ADVERTISEMENT

ಬಿಸಿಸಿಐ ಸೂಚನೆ: ಬಾಂಗ್ಲಾ ವೇಗಿ ಮುಸ್ತಫಿಝರ್ ಕೈಬಿಟ್ಟ ಕೊಲ್ಕತ್ತ ನೈಟ್ ರೈಡರ್ಸ್

ಪಿಟಿಐ
Published 3 ಜನವರಿ 2026, 6:33 IST
Last Updated 3 ಜನವರಿ 2026, 6:33 IST
<div class="paragraphs"><p>&nbsp;ಮುಸ್ತಾಫಿಜುರ್ ರೆಹಮಾನ್</p></div>

 ಮುಸ್ತಾಫಿಜುರ್ ರೆಹಮಾನ್

   

ಗುವಾಹಟಿ: ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ ಸೂಚನೆ ನೀಡಿದ ಬೆನ್ನಲ್ಲೇ ಕೊಲ್ಕತ್ತ ನೈಟ್‌ ರೈಡರ್ಸ್ ತಂಡವು ಬಾಂಗ್ಲಾದೇಶದ ವೇಗದ ಬೌಲರ್ ಮುಸ್ತಫಿಝುರ್ ರೆಹಮಾನ್ ಅವರನ್ನು ಐಪಿಎಲ್‌ ತಂಡದಿಂದ ಶನಿವಾರ ಕೈಬಿಟ್ಟಿದೆ.

ಡಿಸೆಂಬರ್‌ ತಿಂಗಳಲ್ಲಿ ನಡೆದ ಮಿನಿ ಹರಾಜಿನಲ್ಲಿ ಕೆಕೆಆರ್ ತಂಡವು ₹9.20 ಕೋಟಿ ಮೊತ್ತಕ್ಕೆ ಮುಸ್ತಫಿಝುರ್ ಅವರನ್ನು ತನ್ನ ಪಾಲು ಮಾಡಿಕೊಂಡಿತ್ತು. 

ADVERTISEMENT

ಬಿಸಿಸಿಐ ಸೂಚನೆಯನ್ನು ಪಾಲಿಸಿರುವುದಾಗಿ ಫ್ರಾಂಚೈಸಿಯು ಹೇಳಿಕೊಂಡಿದೆ. ‘ಬಿಸಿಸಿಐ ಸೂಚನೆಯ ಮೇರೆಗೆ ಅಗತ್ಯ ಪ್ರಕ್ರಿಯೆ ಮತ್ತು ಸಮಾಲೋಚನೆಯ ನಂತರ ಆಟಗಾರನನ್ನು ತಂಡದಿಂದ ಕೈಬಿಡಲಾಗಿದೆ’ ಎಂದು ಕೆಕೆಆರ್‌ ತಿಳಿಸಿದೆ.

ಬಾಂಗ್ಲಾದೇಶದಲ್ಲಿ ಹಿಂದೂ ವ್ಯಕ್ತಿಯನ್ನು ಹತ್ಯೆಗೈದ ನಂತರ ಮತ್ತು ಆ ದೇಶದಲ್ಲಿ ಅಲ್ಪಸಂಖ್ಯಾತರ ಸುರಕ್ಷತೆಯ ಬಗ್ಗೆ ಕಳವಳ ತೀವ್ರಗೊಳ್ಳುತ್ತಿರುವಾಗ ಮುಸ್ತಫಿಝುರ್ ಅವರನ್ನು ಐಪಿಎಲ್‌ನಲ್ಲಿ ಉಳಿಸಿಕೊಳ್ಳಬಾರದೆಂದು ಬಿಸಿಸಿಐ ಮೇಲೆ ಒತ್ತಡ ಹೆಚ್ಚತೊಡಗಿತ್ತು. ಕೆಕೆಆರ್‌ ತಂಡದ ಸಹ ಮಾಲೀಕ ಹಾಗೂ ಬಾಲಿವುಡ್‌ ತಾರೆ ಶಾರೂಕ್ ಖಾನ್ ಅವರ ವಿರುದ್ಧವೂ ಆಕ್ರೋಶ ವ್ಯಕ್ತವಾಗಿತ್ತು.

ಮುಸ್ತಫಿಝುರ್ ಅವರನ್ನು ತಂಡದಿಂದ ಕೈಬಿಡಲು ಕೆಕೆಆರ್‌ಗೆ ಬಿಸಿಸಿಐ ಸೂಚಿಸಿದೆ. ಅಗತ್ಯವೆನಿಸಿದರೆ ಫ್ರಾಂಚೈಸಿಯು  ಅವರಿಗೆ ಬದಲಿಯಾಗಿ ಆಟಗಾರರನ್ನು ಕೇಳಬಹುದು. ಬಿಸಿಸಿಐ ಇದಕ್ಕೆ ಅವಕಾಶ ನೀಡಲಿದೆ’ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಶನಿವಾರ ಬೆಳಿಗ್ಗೆ ತಿಳಿಸಿದ್ದರು.

2016ರಿಂದ ಈಚೆಗೆ ಮುಸ್ತಫಿಝುರ್ ಅವರು ಐಪಿಎಲ್‌ನ ಎಂಟು ಆವೃತ್ತಿಗಳಲ್ಲಿ ಆಡಿದ್ದಾರೆ. 2019 ಮತ್ತು 2020ರಲ್ಲಿ ಆಡಿರಲಿಲ್ಲ. ಅವರು ಸನ್‌ರೈಸರ್ಸ್‌ ಹೈದರಾಬಾದ್‌, ಮುಂಬೈ ಇಂಡಿಯನ್ಸ್‌, ಡೆಲ್ಲಿ ಕ್ಯಾಪಿಟಲ್ಸ್‌, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ಪರವೂ ಆಡಿದ್ದಾರೆ. ಕೆಕೆಆರ್ ತಂಡಕ್ಕೆ ಇದೇ ಮೊದಲ ಬಾರಿ ಆಯ್ಕೆಯಾಗಿದ್ದರು.

ದ್ವಿಪಕ್ಷೀಯ ಸರಣಿ ಮೇಲೆ ಕಾರ್ಮೋಡ:

ಸೀಮಿತ ಓವರುಗಳ ಸರಣಿಯನ್ನು ಆಡಲು ಭಾರತ ತಂಡವು, ಬಾಂಗ್ಲಾದೇಶ ಪ್ರವಾಸ ಕೈಗೊಳ್ಳಬೇಕಿತ್ತು. ಅದನ್ನು ಕಳೆದ ತಿಂಗಳು ಮುಂದೂಡಲಾಗಿತ್ತು. ಭಾರತ ತಂಡವು ಸೆಪ್ಟೆಂಬರ್‌ನಲ್ಲಿ ಪ್ರವಾಸ ಕೈಗೊಳ್ಳಲಿದೆ ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಶುಕ್ರವಾರವಷ್ಟೇ ಪ್ರಕಟಿಸಿತ್ತು.

ಆದರೆ ಬಿಸಿಸಿಐ ಈ ವೇಳಾಪಟ್ಟಿಯನ್ನು ಇನ್ನೂ ಖಚಿತಪಡಿಸಿಲ್ಲ. ಬಾಂಗ್ಲಾದೇಶದಲ್ಲಿನ ತ್ವೇಷಮಯ ಪರಿಸ್ಥಿತಿಯನ್ನು ಅವಲೋಕಿಸಿದರೆ, ಈ ಪ್ರವಾಸಕ್ಕೆ ಒಪ್ಪುವ ಸಾಧ್ಯತೆಯೂ ಇಲ್ಲ.

ಬಾಂಗ್ಲಾದೇಶ ತಂಡವು ಮುಂದಿನ ತಿಂಗಳು ಭಾರತದಲ್ಲಿ ಟಿ20 ವಿಶ್ವಕಪ್ ಪಂದ್ಯಗಳನ್ನು ಆಡಬೇಕಿದೆ. ಭಾರತ– ಶ್ರೀಲಂಕಾ ಜಂಟಿ ಆತಿಥ್ಯದಲ್ಲಿ ವಿಶ್ವಕಪ್ ನಿಗದಿಯಾಗಿದೆ.

ಆಗಸ್ಟ್‌ನಲ್ಲಿ, ಬಾಂಗ್ಲಾದೇಶದಲ್ಲಿ ಸರ್ಕಾರ ವಿರೋಧಿ ದಂಗೆಯ ನಂತರ ಅಲ್ಲಿನ ಪ್ರಧಾನಿ ಶೇಖ್ ಹಸೀನಾ ದೇಶ ತೊರೆದು ಭಾರತಕ್ಕೆ ಬಂದಿದ್ದರು. ಅಂದಿನಿಂದಲೂ ಎರಡೂ ದೇಶಗಳ ನಡುವೆ ಸಂಬಂಧ ಹಳಸುತ್ತ ಬಂದಿದೆ. ವಿದ್ಯಾರ್ಥಿಗಳೇ ಮುಂಚೂಣಿಯಲ್ಲಿದ್ದ ಚಳವಳಿ ಹತ್ತಿಕ್ಕಲು ಮುಂದಾದ ಹಸೀನಾ ಅವರಿಗೆ ಅಲ್ಲಿನ ಸರ್ಕಾರ ಮರಣದಂಡನೆ ಶಿಕ್ಷೆ ವಿಧಿಸಿದೆ.

ಮೊಹಮ್ಮದ್ ಯೂನುಸ್‌ ನೇತೃತ್ವದ ಹಂಗಾಮಿ ಸರ್ಕಾರ ಆಡಳಿತ ವಹಿಸಿಕೊಂಡ ಬಳಿಕ ರಾಜಕೀಯ ಸಂಬಂಧ ಬೇಗನೆ ಹದಗೆಡತೊಡಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.