ರೋಹಿತ್ ಶರ್ಮಾ
(ಪ್ರಜಾವಾಣಿ ಚಿತ್ರ)
ಬೆಂಗಳೂರು: ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಪ್ರಕಟಿಸಿರುವ ವರ್ಷದ ಪುರುಷರ ಏಕದಿನ ಕ್ರಿಕೆಟ್ ತಂಡ 2024ರಲ್ಲಿ ಸ್ಥಾನ ಪಡೆಯುವಲ್ಲಿ ಭಾರತೀಯ ಆಟಗಾರರು ವಿಫಲರಾಗಿದ್ದಾರೆ.
ಮತ್ತೊಂದೆಡೆ 2024ರ ಐಸಿಸಿ ವರ್ಷದ ಮಹಿಳಾ ಏಕದಿನ ಕ್ರಿಕೆಟ್ ತಂಡದಲ್ಲಿ ಭಾರತದ ಇಬ್ಬರು ಆಟಗಾರ್ತಿಯರು ಕಾಣಿಸಿಕೊಂಡಿದ್ದಾರೆ.
ಐಸಿಸಿ, ವರ್ಷದ ಪುರುಷ ಹಾಗೂ ಮಹಿಳಾ ಏಕದಿನ ತಂಡಗಳನ್ನು ಘೋಷಿಸಿದೆ. ಪುರುಷರ ತಂಡದಲ್ಲಿ ಶ್ರೀಲಂಕಾದ ನಾಲ್ವರು ಆಟಗಾರರು ಕಾಣಿಸಿಕೊಂಡಿದ್ದಾರೆ.
ಪುರುಷರ ತಂಡದಲ್ಲಿ ಭಾರತದ ಜತೆ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್‌ನ ಯಾವನೇ ಆಟಗಾರನೂ ಸ್ಥಾನ ಗಿಟ್ಟಿಸಿಕೊಂಡಿಲ್ಲ ಎಂಬುದು ಗಮನಾರ್ಹವೆನಿಸಿದೆ.
ಚರಿತ ಅಸಲಂಕ ತಂಡದ ಕಪ್ತಾನರಾಗಿ ಆಯ್ಕೆಯಾಗಿದ್ದು, ಕುಸಾಲ್ ಮೆಂಡಿಸ್‌ಗೆ ವಿಕೆಟ್ ಕೀಪರ್ ಹೊಣೆ ಲಭಿಸಿದೆ.
ಪಾಕಿಸ್ತಾನದ ಸೈಮ್ ಅಯುಬ್ ಮತ್ತು ಅಫ್ಗಾನಿಸ್ತಾನದ ರಹಮಾನುಲ್ಲಾ ಗುರ್ಬಾಜ್ ಆರಂಭಿಕ ಬ್ಯಾಟರ್‌ಗಳಾಗಿದ್ದಾರೆ. ಶ್ರೀಲಂಕಾದ ಪಥುಮ್ ನಿಸ್ಸಾಂಕ ಮೂರನೇ ಕ್ರಮಾಂಕದಲ್ಲಿದ್ದಾರೆ.
ವೆಸ್ಟ್‌ಇಂಡೀಸ್‌ನ ಶೆರ್ಫಾನೆ ರುಥರ್‌ಫಾರ್ಡ್, ಅಫ್ಗಾನಿಸ್ತಾನದ ಅಜ್ಮತುಲ್ಲಾ ಒಮರ್‌ಝಾಯಿ, ಘಜನ್‌ಫರ್, ಶ್ರೀಲಂಕಾದ ವನಿಂದು ಹಸರಂಗ ಮತ್ತು ಪಾಕಿಸ್ತಾನದ ಶಾಹೀನ್ ಶಾ ಅಫ್ರಿದಿ ಹಾಗೂ ಹ್ಯಾರಿಸ್ ರೌಫ್ ಸಹ ತಂಡದಲ್ಲಿದ್ದಾರೆ.
ಮಹಿಳಾ ತಂಡದಲ್ಲಿ ಆರಂಭಿಕ ಆಟಗಾರ್ತಿಯಾಗಿ ಸ್ಮತಿ ಮಂದಾನ ಸ್ಥಾನ ಪಡೆದಿದ್ದಾರೆ. ದೀಪ್ತಿ ಶರ್ಮಾ ಆಲ್‌ರೌಂಡರ್ ಆಟಗಾರ್ತಿಯಾಗಿ ಗುರುತಿಸಿಕೊಂಡಿದ್ದಾರೆ.
28 ವರ್ಷದ ಮಂದಾನ 2024ನೇ ಸಾಲಿನ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಎನಿಸಿದ್ದಾರೆ. 13 ಪಂದ್ಯಗಳಲ್ಲಿ ಒಟ್ಟು 747 ರನ್ ಕಲೆ ಹಾಕಿದ್ದಾರೆ. ಐಸಿಸಿ ವರ್ಷದ ಏಕದಿನ ಆಟಗಾರ್ತಿ ಪ್ರಶಸ್ತಿ ರೇಸ್‌ನಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.