ADVERTISEMENT

ರಣಜಿ ಟ್ರೋಫಿ ಕ್ರಿಕೆಟ್‌: ನೆಚ್ಚಿನ ಅಂಗಳದಲ್ಲಿ ಕರುಣ್‌, ಶ್ರೇಯಸ್‌ ಕೆಚ್ಚೆದೆ ಆಟ

ಜಿ.ಶಿವಕುಮಾರ
Published 25 ಅಕ್ಟೋಬರ್ 2025, 23:30 IST
Last Updated 25 ಅಕ್ಟೋಬರ್ 2025, 23:30 IST
<div class="paragraphs"><p>ಕರ್ನಾಟಕದ ಕರುಣ್‌ ನಾಯರ್‌ (ಎಡ) ಹಾಗೂ ಶ್ರೇಯಸ್‌ ಗೋಪಾಲ್‌ ರನ್‌ ಗಳಿಸಲು ಮುಂದಾದ ಕ್ಷಣ&nbsp;</p></div>

ಕರ್ನಾಟಕದ ಕರುಣ್‌ ನಾಯರ್‌ (ಎಡ) ಹಾಗೂ ಶ್ರೇಯಸ್‌ ಗೋಪಾಲ್‌ ರನ್‌ ಗಳಿಸಲು ಮುಂದಾದ ಕ್ಷಣ 

   

ಪ್ರಜಾವಾಣಿ ಚಿತ್ರ/ ಕೃಷ್ಣ ಕುಮಾರ್ ಪಿ.ಎಸ್. 

ಶಿವಮೊಗ್ಗ: ಇಲ್ಲಿನ ನವುಲೆಯ ಕೆಎಸ್‌ಸಿಎ ಕ್ರೀಡಾಂಗಣ ತಮ್ಮ ಪಾಲಿಗೆ ಅಚ್ಚುಮೆಚ್ಚು ಎಂಬುದನ್ನು ಕರುಣ್‌ ನಾಯರ್‌ (ಬ್ಯಾಟಿಂಗ್‌ 86; 138 ಎಸೆತ, 7 ಬೌಂಡರಿ, 1 ಸಿಕ್ಸರ್‌) ಮತ್ತು ಶ್ರೇಯಸ್‌ ಗೋಪಾಲ್‌ (ಬ್ಯಾಟಿಂಗ್‌ 48; 84 ಎ, 5ಬೌಂ, 1ಸಿ) ಮತ್ತೊಮ್ಮೆ ನಿರೂಪಿಸಿದರು. ಈ ಜೋಡಿ ಗೋವಾ ವಿರುದ್ಧದ ರಣಜಿ ಟ್ರೋಫಿ ಕ್ರಿಕೆಟ್‌ ಪಂದ್ಯದಲ್ಲಿ ಶನಿವಾರ ಕೆಚ್ಚೆದೆಯ ಆಟ ಆಡಿ ಕರ್ನಾಟಕ ತಂಡದ ಮೇಲೆ ಕವಿದಿದ್ದ ಆತಂಕದ ಕಾರ್ಮೋಡವನ್ನು ದೂರ ಸರಿಸಿತು.

ADVERTISEMENT

ಇವರು ಮುರಿಯದ 6ನೇ ವಿಕೆಟ್‌ಗೆ 148 ಎಸೆತಗಳಲ್ಲಿ 94 ರನ್‌ ಕಲೆಹಾಕಿದರು. ಆ ಮೂಲಕ, ಮೊದಲ ಇನಿಂಗ್ಸ್‌ನಲ್ಲಿ ತವರಿನ ತಂಡವನ್ನು ಎದುರಾಳಿಗಳ ಬಿಗಿ ಹಿಡಿತದಿಂದ ಪಾರು ಮಾಡಿದರು.

2017ರ ಅಕ್ಟೋಬರ್‌ 24ರಿಂದ 27ರವರೆಗೆ ಇಲ್ಲಿ ನಡೆದಿದ್ದ ಹೈದರಾಬಾದ್‌ ವಿರುದ್ಧದ ಪಂದ್ಯದಲ್ಲಿ ಕರ್ನಾಟಕದ ಗೆಲುವಿಗೆ ಕಾರಣರಾಗಿದ್ದವರು ಕರುಣ್‌ ನಾಯರ್‌. ಮೊದಲ ಇನಿಂಗ್ಸ್‌ನಲ್ಲಿ 23ರನ್‌ ಗಳಿಸಿದ್ದ ಇವರು ಎರಡನೇ ಇನಿಂಗ್ಸ್‌ನಲ್ಲಿ ಶತಕ (134) ಸಿಡಿಸಿದ್ದರು. ಜೊತೆಗೆ ಒಂದು ವಿಕೆಟ್‌ ಉರುಳಿಸಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದರು. ಆ ಪಂದ್ಯದಲ್ಲಿ ಶ್ರೇಯಸ್‌, ಎರಡೂ ಇನಿಂಗ್ಸ್‌ಗಳಿಂದ 9 ವಿಕೆಟ್‌ ಉರುಳಿಸಿದ್ದರು.


2020ರಲ್ಲಿ ಕರುಣ್‌ ಸಾರಥ್ಯದಲ್ಲಿ ಕರ್ನಾಟಕ ಇದೇ ಮೈದಾನದಲ್ಲಿ ಮಧ್ಯಪ್ರದೇಶದ ಸವಾಲು ಎದುರಿಸಿತ್ತು. ಆ ಹೋರಾಟದ ಮೊದಲ ಇನಿಂಗ್ಸ್‌ನಲ್ಲಿ ಶ್ರೇಯಸ್‌ ಅರ್ಧಶತಕ (50) ದಾಖಲಿಸಿದ್ದರು.
ಹಿಂದಿನ ಈ ಸ್ಮರಣೀಯ ನೆನಪುಗಳೊಂದಿಗೆ ಮತ್ತೆ ಅಂಗಳಕ್ಕಿಳಿದಿದ್ದ ಈ ಅನುಭವಿ ಜೋಡಿ ಎದುರಾಳಿ ಬೌಲರ್‌ಗಳನ್ನು ಕಾಡಿತು. ಕರ್ನಾಟಕ ತಂಡ ಮೊದಲ ದಿನದಾಟದ ಅಂತ್ಯಕ್ಕೆ 69 ಓವರ್‌ಗಳಲ್ಲಿ 5 ವಿಕೆಟ್‌ಗೆ 222ರನ್‌ ಕಲೆಹಾಕಲು ನೆರವಾಯಿತು.


ಪಿಚ್‌ ತೇವಾಂಶದಿಂದ ಕೂಡಿದ್ದ ಕಾರಣ ಪಂದ್ಯ ಒಂದೂವರೆ ಗಂಟೆ ತಡವಾಗಿ ಶುರುವಾಯಿತು. ಟಾಸ್‌ ಗೆದ್ದ ಗೋವಾ ತಂಡದ ನಾಯಕ ಸ್ನೇಹಲ್‌ ಕೌತಂಕರ್‌ ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡರು. ವೇಗಿಗಳಾದ ಅರ್ಜುನ್‌ ತೆಂಡೂಲ್ಕರ್‌ ಮತ್ತು ವಿ.ಕೌಶಿಕ್‌, ಮೊದಲ ಅವಧಿಯಲ್ಲಿ ನಾಯಕನ ನಿರ್ಧಾರ ಸಮರ್ಥಿಸುವಂತೆ ಬೌಲಿಂಗ್‌ ಮಾಡಿದರು. ಮೊದಲ 10 ಓವರ್‌ಗಳಲ್ಲಿ ಆತಿಥೇಯರಿಗೆ ಕೇವಲ 14ರನ್‌ ಬಿಟ್ಟುಕೊಟ್ಟರು.
ಭೋಜನ ವಿರಾಮದ ನಂತರ ಅರ್ಜುನ್‌, ಬೆನ್ನು ಬೆನ್ನಿಗೆ ವಿಕೆಟ್‌ ಕೆಡವಿದರು. 14ನೇ ಓವರ್‌ನ ಎರಡನೇ ಎಸೆತದಲ್ಲಿ ಎಸ್‌.ಜೆ.ನಿಕಿನ್‌ ಜೋಸ್‌ ಹಾಗೂ 16ನೇ ಓವರ್‌ನ ಮೊದಲ ಎಸೆತದಲ್ಲಿ ಕೆ.ಎಲ್‌.ಶ್ರೀಜಿತ್‌ ಅವರಿಗೆ ಪೆವಿಲಿಯನ್‌ ದಾರಿ ತೋರಿದರು. 48 ಎಸೆತ ಎದುರಿಸಿದ ನಿಕಿನ್‌ 3 ರನ್‌ ಗಳಿಸಿದರೆ, ಶ್ರೀಜಿತ್‌ ಸೊನ್ನೆ ಸುತ್ತಿದರು.

ಕರ್ನಾಟಕದ ಕರುಣ್‌ ನಾಯರ್‌ (ಎಡ) ಹಾಗೂ ಶ್ರೇಯಸ್‌ ಗೋಪಾಲ್‌ ರನ್‌ ಗಳಿಸಲು ಮುಂದಾದ ಕ್ಷಣ  ಪ್ರಜಾವಾಣಿ ಚಿತ್ರ/ ಕೃಷ್ಣ ಕುಮಾರ್ ಪಿ.ಎಸ್. 


ಕನ್ನಡಿಗ ಕೌಶಿಕ್‌, 23ನೇ ಓವರ್‌ನ ಐದನೇ ಎಸೆತದಲ್ಲಿ ನಾಯಕ ಮಯಂಕ್‌ ಅಗರವಾಲ್‌ (28; 69ಎ, 4ಬೌಂ) ಹಾಗೂ 27ನೇ ಓವರ್‌ನ ಮೊದಲ ಎಸೆತದಲ್ಲಿ ಆರ್‌.ಸ್ಮರಣ್‌ (3) ವಿಕೆಟ್‌ ಉರುಳಿಸಿದರು. ಆಗ ತಂಡದ ಮೊತ್ತ 65ಕ್ಕೆ4.


ಈ ಹಂತದಲ್ಲಿ ಒಂದುಗೂಡಿದ ಕರುಣ್ ಮತ್ತು ಅಭಿನವ್‌ ಮನೋಹರ್‌ (37; 64ಎ, 6 ಬೌಂ) ಕಳೆಗುಂದಿದ್ದ ಕರ್ನಾಟಕದ ಇನಿಂಗ್ಸ್‌ಗೆ ಚೈತನ್ಯ ತುಂಬಿದರು. ಅಪಾಯಕಾರಿಯಾಗಿ ಬೆಳೆಯುತ್ತಿದ್ದ ಈ ಜೊತೆಯಾಟ ಮುರಿಯುವಲ್ಲಿ ಅರ್ಜುನ್‌ ಯಶಸ್ವಿಯಾದರು. ಚಹಾ ವಿರಾಮಕ್ಕೆ ನಾಲ್ಕು ಎಸೆತಗಳು ಬಾಕಿ ಇದ್ದಾಗ ಅಭಿನವ್‌, ಬೌಂಡರಿ ಗೆರೆ ಬಳಿ ವಿ.ಕೌಶಿಕ್‌ಗೆ ಕ್ಯಾಚಿತ್ತು ಹೊರನಡೆದರು.


ನಂತರ ಕರುಣ್‌ ಮತ್ತು ಶ್ರೇಯಸ್‌ ಆಟ ಕಳೆಗಟ್ಟಿತು. ಬಹಳ ಎಚ್ಚರಿಕೆಯಿಂದ ಇನಿಂಗ್ಸ್‌ ಬೆಳೆಸಿದ ಇವರು ಕಲಾತ್ಮಕ ಹೊಡೆತಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.  


ಸಂಕ್ಷಿಪ್ತ ಸ್ಕೋರ್‌:

ಕರ್ನಾಟಕ; ಮೊದಲ ಇನಿಂಗ್ಸ್‌: 69 ಓವರ್‌ಗಳಲ್ಲಿ 5 ವಿಕೆಟ್‌ಗೆ 222 (ಮಯಂಕ್‌ ಅಗರವಾಲ್‌ 28, ಕರುಣ್‌ ನಾಯರ್‌ ಬ್ಯಾಟಿಂಗ್‌ 86, ಅಭಿನವ್‌ ಮನೋಹರ್‌ 37, ಶ್ರೇಯಸ್‌ ಗೋಪಾಲ್‌ ಬ್ಯಾಟಿಂಗ್‌ 48; ಅರ್ಜುನ್‌ ತೆಂಡೂಲ್ಕರ್‌ 47ಕ್ಕೆ3, ವಿ.ಕೌಶಿಕ್‌ 24ಕ್ಕೆ2).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.