಇದರೊಂದಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ 14ನೇ ಸಲ ಐದರ ಗೊಂಚಲುಗಳನ್ನು ಪಡೆದಿದ್ದಾರೆ. ಈ ಪೈಕಿ ತವರಿನಾಚೆ 12ನೇ ಸಲ ಇನಿಂಗ್ಸ್‌ವೊಂದರಲ್ಲಿ ಐದು ವಿಕೆಟ್‌ಗಳ ಸಾಧನೆ ಮಾಡಿದ್ದು, ದಿಗ್ಗಜ ಕಪಿಲ್ ದೇವ್ ದಾಖಲೆಯನ್ನು ಮುರಿದಿದ್ದಾರೆ.

46 ಟೆಸ್ಟ್ ಪಂದ್ಯಗಳಲ್ಲಿ ಬೂಮ್ರಾ ಈವರೆಗೆ 210 ವಿಕೆಟ್‌ಗಳನ್ನು ಗಳಿಸಿದ್ದಾರೆ.

ಜಸ್‌ಪ್ರೀತ್ ಬೂಮ್ರಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.