ADVERTISEMENT

ಕೆಎಸ್‌ಸಿಎಗೆ ವಿಳಂಬವಿಲ್ಲದೆ ಚುನಾವಣೆ ನಡೆಸಿ: ವೆಂಕಟೇಶ್ ಪ್ರಸಾದ್ ತಂಡ ಒತ್ತಾಯ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2025, 23:30 IST
Last Updated 27 ಅಕ್ಟೋಬರ್ 2025, 23:30 IST
ವೆಂಕಟೇಶ್ ಪ್ರಸಾದ್
ವೆಂಕಟೇಶ್ ಪ್ರಸಾದ್   

ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್‌ಸಿಎ) ನೂತನ ಆಡಳಿತ ಮಂಡಳಿ ಚುನಾವಣೆಯಲ್ಲಿ ಸ್ಪರ್ಧಿಸಲು ಆಕಾಂಕ್ಷಿಯಾಗಿರುವ ಭಾರತದ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ನೇತೃತ್ವದ ತಂಡವು, ಹಾಲಿ ಆಡಳಿತಗಾರರು ಮತ್ತಷ್ಟು ವಿಳಂಬ ಮಾಡದೇ ಚುನಾವಣೆ ನಡೆಸಬೇಕು ಎಂದು ಒತ್ತಾಯಿಸಿದೆ.

‘ನಾವೆಲ್ಲರೂ ಚುನಾವಣೆ ಘೋಷಣೆಗಾಗಿ ಕಾಯುತ್ತಿದ್ದೇವೆ. ಸಂಸ್ಥೆಯ ಬೈಲಾ ಪ್ರಕಾರ ಸೆಪ್ಟೆಂಬರ್ 30ರ ಮೊದಲು ಚುನಾವಣೆ ನಡೆದು, ಈ ಹೊತ್ತಿಗೆ ಹೊಸ ಆಡಳಿತ ಮಂಡಳಿಯು ಅಧಿಕಾರ ವಹಿಸಿಕೊಳ್ಳಬೇಕಿತ್ತು’ ಎಂದು ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಪ್ರಸಾದ್ ಹೇಳಿದರು.

‘ಸಂಸ್ಥೆಯ ಸುಗಮ ಕಾರ್ಯನಿರ್ವಹಣೆಗಾಗಿ ಚುನಾವಣಾ ಪ್ರಕ್ರಿಯೆಯನ್ನು ಆದಷ್ಟು ಬೇಗ ಪ್ರಾರಂಭಿಸಬೇಕು’ ಎಂದು ಕೆಎಸ್‌ಸಿಎ ಮಾಜಿ ಖಜಾಂಚಿ ವಿನಯ್ ಮೃತ್ಯುಂಜಯ ಮತ್ತು ಭಾರತ ಮಹಿಳಾ ತಂಡದ ಮಾಜಿ ನಾಯಕಿ ಶಾಂತಾ ರಂಗಸ್ವಾಮಿ ಸಮ್ಮುಖದಲ್ಲಿ ಪ್ರಸಾದ್ ಒತ್ತಾಯಿಸಿದರು.

ADVERTISEMENT

ಬಿಸಿಸಿಐಯಲ್ಲಿ ಪ್ರಸ್ತುತ ಖಜಾಂಚಿಯಾಗಿರುವ ರಘುರಾಮ್ ಭಟ್ ನೇತೃತ್ವದ ಆಡಳಿತ ಮಂಡಳಿಯ ಅಧಿಕಾರಾವಧಿ ಸೆ.30 ರಂದು ಕೊನೆಗೊಂಡಿದೆ. ಆದರೆ, ಚುನಾವಣೆಗೆ ನಿರ್ದಿಷ್ಟ ದಿನಾಂಕವನ್ನು ಇನ್ನೂ ಘೋಷಿಸಲಾಗಿಲ್ಲ. ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಚುನಾವಣೆ ನಡೆಯಲಿದೆ ಎಂಬ ಊಹಾಪೋಹವಿತ್ತು.

ಜೂನ್‌ನಲ್ಲಿ ಐಪಿಎಲ್ ಟ್ರೋಫಿ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಜಯೋತ್ಸವದ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತದ ನೈತಿಕ ಹೊಣೆ ಹೊತ್ತು ಎ.ಶಂಕರ್ ಮತ್ತು ಇ.ಎಸ್. ಜೈರಾಮ್ ರಾಜೀನಾಮೆ ನೀಡಿದ ನಂತರ ಕೆಎಸ್‌ಸಿಎಗೆ ಚುನಾಯಿತ ಕಾರ್ಯದರ್ಶಿ ಮತ್ತು ಖಜಾಂಚಿ ಇಲ್ಲದಂತಾಗಿದೆ. 

‘ಸಂಸ್ಥೆಯಲ್ಲಿ ಈಗ ಅಧ್ಯಕ್ಷ, ಕಾರ್ಯದರ್ಶಿ, ಖಜಾಂಚಿ ಅಥವಾ ಉಪಾಧ್ಯಕ್ಷರೂ ಇಲ್ಲ. ಆದ್ದರಿಂದ ಚುನಾವಣೆಗೆ ದಿನಾಂಕಗಳನ್ನು ಘೋಷಿಸುವ ಸಮಯ ಬಂದಿದೆ. ವಾಸ್ತವವಾಗಿ 45 ದಿನಗಳಲ್ಲಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂಬ ನಿಯಮವಿದೆ’ ಎಂದು ವಿನಯ್ ಹೇಳಿದರು. 

ತಮ್ಮ ತಂಡದಲ್ಲಿರುವ ಕೆಲವು ಸ್ಪರ್ಧಿಗಳ ನಾಮನಿರ್ದೇಶನಗಳನ್ನು ತಿರಸ್ಕರಿಸುವ ಪ್ರಯತ್ನದ ಭಾಗವಾಗಿ ಹಾಲಿ ಆಡಳಿತ ನಡೆಸುತ್ತಿರುವವರು ಒಂಬತ್ತು ವರ್ಷಗಳ ಷರತ್ತನ್ನು ‘ತಪ್ಪಾಗಿ ಅರ್ಥೈಸಿಕೊಳ್ಳುತ್ತಿದ್ದಾರೆ’ ಎಂದು ವಿನಯ್ ಆರೋಪಿಸಿದರು.

ಏತನ್ಮಧ್ಯೆ, ‘ತಂಡದ ಅಭ್ಯರ್ಥಿಗಳನ್ನು ಅನರ್ಹಗೊಳಿಸುವುದನ್ನು ತಡೆಯಲು ನಾನು ನ್ಯಾಯಾಲಯದಿಂದ ತಾತ್ಕಾಲಿಕ ತಡೆಯಾಜ್ಞೆ ಪಡೆದಿದ್ದೇನೆ’ ಎಂದು ಶಾಂತಾ ಹೇಳಿದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಲು ಸಂಜಯ್ ಪೋಲ್ (ಹಂಗಾಮಿ ಅಧ್ಯಕ್ಷರು) ನಿರಾಕರಿಸಿದರು. ಎಂ.ಎಸ್. ವಿನಯ್ (ಹಂಗಾಮಿ ಕಾರ್ಯದರ್ಶಿ) ಅವರು ಕರೆಯನ್ನು ಸ್ವೀಕರಿಸಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.