ದಾನಿಶ್ ಮಾಲೆವಾರ್
ನಾಗ್ಪುರ: ಆರಂಭ ಆಟಗಾರ ಧ್ರುವ್ ಶೋರೆ (74, 109ಎ, 4x9) ಅವರ ಸೊಗಸಾದ ಆಟ ಮತ್ತು ದಾನಿಶ್ ಮಾಲೆವಾರ್ (79, 157ಎ) ಅವರ ಕೆಚ್ಚೆದೆಯ ಆಟದಿಂದ ವಿದರ್ಭ ತಂಡ, ಸೋಮವಾರ ಮುಂಬೈ ವಿರುದ್ಧ ಆರಂಭವಾದ ರಣಜಿ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ದಿನದ ಕೊನೆಗೆ 5 ವಿಕೆಟ್‌ಗೆ 308 ರನ್‌ಗಳ ಗೌರವಾರ್ಹ ಮೊತ್ತ ಗಳಿಸಿತು.
ಕನ್ನಡಿಗ ಕರುಣ್ ನಾಯರ್ (45, 70ಎ, 4x6) ಅವರು ಮತ್ತೊಂದು ದೊಡ್ಡ ಇನಿಂಗ್ಸ್ ಆಡಲು ಸಜ್ಜಾಗುತ್ತಿರುವಂತೆ ಶಿವಂ ದುಬೆ ಬೌಲಿಂಗ್‌ನಲ್ಲಿ ವಿಕೆಟ್ ಕೀಪರ್ ಆಕಾಶ್ ಆನಂದ್‌ಗೆ ಕ್ಯಾಚ್ ಆದರು.
ವಿದರ್ಭದ ಯಶಸ್ವಿ ಬ್ಯಾಟರ್ ಯಶ್ ರಾಥೋಡ್ 47 ರನ್ (86ಎ) ಗಳಿಸಿ ಅಜೇಯರಾಗಿ ಉಳಿದಿದ್ದಾರೆ. ಅವರೊಡನೆ ನಾಯಕ ಅಕ್ಷಯ್ ವಾಡಕರ್ 13 ರನ್ (35ಎ) ಗಳಿಸಿ ಆಟ ಕಾದಿರಿಸಿದ್ದಾರೆ. ಇವರಿಬ್ಬರು ಮುರಿಯದ ಆರನೇ ವಿಕೆಟ್‌ಗೆ 47 ರನ್ ಸೇರಿಸಿದ್ದು ತಂಡದ ಮೊತ್ತ 300 ದಾಟಿಸಿದ್ದಾರೆ.
ಸ್ಪಿನ್ನರ್ ಶಮ್ಸ್ ಮುಲಾನಿ (44ಕ್ಕೆ2) ಪರಿಣಾಮಕಾರಿ ಎನಿಸಿದರು. ಶಿವಂ ದುಬೆ 35 ರನ್ನಿಗೆ 2 ವಿಕೆಟ್ ಪಡೆದರು. ಇದರಲ್ಲಿ ಒಂದು ವಿಕೆಟ್‌ನ ಶ್ರೇಯಸ್ಸು ಸೂರ್ಯಕುಮಾರ್ ಯಾದವ್ ಅವರಿಗೂ ಸಲ್ಲಬೇಕು. ಪಾರ್ಥ ರೇಖಡೆ (23) ಅವರ ಕ್ಯಾಚನ್ನು ಮೂರನೇ ಸ್ಲಿಪ್‌ನಲ್ಲಿದ್ದ ಸೂರ್ಯ ಒಂದೇ ಕೈಯಲ್ಲಿ ಹಿಡಿದ ರೀತಿ ಅಮೋಘವಾಗಿತ್ತು.
ಆರಂಭ ಆಟಗಾರ ಅಥರ್ವ ತೈಡೆ (4) ಮಾತ್ರ ಹೆಚ್ಚುಹೊತ್ತು ನಿಲ್ಲಲಿಲ್ಲ. ಆದರೆ ಜೊತೆಯಾಟಗಳಿಂದ ವಿದರ್ಭ ಇನಿಂಗ್ಸ್ ಕಟ್ಟಿಕೊಂಡಿತು. ಶೋರೆ ಮತ್ತು ರೇಖಡೆ 54 ರನ್ ಸೇರಿಸಿದರು. ಶೋರೆ ಮತ್ತು ದಾನಿಸ್ ನಡುವೆ ಮೂರನೇ ವಿಕೆಟ್‌ಗೆ 51 ರನ್ ಹರಿದುಬಂದವು. ದಾನಿಶ್ ಮತ್ತು ಕರುಣ್ ನಾಯರ್ ನಾಲ್ಕನೇ ವಿಕೆಟ್‌ಗೆ 78 ರನ್ ಸೇರಿಸಿ ಮುಂಬೈ ಹಿಡಿತ ಪಡೆಯದಂತೆ ನೋಡಿಕೊಂಡರು.
ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ವಿದರ್ಭ: 88 ಓವರುಗಳಲ್ಲಿ 5 ವಿಕೆಟ್‌ಗೆ 308 (ಧ್ರುವ್ ಶೋರೆ 74, ದಾನಿಶ್ ಮಾಲೇವಾರ್ 79, ಕರುಣ್ ನಾಯರ್ 45, ಯಶ್ ರಾಥೋಡ್ ಬ್ಯಾಟಿಂಗ್ 47, ಶಮ್ಸ್ ಮುಲಾನಿ 44ಕ್ಕೆ2, ಶಿವಂ ದುಬೆ 35ಕ್ಕೆ2) ವಿರುದ್ಧ ಮುಂಬೈ.
ನೆಲಕಚ್ಚಿ ಆಡಿದ ಕೇರಳ
ಅಹಮದಾಬಾದ್: ಅನುಭವಿ ಆಟಗಾರ ಹಾಗೂ ನಾಯಕ ಸಚಿನ್ ಬೇಬಿ ಅವರ ಅರ್ಧ ಶತಕದ ನೆರವಿನಿಂದ ಕೇರಳ ತಂಡ ಇನ್ನೊಂದು ಸೆಮಿಫೈನಲ್‌ನಲ್ಲಿ ಆತಿಥೇಯ ಗುಜರಾತ್ ವಿರುದ್ಧ ಸೋಮವಾರ ಮೊದಲ ದಿನದಾಟ ಮುಗಿದಾಗ 89 ಓವರುಗಳಲ್ಲಿ 4 ವಿಕೆಟ್‌ಗೆ 206 ರನ್ ಗಳಿಸಿದೆ. 36 ವರ್ಷ ವಯಸ್ಸಿನ ಎಡಗೈ ಆಟಗಾರ ಸಚಿನ್ 193 ಎಸೆತ ಎದುರಿಸಿ ಅಜೇಯ 69 ರನ್ ಗಳಿಸಿದರು. ಮೊಹಮ್ಮದ್ ಅಜರುದ್ದೀನ್ (ಅಜೇಯ 30 66ಎ 4x8) ಅವರಿಗೆ ಬೆಂಬಲ ನೀಡಿದರು. ಆರಂಭ ಆಟಗಾರ ಅಕ್ಷಯ್ ಚಂದ್ರನ್ ರೋಹನ್ ಕುನ್ನುಮಾಳ್ ಜಲಜ್ ಸಕ್ಸೇನಾ ತಲಾ 30 ರನ್ ಗಳಿಸಿದರು. ವರುಣ್ ನಾಯನಾರ್ ಗಳಿಸಿದ್ದು 10 ರನ್‌ಗಳಾದರೂ (55ಎ) ಒಂದು ಗಂಟೆ ಆಡಿದರು! ಗುಜರಾತ್ ಕಡೆ ಅರ್ಜನ್ ನಾಗ್ವಸ್ವಲ್ಲಾ ಪ್ರಿಯಜಿತ್ ಸಿನ್ಹ ಜಡೇಜ ಮತ್ತು ರವಿ ಬಿಷ್ಣೋಯಿ ತಲಾ ಒಂದು ವಿಕೆಟ್ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.