ADVERTISEMENT

Ranji Trophy | ಮಯಂಕ್ ಪಡೆಗೆ ಮೊದಲ ಇನಿಂಗ್ಸ್ ಮುನ್ನಡೆ

ರಣಜಿ ಟ್ರೋಫಿ: ಒಂದೇ ದಿನದಲ್ಲಿ 14 ವಿಕೆಟ್ ಪತನ; ಕೌಶಿಕ್‌ಗೆ ನಾಲ್ಕು ವಿಕೆಟ್; ಸ್ಮರಣ್ ಬ್ಯಾಟಿಂಗ್ ಸೊಬಗು

ಗಿರೀಶದೊಡ್ಡಮನಿ
Published 24 ಜನವರಿ 2025, 0:30 IST
Last Updated 24 ಜನವರಿ 2025, 0:30 IST
<div class="paragraphs"><p>ಕರ್ನಾಟಕ ಕ್ರಿಕೆಟ್ ತಂಡದ ಮಧ್ಯಮವೇಗಿ ವಾಸುಕಿ ಕೌಶಿಕ್ ಬೌಲಿಂಗ್ ಶೈಲಿ&nbsp; </p></div>

ಕರ್ನಾಟಕ ಕ್ರಿಕೆಟ್ ತಂಡದ ಮಧ್ಯಮವೇಗಿ ವಾಸುಕಿ ಕೌಶಿಕ್ ಬೌಲಿಂಗ್ ಶೈಲಿ 

   

 –ಪ್ರಜಾವಾಣಿ ಚಿತ್ರ/ಬಿ.ಕೆ. ಜನಾರ್ದನ್

ವಿಜಯ್ ಹಜಾರೆ ಟ್ರೋಫಿ ಟೂರ್ನಿ ಫೈನಲ್‌ನಲ್ಲಿ ಶತಕ ಗಳಿಸಿದ್ದ ಸ್ಮರಣ್ | ಎಡಗೈ ವೇಗಿ ಅಭಿಲಾಷ್ ಶೆಟ್ಟಿಗೆ 3 ವಿಕೆಟ್ | ಹಾರ್ದಿಕ್ ರಾಜ್, ನಿಕಿನ್ ಜೋಸ್‌ಗೆ ವಿಶ್ರಾಂತಿ

ಬೆಂಗಳೂರು: ಒಂದು ಸಲ ಗೆಲುವಿನ ರುಚಿ ಹತ್ತಿದರೆ ಸಾಕು. ಮತ್ತೆ ಮತ್ತೆ ಅದನ್ನೇ ಸವಿಯುವ ಹಸಿವು ಹೆಚ್ಚುತ್ತದಂತೆ. ಅದಕ್ಕಾಗಿ ಎಂತಹದೇ ಕಠಿಣ ಹಾದಿ ಇದ್ದರೂ ಸರಿ ಹೋರಾಡುವ ದಿಟ್ಟ ಮನೋಭಾವ ಜಾಗೃತವಾಗಿಬಿಡುತ್ತದೆ. 

ADVERTISEMENT

ಗುರುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭವಾದ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಆಡಿದ  ಕರ್ನಾಟಕ ತಂಡದ ಆಟಗಾರರಲ್ಲಿ ಈ ಮನೋಭಾವ ಸ್ಪಷ್ಟವಾಗಿ ಗೋಚರಿಸಿತು. ಈಚೆಗಷ್ಟೇ ವಿಜಯ್ ಹಜಾರೆ ಟ್ರೋಫಿ ಜಯಿಸಿರುವ ಮಯಂಕ್ ಬಳಗದ ಭರಾಟೆಗೆ ಪಂಜಾಬ್  ತಂಡವು ಕೇವಲ 55 ರನ್‌ಗಳಿಗೆ ಕುಸಿಯಿತು. ಆತಿಥೇಯ ಬಳಗವು  ಮೊದಲ ದಿನದಾಟದ ಮುಕ್ತಾಯಕ್ಕೆ 144 ರನ್‌ಗಳ ಮುನ್ನಡೆ ಸಾಧಿಸಿತು. 

ಅನುಭವಿ ಮತ್ತು ಯುವ ಆಟಗಾರರ ಹದವಾದ ಮಿಶ್ರಣವಿರುವ ಕರ್ನಾಟಕ ತಂಡ ಇಡೀ ದಿನ ಪಾರಮ್ಯ ಮೆರೆಯಿತು. ಹಸಿರು ಗರಿಕೆಗಳು ನಸುನಗುತ್ತಿದ್ದ ಪಿಚ್‌ ಮೇಲೆ ಟಾಸ್ ಗೆದ್ದ ಕರ್ನಾಟಕ ತಂಡದ ನಾಯಕ ಮಯಂಕ್ ಅಗರವಾಲ್ ಅವರು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದು ಫಲ ನೀಡಿತು.

32 ವರ್ಷ ವಯಸ್ಸಿನ ಮಧ್ಯಮವೇಗಿ ವಾಸುಕಿ ಕೌಶಿಕ್ (11–4–16–4) ಅವರ ಮುಂದಾಳತ್ವದ ಬೌಲಿಂಗ್ ಪಡೆಯ ದಾಳಿಗೆ ಪ್ರವಾಸಿ ಬಳಗವು ದೂಳೀಪಟವಾಯಿತು. ಉದಯೋನ್ಮುಖ ಎಡಗೈ ವೇಗಿ ಅಭಿಲಾಷ್ ಶೆಟ್ಟಿ (9–4–19–3) ಕೂಡ ಮಿಂಚಿದರು. ಭಾರತ ತಂಡದಲ್ಲಿ ಆಡಿ ಬಂದಿರುವ ಪ್ರಸಿದ್ಧ ಕೃಷ್ಣ (11ಕ್ಕೆ2) ಮತ್ತು ಯುವ ಬೌಲರ್ ಯಶೋವರ್ಧನ್ ಪರಂತಾಪ್ (3ಕ್ಕೆ1) ಪಂಜಾಬ್ ತಂಡವನ್ನು ಊಟದ ಹೊತ್ತಿಗೆ ಹೆಡೆಮುರಿ ಕಟ್ಟಲು ಸಹಕರಿಸಿದರು.

ಇದಕ್ಕುತ್ತರವಾಗಿ ದಿನದಾಟದ ಅಂತ್ಯಕ್ಕೆ ಕರ್ನಾಟಕ ತಂಡವು 50 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 199 ರನ್ ಗಳಿಸಿತು. ಯುವ ಬ್ಯಾಟರ್ ಸ್ಮರಣ್ ರವಿಚಂದ್ರನ್ (ಬ್ಯಾಟಿಂಗ್ 83; 100ಎ, 4X12, 6X1) ಮತ್ತು ಅಭಿನವ್ ಮನೋಹರ್ (ಬ್ಯಾಟಿಂಗ್ 1) ಕ್ರೀಸ್‌ನಲ್ಲಿದ್ದಾರೆ. 

ಸ್ಮರಣ್ ಚೆಂದದ ಬ್ಯಾಟಿಂಗ್

ಇದೇ ಋತುವಿನಲ್ಲಿ ಪದಾರ್ಪಣೆ ಮಾಡಿರುವ ಎಡಗೈ ಬ್ಯಾಟರ್ ಸ್ಮರಣ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಚೊಚ್ಚಲ ಅರ್ಧಶತಕ ಗಳಿಸಿದರು. 64 ಎಸೆತಗಳಲ್ಲಿ ಅವರು 50ರ ಗಡಿ ದಾಟಿದರು. 7 ಬೌಂಡರಿ ಮತ್ತು 1 ಸಿಕ್ಸರ್ ಹೊಡೆದರು. ಎರಡೂವರೆ ತಾಸುಗಳಷ್ಟು ಸಮಯ ತೆಗೆದುಕೊಂಡರು. ತಮ್ಮ ಸಮಚಿತ್ತದ ಆಟದೊಂದಿಗೆ ತಂಡದ ಬಲವರ್ಧನೆ ಮಾಡಿದರು.  

ಭೋಜನ ವಿರಾಮದ  ನಂತರ ಇನಿಂಗ್ಸ್ ಆರಂಭಿಸಿದ ಕರ್ನಾಟಕ ತಂಡದ ಆರಂಭಿಕ ಜೋಡಿ ಕೆ.ವಿ.ಅನೀಶ್  (33; 37ಎ) ಮತ್ತು ಅಗರವಾಲ್ (20; 4ಎ) ಮೊದಲ ವಿಕೆಟ್‌ಗೆ 55 ರನ್ ಸೇರಿಸಿ ಪಂಜಾಬ್ ತಂಡದ ಲೆಕ್ಕ ಚುಕ್ತಾ ಮಾಡಿದರು. ಆರಾಧ್ಯ ಶುಕ್ಲಾ ಬೌಲಿಂಗ್‌ನಲ್ಲಿ ಅನೀಶ್ ಔಟಾದರು. ನಂತರದ ಓವರ್‌ನಲ್ಲಿ ಮಯಂಕ್  ಅವರನ್ನು ಸನ್ವೀರ್‌ ಸಿಂಗ್ ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದರು. 

ಈ ಹಂತದಲ್ಲಿ ಜೊತೆಗೂಡಿದ ದೇವದತ್ತ ಪಡಿಕ್ಕಲ್ ಮತ್ತು ಸ್ಮರಣ್ ಎಚ್ಚರಿಕೆಯಿಂದ ಆಡಿದರು. ಇದರಿಂದಾಗಿ ಚಹಾ ವಿರಾಮದ ಹೊತ್ತಿಗೆ ತಂಡದ ಖಾತೆಯಲ್ಲಿ 110 ರನ್‌ಗಳಿದ್ದವು. ಮೂರನೇ ವಿಕೆಟ್ ಜೊತೆಯಾಟದಲ್ಲಿ 52 ರನ್ ಸೇರಿಸಿದರು.  ದೇವದತ್ತ ಅವರ ವಿಕೆಟ್ ಗಳಿಸಿದ ಗುರ್ನೂರ್ ಬ್ರಾರ್ ಜೊತೆಯಾಟ ಮುರಿದರು.

ಶಾಂತಚಿತ್ತದಿಂದ ಆಡುತ್ತಿದ್ದ ಸ್ಮರಣ್  ಅವರು ಶ್ರೀಜಿತ್ (26; 65ಎ) ಜೊತೆಗೆ 4ನೇ ವಿಕೆಟ್‌ ಪಾಲುದಾರಿಕೆಯಲ್ಲಿ  81 ರನ್‌ ಸೇರಿಸಿದರು. ದಿನದಾಟಕ್ಕೆ 3 ಓವರ್‌ಗಳು ಬಾಕಿಯಿದ್ದಾಗ ಮಯಂಕ್ ಮಾರ್ಕಂಡೆ ಅವರ ಎಸೆತದಲ್ಲಿ ಶ್ರೀಜಿತ್  ಅವರು ಅನ್ಮೋಲ್‌ಪ್ರೀತ್‌ ಸಿಂಗ್‌ಗೆ ಕ್ಯಾಚ್ ಆದರು. 

ಸಂಕ್ಷಿಪ್ತ ಸ್ಕೋರು:

ಪಂಜಾಬ್: 29 ಓವರ್‌ಗಳಲ್ಲಿ 55 (ರಮಣದೀಪ್ ಸಿಂಗ್ 16, ಮಯಂಕ್ ಮಾರ್ಕಂಡೆ 12, ವಿ. ಕೌಶಿಕ್ 16ಕ್ಕೆ4, ಅಭಿಲಾಷ್ ಶೆಟ್ಟಿ 19ಕ್ಕೆ3, ಪ್ರಸಿದ್ಧ ಕೃಷ್ಣ 11ಕ್ಕೆ2, ಯಶೋವರ್ಧನ್ ಪರಂತಾಪ್ 3ಕ್ಕೆ1)

ಕರ್ನಾಟಕ: 50 ಓವರ್‌ಗಳಲ್ಲಿ 4ಕ್ಕೆ199 (ಕೆ.ವಿ. ಅನೀಶ್ 33, ಮಯಂಕ್ ಅಗರವಾಲ್ 20, ದೇವದತ್ತ ಪಡಿಕ್ಕಲ್ 27, ಸ್ಮರಣ್ ರವಿಚಂದ್ರನ್ ಬ್ಯಾಟಿಂಗ್ 83, ಕೃಷ್ಣನ್ ಶ್ರೀಜಿತ್ 26, ಅಭಿನವ್ ಮನೋಹರ್ ಬ್ಯಾಟಿಂಗ್ 1) 

ಕರ್ನಾಟಕ ತಂಡದ ಬ್ಯಾಟರ್ ಸ್ಮರಣ್ ರವಿಚಂದ್ರನ್ ಬ್ಯಾಟಿಂಗ್ ಸೊಬಗು   –ಪ್ರಜಾವಾಣಿ ಚಿತ್ರ/ಬಿ.ಕೆ. ಜನಾರ್ದನ್

ಗಿಲ್ ಸವಾಲು ಮೀರಿದ ಶೆಟ್ಟಿ

ಮುಂದಿನ ತಿಂಗಳು ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಭಾರತ ತಂಡದ ಉಪನಾಯಕರಾಗಿರುವ ಶುಭಮನ್ ಗಿಲ್ ಬ್ಯಾಟಿಂಗ್ ಲಯಕ್ಕೆ ಮರಳುವ ಪ್ರಯತ್ನದಲ್ಲಿದ್ದಾರೆ. ಆದರೆ ಅವರಿಗೆ ‘ಕುಡ್ಲದ ಹುಡುಗ’ ಅಭಿಲಾಷ್ ಶೆಟ್ಟಿ ಅಡ್ಡಗಾಲು ಹಾಕಿದರು. ತಮ್ಮ ಎರಡನೇ ಓವರ್‌ನಲ್ಲಿಯೇ ಗಿಲ್ ವಿಕೆಟ್ ಗಳಿಸಿದರು. ಅವರ ಬ್ಯಾಟಿನ ಅಂಚು ಸವರಿ ಹಿಂದೆ ಸಾಗಿದ ಚೆಂಡನ್ನು ವಿಕೆಟ್‌ಕೀಪರ್ ಶ್ರೀಜಿತ್ ಹಿಡಿತಕ್ಕೆ ಪಡೆದು ಜಿಗಿದಾಡಿದರು.  ಇನ್ನೊಂದು ಬದಿಯಿಂದ ಕೌಶಿಕ್ ಹಾಕಿದ ಕರಾರುವಾಕ್ ಎಸೆತಗಳಿಗೆ ಯಾವುದೇ ಬ್ಯಾಟರ್‌ಗಳ ಬಳಿ ಉತ್ತರ ಇರಲಿಲ್ಲ. ಮಧ್ಯಮಕ್ರಮಾಂಕದ ಬ್ಯಾಟರ್‌ಗಳಾದ ಪುಕರಾಜ್ ಮಾನ್ ಅನ್ಮೋಲ್‌ಪ್ರೀತ್ ಸಿಂಗ್ ಹಾಗೂ ಮಯಂಕ್ ಮಾರ್ಕಂಡೆ ಅವರು ಕೌಶಿಕ್‌ಗೆ ಶರಣಾದರು. ಹೋರಾಟ ಮಾಡುವ ಪ್ರಯತ್ನ ಮಾಡಿದ ರಮಣದೀಪ್ ಸಿಂಗ್ (16; 35ಎಸೆತ)  ಅವರಿಗೆ ಪ್ರಸಿದ್ಧ ಕಡಿವಾಣ ಹಾಕಿದರು. ಸ್ಮರಣ್ ರವಿಚಂದ್ರನ್ ಪಡೆದ ಕ್ಯಾಚ್‌ಗೆ ರಮಣದೀಪ್ ನಿರ್ಗಮಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.