ADVERTISEMENT

ಐಸಿಸಿ ಟ್ವೆಂಟಿ-20 ವಿಶ್ವಕಪ್ ತಂಡದಲ್ಲಿ ಕೊಹ್ಲಿ, ಯಾದವ್‌ಗೆ ಸ್ಥಾನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ನವೆಂಬರ್ 2022, 11:27 IST
Last Updated 14 ನವೆಂಬರ್ 2022, 11:27 IST
ವಿರಾಟ್ ಕೊಹ್ಲಿ ಹಾಗೂ ಸೂರ್ಯಕುಮಾರ್ ಯಾದವ್
ವಿರಾಟ್ ಕೊಹ್ಲಿ ಹಾಗೂ ಸೂರ್ಯಕುಮಾರ್ ಯಾದವ್   

ಮೆಲ್ಬರ್ನ್: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯ 'ಅತ್ಯಂತ ಮೌಲ್ಯಯುತ ತಂಡ'ದಲ್ಲಿ ಭಾರತದ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ ಹಾಗೂ ಸೂರ್ಯಕುಮಾರ್ ಯಾದವ್ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ವಿರುದ್ಧ ಸೋತ ಭಾರತ ತಂಡದ ಟ್ರೋಫಿ ಕನಸು ಭಗ್ನಗೊಂಡಿತ್ತು.

ಆದರೆ ಟೂರ್ನಿಯುದ್ಧಕ್ಕೂ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ ಕೊಹ್ಲಿ, 98.66ರ ಸರಾಸರಿಯಲ್ಲಿ 296 ರನ್ ಗಳಿಸಿದ್ದರು. ಈ ಮೂಲಕ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಎನಿಸಿದ್ದಾರೆ.

ADVERTISEMENT

ಒಟ್ಟು ನಾಲ್ಕು ಅರ್ಧಶತಕಗಳನ್ನು ಕೊಹ್ಲಿ ಬಾರಿಸಿದರು. ಈ ಪೈಕಿ ಪಾಕಿಸ್ತಾನ ವಿರುದ್ಧ ಅಜೇಯ 82, ಬಾಂಗ್ಲಾದೇಶ ವಿರುದ್ಧ ಅಜೇಯ 64, ನೆದರ್ಲೆಂಡ್ ವಿರುದ್ಧ ಅಜೇಯ 62 ಮತ್ತು ಇಂಗ್ಲೆಂಡ್ ವಿರುದ್ಧ ಸೆಮಿಫೈನಲ್‌ನಲ್ಲಿ 50 ರನ್ ಗಳಿಸಿದರು.

ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಸಾಲಿನಲ್ಲಿ ಮೂರನೇ ಸ್ಥಾನದಲ್ಲಿರುವ ಸೂರ್ಯಕುಮಾರ್ ಯಾದವ್ ಒಟ್ಟು 239 ರನ್ ಪೇರಿಸಿದರು. ನೆದರ್ಲೆಂಡ್ ವಿರುದ್ಧ ಅಜೇಯ 51, ದಕ್ಷಿಣ ಆಫ್ರಿಕಾ ವಿರುದ್ಧ 68 ಮತ್ತು ಜಿಂಬಾಬ್ವೆ ವಿರುದ್ಧ ಕೇವಲ 25 ಎಸೆತಗಳಲ್ಲಿ ಅಜೇಯ 61 ರನ್ ಗಳಿಸಿದ್ದರು.

ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ 12ನೇ ಆಟಗಾರನಾಗಿ ಕಾಣಿಸಿಕೊಂಡಿದ್ದಾರೆ.

ಒಟ್ಟು ಆರು ದೇಶಗಳ ಆಟಗಾರರು ಐಸಿಸಿ ಟ್ವೆಂಟಿ-20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಟ್ರೋಫಿ ವಿಜೇತ ಇಂಗ್ಲೆಂಡ್‌ನ ನಾಲ್ವರು, ಪಾಕಿಸ್ತಾನದ ಇಬ್ಬರು ಮತ್ತು ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನ್ಯೂಜಿಲೆಂಡ್‌ನ ತಲಾ ಒಬ್ಬರು ಆಟಗಾರರು ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಐಸಿಸಿ ಟ್ವೆಂಟಿ-20 ವಿಶ್ವಕಪ್ 2022 ತಂಡ ಇಂತಿದೆ:

1. ಅಲೆಕ್ಸ್ ಹೇಲ್ಸ್ - ಇಂಗ್ಲೆಂಡ್ (212 ರನ್, ಸರಾಸರಿ 42.40, ಸ್ಟ್ರೈಕ್‌ರೇಟ್ 147.22)
2. ಜೋಸ್ ಬಟ್ಲರ್ - ಇಂಗ್ಲೆಂಡ್ (225 ರನ್, ಸರಾಸರಿ 45, ಸ್ಟ್ರೈಕ್‌ರೇಟ್ 144.23)
3. ವಿರಾಟ್ ಕೊಹ್ಲಿ - ಭಾರತ (296 ರನ್, ಸರಾಸರಿ 98.66)
4. ಸೂರ್ಯಕುಮಾರ್ ಯಾದವ್ - ಭಾರತ (239 ರನ್, ಸ್ಟ್ರೈಕ್‌ರೇಟ್ 189.68)
5. ಗ್ಲೆನ್ ಪಿಲಿಪ್ಸ್ - ನ್ಯೂಜಿಲೆಂಡ್ (201 ರನ್, ಸರಾಸರಿ 40.20, ಸ್ಟ್ರೈಕ್‌ರೇಟ್ 158.26)
6. ಸಿಕಂದರ್ ರಾಜಾ - ಜಿಂಬಾಬ್ವೆ (219 ರನ್, ಸ್ಟ್ರೈಕ್‌ರೇಟ್ 147.97)
7. ಶದಾಬ್ ಖಾನ್ - ಪಾಕಿಸ್ತಾನ (98 ರನ್, ಸ್ಟ್ರೈಕ್‌ರೇಟ್ 168.96, 11 ವಿಕೆಟ್)
8. ಸ್ಯಾಮ್ ಕರನ್ - ಇಂಗ್ಲೆಂಡ್ (ವಿಕೆಟ್ 13)
9. ಏನ್ರಿಚ್ ನಾಕಿಯಾ - ದಕ್ಷಿಣ ಆಫ್ರಿಕಾ (ವಿಕೆಟ್ 11)
10. ಮಾರ್ಕ್ ವುಡ್ - ಇಂಗ್ಲೆಂಡ್ (ವಿಕೆಟ್ 9)
11. ಶಾಹೀನ್ ಶಾ ಅಫ್ರಿದಿ - ಪಾಕಿಸ್ತಾನ (ವಿಕೆಟ್ 11)
12. ಹಾರ್ದಿಕ್ ಪಾಂಡ್ಯ - ಭಾರತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.