ಯುವ, ಪ್ರತಿಭಾವಂತ ಕ್ರಿಕೆಟಿಗರನ್ನು ದಿಗ್ಗಜ ಆಟಗಾರರೊಂದಿಗೆ ಹೋಲಿಸುವುದು ಸಾಮಾನ್ಯ. ಬ್ಯಾಟಿಂಗ್ ದಂತಕಥೆ ಸುನಿಲ್ ಗವಾಸ್ಕರ್ ಅವರಿಗೆ 'ಮಾಸ್ಟರ್ ಬ್ಲಾಸ್ಟರ್' ಸಚಿನ್ ತೆಂಡೂಲ್ಕರ್ ಅವರನ್ನು ಹೋಲಿಸಲಾಗುತ್ತಿತ್ತು. ನಂತರ ಸಚಿನ್ ಅವರೊಂದಿಗೆ 'ರನ್ ಮಷಿನ್' ಅವರ ಸಾಮರ್ಥ್ಯವನ್ನು ಅಳೆಯಲಾಗುತ್ತಿತ್ತು. ಇದೀಗ, ಯುವ ಆಟಗಾರರಾದ ಶುಭಮನ್ ಗಿಲ್, ಪಾಕಿಸ್ತಾನ ಬಾಬರ್ ಅಜಂ ಅವರ ಕೌಶಲವನ್ನು ವಿರಾಟ್ ಸಾಮರ್ಥ್ಯದೊಂದಿಗೆ ತುಲನೆ ಮಾಡಲಾಗುತ್ತಿದೆ.
ಪ್ರಸ್ತುತ ನಡೆಯುತ್ತಿರುವ ಇಂಗ್ಲೆಂಡ್–ಭಾರತ ಟೆಸ್ಟ್ ಸರಣಿಯಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರುತ್ತಿರುವ ಜೋ ರೂಟ್, ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿಹೆಚ್ಚು ರನ್ ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ. ಅವರು, ಸಚಿನ್ ತೆಂಡೂಲ್ಕರ್ ಶೀಘ್ರದಲ್ಲೇ ಹಿಂದಿಕ್ಕಲಿದ್ದಾರೆ ಎನ್ನಲಾಗುತ್ತಿದೆ.
ಈ ಹೊತ್ತಿನಲ್ಲೇ, ಹಿಂದಿನ ಹಾಗೂ ಈಗಿನ ಕಾಲದ ಬೌಲರ್‌ಗಳ ಸಾಮರ್ಥ್ಯದ ಬಗ್ಗೆ ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಅವರು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್/ಟ್ವಿಟರ್‌ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
'ನನ್ನತ್ತ ಕೂಗಾಡಬೇಡಿ. ಆದರೆ, 20–25 ವರ್ಷಗಳ ಹಿಂದಿನ ಸಮಯಕ್ಕೆ ಹೋಲಿಸಿದರೆ ಇತ್ತೀಚಿನ ದಿನಗಳಲ್ಲಿ ಬ್ಯಾಟಿಂಗ್ ಮಾಡುವುದು ತುಂಬಾ ಸುಲಭ. ಆಗಿನ ಕಾಲದಲ್ಲಿ ಈಗಿನ ಎರಡರಷ್ಟು ಕಷ್ಟ ಇರುತ್ತಿತ್ತು' ಎಂದಿದ್ದಾರೆ.
ಹಾಗೆಯೇ, ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವಂತೆ, ದಶಕಗಳ ಹಿಂದೆ ಕ್ರಿಕೆಟ್ ಜಗತ್ತಿನಲ್ಲಿ ಹೆಸರು ಮಾಡಿದ್ದ 22 ಬೌಲರ್‌ಗಳ ಹೆಸರುಗಳ ಪಟ್ಟಿ ನೀಡಿ, ಇವರೊಂದಿಗೆ ಹೋಲಿಗೆ ಮಾಡಬಹುದಾದ 10 ಮಂದಿ ಆಧುನಿಕ ಬೌಲರ್‌ಗಳನ್ನು ಹೆಸರಿಸಿ ಎಂದು ಸವಾಲು ಹಾಕಿದ್ದಾರೆ.
ಆ ಮೂಲಕ, ಈಗಿನ ಬೌಲರ್‌ಗಳಿಗೆ ಹೋಲಿಸಿದರೆ ಹಿಂದೆ ಘಟಾನುಘಟಿ ಬೌಲರ್‌ಗಳಿದ್ದರು. ಅವರ ಎದುರು ರನ್ ಗಳಿಸುವುದು ಸುಲಭವಿರಲಿಲ್ಲ ಎಂದು ಪ್ರತಿಪಾದಿಸಿದ್ದಾರೆ. ಅದೇ ರೀತಿ, ರನ್ ಗಳಿಕೆ ಆಧಾರದಲ್ಲಿ ಬ್ಯಾಟರ್‌ಗಳ ಸಾಮರ್ಥ್ಯವನ್ನು ಹೋಲಿಸುವುದು ಸರಿಯಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ.
ಪೀಟರ್ಸನ್ ಹೆಸರಿಸಿರುವ ಬೌಲರ್‌ಗಳಿವರು..
ಪಾಕಿಸ್ತಾನದ ವಕಾರ್ ಯೂನಿಸ್, ಶೋಯಬ್ ಅಖ್ತರ್, ಸಕ್ಲೇನ್ ಮುಷ್ತಾಕ್, ಭಾರತದ ಅನಿಲ್ ಕುಂಬ್ಳೆ, ಹರ್ಭಜನ್ ಸಿಂಗ್, ದಕ್ಷಿಣ ಆಫ್ರಿಕಾದ ಅಲನ್ ಡೊನಾಲ್ಡ್, ಶಾನ್ ಪೊಲಾಕ್, ಲ್ಯಾನ್ಸ್ ಕ್ಲೂಸ್ನೆರ್, ಇಂಗ್ಲೆಂಡ್‌ನ ಮೈಕಲ್ ಗೌ, ಆಸ್ಟ್ರೇಲಿಯಾದ ಗ್ಲೆನ್ ಮೆಕ್‌ಗ್ರಾಥ್, ಬ್ರೆಟ್ ಲೀ, ಶೇನ್ ವಾರ್ನ್, ಜೇಸನ್ ಗಿಲೆಸ್ಪಿ, ನ್ಯೂಜಿಲೆಂಡ್‌ನ ಶೇನ್ ಬಾಂಡ್, ಡೆನಿಯಲ್ ವೆಟ್ಟೋರ್, ಕ್ರಿಸ್ ಕ್ರೇನ್ಸ್, ಶ್ರೀಲಂಕಾದ ಚಮಿಂಡಾ ವಾಸ್, ಮತ್ತಯ್ಯ ಮುರುಳಿಧರನ್ ವೆಸ್ಟ್ ಇಂಡೀಸ್‌ನ ಕರ್ಟ್ಲೀ ಆಂಬ್ರೋಸ್
ಪೀಟರ್ಸನ್ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಕೆಲ ಅಭಿಮಾನಿಗಳು, ಆಧುನಿಕ ಕ್ರಿಕೆಟ್‌ನಲ್ಲಿ ಶ್ರೇಷ್ಠ ಬೌಲರ್‌ಗಳೆನಿಸಿರುವ ಸ್ಟುವರ್ಟ್ ಬ್ರಾಡ್, ಜೇಮ್ಸ್ ಆ್ಯಂಡರ್ಸನ್, ಲಸಿತ್ ಮಾಲಿಂಗ, ಜಸ್‌ಪ್ರೀತ್ ಬೂಮ್ರಾ, ಡೇಲ್ ಸ್ಟೇಯ್ನ್, ಅಲ್ಬೀ ಮಾರ್ಕೆಲ್, ಪ್ಯಾಟ್ ಕಮಿನ್ಸ್, ಮಿಚೇಲ್ ಸ್ಟಾರ್ಕ್, ಜೋಶ್ ಹ್ಯಾಶಲ್‌ವುಡ್, ನೇಥನ್ ಲಯನ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಟಿಮ್ ಸೌಥಿ, ಕಗಿಸೊ ರಬಾಡ, ಮತ್ತಿತರ ಬೌಲರ್‌ಗಳನ್ನು ಹೆಸರಿಸಿದ್ದಾರೆ. ಆ ಮೂಲಕ, ಬ್ಯಾಟರ್‌ಗಳಿಗೆ ಸವಾಲೊಡ್ಡಬಲ್ಲ ಪರಿಣತ ಬೌಲರ್‌ಗಳು ಈಗಲೂ ಇದ್ದಾರೆ ಎಂದು ವಾದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.