ADVERTISEMENT

IPL: ಅಂಕಪಟ್ಟಿಯಲ್ಲಿ ಮೇಲೇಳುವ ತವಕ, ರೈಡರ್ಸ್ ಎದುರು ಬ್ಯಾಟಿಂಗ್ ಆರಂಭಿಸಿದ ಕಿಂಗ್ಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಮೇ 2023, 14:05 IST
Last Updated 8 ಮೇ 2023, 14:05 IST
ಕೋಲ್ಕತ್ತ ನೈಟ್‌ ರೈಡರ್ಸ್ ತಂಡದ ನಾಯಕ ನಿತೀಶ್ ರಾಣಾ ಹಾಗೂ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶಿಖರ್‌ ಧವನ್‌
ಕೋಲ್ಕತ್ತ ನೈಟ್‌ ರೈಡರ್ಸ್ ತಂಡದ ನಾಯಕ ನಿತೀಶ್ ರಾಣಾ ಹಾಗೂ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶಿಖರ್‌ ಧವನ್‌   

ಕೋಲ್ಕತ್ತ: ಆತಿಥೇಯ ಕೋಲ್ಕತ್ತ ನೈಟ್‌ ರೈಡರ್ಸ್ ವಿರುದ್ಧ ಟಾಸ್‌ ಗೆದ್ದಿರುವ ಪಂಜಾಬ್ ಕಿಂಗ್ಸ್ ಐಪಿಎಲ್‌–2023 ಟಿ20 ಕ್ರಿಕೆಟ್‌ ಟೂರ್ನಿಯ ಇಂದಿನ ಪಂದ್ಯದಲ್ಲಿ ಬ್ಯಾಟಿಂಗ್‌ ಆಯ್ದುಕೊಂಡಿದೆ.

ಎರಡೂ ತಂಡಗಳಿಗೆ ಪ್ಲೇ ಆಫ್‌ ಪ್ರವೇಶಿಸುವ ಹಾದಿ ಕಠಿಣವಾಗಿದೆ. ಉಭಯ ತಂಡಗಳು ಇದುವರೆಗೆ ತಲಾ 10 ಪಂದ್ಯಗಳಲ್ಲಿ ಕಣಕ್ಕಿಳಿದಿವೆ. ಶಿಖರ್ ಧವನ್ ನಾಯಕತ್ವದ ಪಂಜಾಬ್ ಐದು ಗೆಲುವಿನೊಂದಿಗೆ ಹತ್ತು ಅಂಕ ಹೊಂದಿದ್ದರೆ, ನಿತೀಶ್ ರಾಣಾ ನೇತೃತ್ವದ ಕೋಲ್ಕತ್ತ 8 ಅಂಕಗಳನ್ನು ಹೊಂದಿದೆ.

ಹೀಗಾಗಿ ಈಡನ್‌ ಗಾರ್ಡನ್ಸ್‌ನಲ್ಲಿ ನಡೆಯುವ ಪಂದ್ಯದಲ್ಲಿ ಉಭಯ ತಂಡಗಳು ತುರುಸಿನ ಹಣಾಹಣಿ ನಡೆಸುವ ನಿರೀಕ್ಷೆ ಇದೆ. ಈ ತಂಡಗಳು ಮೊದಲ ಸುತ್ತಿನಲ್ಲಿ ಮುಖಾಮುಖಿಯಾಗಿದ್ದಾಗ ಪಂಜಾಬ್ ಗೆದ್ದಿತ್ತು.

ADVERTISEMENT

ಕೋಲ್ಕತ್ತ ತಂಡದಲ್ಲಿರುವ ಆಲ್‌ರೌಂಡರ್ ಸುನಿಲ್ ನಾರಾಯಣ್, ರಹಮನ್‌ವುಲ್ಲಾ ಗರ್ಬಜ್‌, ಆ್ಯಂಡ್ರೆ ರಸೆಲ್ ಹಾಗೂ ರಿಂಕು ಸಿಂಗ್ ಅವರ ಮೇಲೆ ಬ್ಯಾಟಿಂಗ್ ವಿಭಾಗ ಅವಲಂಬಿತವಾಗಿದೆ.

ಬೌಲರ್‌ಗಳಾದ ವರುಣ ಚಕ್ರವರ್ತಿ, ಸುಯಶ್ ಶರ್ಮಾ, ಮಧ್ಯಮವೇಗಿ ಶಾರ್ದೂಲ್ ಠಾಕೂರ್ ಹಾಗೂ ವೈಭವ್ ಅರೋರಾ ಅವರು ಉತ್ತಮ ಲಯದಲ್ಲಿದ್ದಾರೆ. ಇವರ ಮುಂದೆ ಪಂಜಾಬ್ ತಂಡದ ಶಿಖರ್, ಜಿತೇಶ್ ಶರ್ಮಾ, ಲಿಯಾಮ್ ಲಿವಿಂಗ್‌ಸ್ಟೋನ್ ಮತ್ತು ಶಾರೂಕ್ ಖಾನ್ ಅವರಿಗೆ ತಡೆಯೊಡ್ಡುವ ಸವಾಲು ಇದೆ.

ಸ್ಯಾಮ್ ಕರನ್, ಆರ್ಷದೀಪ್ ಸಿಂಗ್ ಪಂಜಾಬ್ ತಂಡದ ಬೌಲಿಂಗ್ ಶಕ್ತಿಯಾಗಿದ್ದಾರೆ.

ಪಂಜಾಬ್‌ಗೆ ಆರಂಭಿಕ ಆಘಾತ
ಬ್ಯಾಟಿಂಗ್ ಆರಂಭಿಸಿರುವ ಪಂಜಾಬ್‌ ಕಿಂಗ್ಸ್‌ಗೆ ಆರಂಭಿಕ ಆಘಾತ ಎದುರಾಗಿದೆ. ನಾಯಕ ಧವನ್‌ ಜೊತೆ ಇನಿಂಗ್ಸ್‌ ಆರಂಭಿಸಿದ ಪ್ರಭ್‌ಸಿಮ್ರನ್‌ ಸಿಂಗ್‌ 12 ರನ್‌ ಗಳಿಸಿ ಔಟಾಗಿದ್ದಾರೆ. ಸದ್ಯ 2 ಓವರ್‌ಗಳು ಮುಗಿದಿದ್ದು, ಕಿಂಗ್ಸ್‌ ಪಡೆ 1 ವಿಕೆಟ್‌ ನಷ್ಟಕ್ಕೆ 21 ರನ್ ಗಳಿಸಿದೆ. ಧವನ್‌ (9) ಹಾಗೂ ಇನ್ನೂ ಖಾತೆ ತೆರೆಯದ ಭಾನುಕ ರಾಜಪಕ್ಸ ಕ್ರೀಸ್‌ನಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.