ADVERTISEMENT

ಧೋನಿ ನಾಯಕರಾಗಿದ್ದಾಗಲೂ ನಮ್ಮ ಮಾರ್ಗದರ್ಶಕರಾಗಿದ್ದರು: ರಾಹುಲ್

ಪಿಟಿಐ
Published 20 ಅಕ್ಟೋಬರ್ 2021, 10:39 IST
Last Updated 20 ಅಕ್ಟೋಬರ್ 2021, 10:39 IST
ಕೆ.ಎಲ್. ರಾಹುಲ್
ಕೆ.ಎಲ್. ರಾಹುಲ್   

ದುಬೈ: ಐಸಿಸಿ ಟ್ವೆಂಟಿ-20 ವಿಶ್ವಕಪ್‌ ಟೂರ್ನಿಯಲ್ಲಿ ಮಾರ್ಗದರ್ಶಕರಾಗಿ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಉಪಸ್ಥಿತಿಯಿಂದ ಡ್ರೆಸ್ಸಿಂಗ್ ಕೊಠಡಿಯಲ್ಲಿ ಶಾಂತ ಭಾವಮೂಡಲಿದೆ ಎಂದು ಟೀಮ್ ಇಂಡಿಯಾ ಆಟಗಾರ ಕೆ.ಎಲ್. ರಾಹುಲ್ ಅಭಿಪ್ರಾಯಪಟ್ಟಿದ್ದಾರೆ.

ಅಕ್ಟೋಬರ್ 24ರಂದು ಪಾಕಿಸ್ತಾನ ವಿರುದ್ಧ ಭಾರತ ತಂಡವು ತನ್ನ ವಿಶ್ವಕಪ್ ಅಭಿಯಾನವನ್ನು ಆರಂಭಿಸಲಿದೆ. ರೋಹಿತ್ ಶರ್ಮಾ ಅವರೊಂದಿಗೆ ರಾಹುಲ್ ಆರಂಭಿಕರಾಗಿಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.

'ನಿಶ್ಸಂಶಯವಾಗಿ ಧೋನಿ ತಂಡಕ್ಕೆ ಮರಳಿರುವುದು ಅದ್ಭುತ ಭಾವನೆ ಉಂಟು ಮಾಡಿದೆ. ನಾವೆಲ್ಲರೂ ಅವರ ನಾಯಕತ್ವದಲ್ಲಿ ಆಡಿದ್ದೇವೆ. ಅವರು ನಾಯಕರಾಗಿದ್ದಾಗಲೂ ನಮ್ಮ ಪಾಲಿಗೆ ಮಾರ್ಗದರ್ಶಕರಾಗಿದ್ದರು' ಎಂದು ರಾಹುಲ್ ತಿಳಿಸಿದರು.

'ಮಹಿ ಕ್ಯಾಪ್ಟನ್ ಆಗಿದ್ದಾಗ ಅವರ ಸಾನಿಧ್ಯವನ್ನು ಇಷ್ಟಪಟ್ಟಿದ್ದೆವು. ಅವರು ಡ್ರೆಸ್ಸಿಂಗ್ ಕೊಠಡಿಯಲ್ಲಿರುವುದರಿಂದ ಶಾಂತ ಭಾವನೆ ಮೂಡಲಿದೆ. ಮೊದಲ ಎರಡು-ಮೂರು ದಿನಗಳಲ್ಲೇ ಅವರೊಂದಿಗೆ ಸಮಯ ಕಳೆಯುವುದನ್ನು ಆನಂದಿಸಿದ್ದೇನೆ. ಕ್ರಿಕೆಟ್‌ ಹಾಗೂ ನಾಯಕತ್ವದಲ್ಲಿ ಅವರಿಂದ ಜ್ಞಾನ ಗಿಟ್ಟಿಸುವುದನ್ನು ಎದುರು ನೋಡುತ್ತಿದ್ದೇನೆ' ಎಂದು ಹೇಳಿದರು.

ಇದೀಗಷ್ಟೇ ಧೋನಿ, ಐಪಿಎಲ್‌ನಲ್ಲಿ ಚೆನ್ನೈ ತಂಡಕ್ಕೆ ನಾಲ್ಕನೇ ಟ್ರೋಫಿ ದೊರಕಿಸಿಕೊಟ್ಟಿದ್ದರು. 'ಧೋನಿ ಫಿಟ್ ಆಗಿದ್ದು, ಯುವ ಆಟಗಾರರಿಗೂ ಕಠಿಣ ಸ್ಪರ್ಧೆಯನ್ನು ಒಡ್ಡಬಲ್ಲರು ಎಂದು ನಾನು ಭಾವಿಸುತ್ತೇನೆ' ಎಂದು ತಿಳಿಸಿದರು.

ತಮ್ಮ ವೈಯಕ್ತಿಕ ಪ್ರದರ್ಶನದ ಬಗ್ಗೆ ಪ್ರತಿಕ್ರಿಯಿಸಿದ ರಾಹುಲ್, 'ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿರುವುದು ನೆರವಾಗಿದೆ. ಐಪಿಎಲ್‌ನಲ್ಲಿ ಆಡಿರುವುದು ಇಲ್ಲಿನ ಪರಿಸ್ಥಿತಿಗೆ ಹೊಂದಿಕೊಂಡುವಿಶ್ವಕಪ್‌ಗೆ ಸಜ್ಜಾಗಲುಸಹಕಾರಿಯಾಗಿದೆ' ಎಂದರು.

ಏತನ್ಮಧ್ಯೆ ಬಯೋಬಬಲ್ ಕಠಿಣವೆನಿಸಿದರೂ ಸಹ ಆಟಗಾರರೊಂದಿಗೆ ಹೆಚ್ಚಿನ ಸಮಯ ಕಳೆಯಲು ನೆರವಾಗಿದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.