ADVERTISEMENT

ಕೊಹ್ಲಿ ಒಬ್ಬರೇ ಹನ್ನೊಂದು ಆಟಗಾರರಿಗೆ ಸಮ: ಪಾಕ್ ಹಿರಿಯ ಕ್ರಿಕೆಟಿಗ ಮುಷ್ತಾಕ್

ಪಿಟಿಐ
Published 12 ಜೂನ್ 2020, 16:18 IST
Last Updated 12 ಜೂನ್ 2020, 16:18 IST
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ   

ಕೋಲ್ಕತ್ತ: ‘ವಿರಾಟ್ ಕೊಹ್ಲಿ ಒಬ್ಬರೇ ಹನ್ನೊಂದು ಆಟಗಾರರಿಗೆ ಸಮ’ –

ಪಾಕಿಸ್ತಾನದ ಹಿರಿಯ ಸ್ಪಿನ್ ಬೌಲರ್ ಸಕ್ಲೇನ್ ಮುಷ್ತಾಕ್ ಅವರು ಇಂಗ್ಲೆಂಡನ್‌ ಸ್ಪಿನ್‌ ಜೋಡಿ ಮೋಯಿನ್ ಅಲಿ ಮತ್ತು ಆದಿಲ್ ರಶೀದ್ ಅವರಿಗೆ ಹೇಳಿದ ಮಾತಿದು.ಹೋದ ವರ್ಷ ವಿಶ್ವಕಪ್ ಟೂರ್ನಿಯ ಸಂದರ್ಭದಲ್ಲಿ ಸಕ್ಲೇನ್ ಅವರು ಇಂಗ್ಲೆಂಡ್ ತಂಡಕ್ಕೆ ಸ್ಪಿನ್ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಿದ್ದರು.

ಆ ಸಂದರ್ಭದಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಸಾಮರ್ಥ್ಯ ಮತ್ತು ಅವರನ್ನು ಬೇಗನೆ ಕಟ್ಟಿಹಾಕದಿದ್ದರೆ ಆಗುವ ಪರಿಣಾಮದ ಕುರಿತು ಸಕ್ಲೇನ್ ಈ ರೀತಿ ಹೇಳಿದ್ದರು.

ADVERTISEMENT

‘ವಿರಾಟ್ ವಿಕೆಟ್ ಕಬಳಿಸಿದರೆ ಭಾರತ ತಂಡವನ್ನು ಬೇಗನೆ ಕಟ್ಟಿಹಾಕಲು ಸಾಧ್ಯವಿದೆ. ವಿರಾಟ್ ಹನ್ನೊಂದು ಆಟಗಾರರಿಗೆ ಒಬ್ಬರೇ ಸಮ. ಅವರ ಸಾಮರ್ಥ್ಯ ಅಂತಹದ್ದೆಂದು ಪದೇ ಪದೇ ಇಂಗ್ಲೆಂಡ್ ಬೌಲರ್‌ಗಳಿಗೆ ಹೇಳುತ್ತಿದ್ದೆ’ ಎಂದು ಸಕ್ಲೇನ್ ಇನ್ಸ್ಟಾಗ್ರಾಮ್ ಸಂವಾದದಲ್ಲಿ ನೆನಪಿಸಿಕೊಂಡಿದ್ದಾರೆ.

‘ವಿರಾಟ್ ಮೇಲೆ ಹೆಚ್ಚು ಒತ್ತಡವಿದೆ. ನಿಮ್ಮ ಮೇಲಲ್ಲ ಎಂದು ಹೇಳಿ ಬೌಲರ್‌ಗಳನ್ನು ಹುರಿದುಂಬಿಸುತ್ತಿದ್ದೆ. ಅವರನ್ನು ಇಡೀ ಜಗತ್ತು ವೀಕ್ಷಿಸುತ್ತಿರುತ್ತದೆ. ಅವರಿಂದ ಅಪಾರ ನಿರೀಕ್ಷೆ ಇರುತ್ತದೆ. ಆದ್ದರಿಂದ ಸಹಜವಾಗಿ ಒತ್ತಡವಿರುತ್ತದೆ. ಅದನ್ನು ನೀವು ಗಮನಿಸಬೇಕೆಂದು ಹೇಳುತ್ತಿದ್ದೆ’ ಎಂದಿದ್ದಾರೆ.

2018ರಲ್ಲಿ ಹೆಡಿಂಗ್ಲಿಯಲ್ಲಿ ನಡೆದಿದ್ದ ಏಕದಿನ ಪಂದ್ಯದಲ್ಲಿ ಲೆಗ್‌ಸ್ಪಿನ್ನರ್ ರಶೀದ್, ಕೊಹ್ಲಿ ಅವರನ್ನು ಕ್ಲೀನ್‌ ಬೌಲ್ಡ್ ಮಾಡಿದ್ದರು. ಲೆಗ್‌ಸ್ಟಂಪ್‌ಗೆ ನೇರವಾಗಿ ನೆಲಸ್ಪರ್ಶ ಮಾಡಿದ್ದ ಎಸೆತವು ಮೊನಚಾದ ತಿರುವು ಪಡೆದು ಆಫ್‌ಸ್ಟಂಪ್ ಎಗರಿಸಿತ್ತು. ಆ ಚೆಂಡನ್ನು ‘ವಿರಾಟ್ ವಾಲಾ ಎಸೆತ’ ಎಂದು ಸಕ್ಲೇನ್ ಹೆಸರಿಟ್ಟಿದ್ದರು. ಅದೇ ರೀತಿಯ ಎಸೆತಗಳನ್ನು ನೆಟ್ಸ್‌ನಲ್ಲಿ ನಿರಂತರವಾಗಿ ಅಭ್ಯಾಸ ಮಾಡುವಂತೆ ರಶೀದ್‌ಗೆ ಹೇಳುತ್ತಿದ್ದರು.

‘ಅಗ್ರಕ್ರಮಾಂಕದ ಬ್ಯಾಟ್ಸ್‌ಮನ್‌ಗೆ ಸಹಜವಾಗಿಯೇ ಒಂದು ರೀತಿಯ ಅಹಮಿಕೆ ಇರುತ್ತದೆ. ಅವರಿಗೆ ಒಂದು ಡಾಟ್ ಬಾಲ್‌ ಹಾಕಿದರೆ ಅದರಿಂದ ಅವಮಾನವನ್ನು ಅನುಭವಿಸುತ್ತಾರೆ. ಆಗ ನಂತರದ ಎಸೆತಗಳನ್ನು ಆಡುವ ಧಾವಂತ ಅವರಿಗೆ ಇರುತ್ತದೆ. ಅದನ್ನು ಬೌಲರ್‌ಗಳು ತಾಳ್ಮೆಯಿಂದ ಗಮನಿಸಿ, ಎಸೆತಗಳನ್ನು ಪ್ರಯೋಗಿಸಬೇಕು. ವಿಶ್ವಕಪ್ ಸಂದರ್ಭದಲ್ಲಿ ಇಂಗ್ಲೆಂಡ್ ತಂಡದ ಪೂರ್ವಾಭ್ಯಾಸವೆಲ್ಲವೂ ಕೊಹ್ಲಿಯನ್ನು ಕಟ್ಟಿಹಾಕುವುದರ ಸುತ್ತಲೇ ಇರುತ್ತಿತ್ತು’ ಎಂದು ಹೇಳಿದರು.

ರಶೀದ್ ಮತ್ತು ಅಲಿ ಅವರು ತಮ್ಮ ವೃತ್ತಿಜೀವನದಲ್ಲಿ ತಲಾ ಆರು ಸಲ ವಿರಾಟ್ ವಿಕೆಟ್ಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.