ADVERTISEMENT

ಆಸಿಸ್ ಪ್ರವಾಸಕ್ಕೆ ಭಾರತ ತಂಡ: ಸ್ಥಾನ ವಂಚಿತ ಯಾದವ್–ಪಟೇಲ್ ಬಗ್ಗೆ ತಿವಾರಿ ಟ್ವೀಟ್

ಏಜೆನ್ಸೀಸ್
Published 27 ಅಕ್ಟೋಬರ್ 2020, 11:59 IST
Last Updated 27 ಅಕ್ಟೋಬರ್ 2020, 11:59 IST
ಸೂರ್ಯಕುಮಾರ್‌ ಯಾದವ್, ಅಕ್ಷರ್ ಪಟೇಲ್‌
ಸೂರ್ಯಕುಮಾರ್‌ ಯಾದವ್, ಅಕ್ಷರ್ ಪಟೇಲ್‌   

ಬೆಂಗಳೂರು: ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿರುವ ಭಾರತ ತಂಡದಲ್ಲಿಆಲ್‌ರೌಂಡರ್‌ ಅಕ್ಷರ್ ಪಟೇಲ್‌ ಮತ್ತು ಬ್ಯಾಟ್ಸ್‌ಮನ್‌ ಸೂರ್ಯಕುಮಾರ್‌ ಯಾದವ್ ಅವರಿಗೆ ಸ್ಥಾನ ಸಿಗದಿರುವ ಬಗ್ಗೆ ಹಿರಿಯ ಕ್ರಿಕೆಟಿಗ ಮನೋಜ್‌ ತಿವಾರಿ ಪ್ರತಿಕ್ರಿಯಿಸಿದ್ದಾರೆ.

ಈ ವರ್ಷಾಂತ್ಯದಲ್ಲಿ ಆಸ್ಟ್ರೇಲಿಯಾ ಪ್ರವಾಸ ಬೆಳಸಲಿರುವ ಟೀಂ ಇಂಡಿಯಾ, ತವರಿನ ತಂಡದ ವಿರುದ್ಧ ತಲಾ ಮೂರು ಟಿ20, ಏಕದಿನ ಪಂದ್ಯಗಳು ಹಾಗೂ 4 ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಇದಕ್ಕಾಗಿ ಬಿಸಿಸಿಐ ಸೋಮವಾರ ತಂಡ ಪ್ರಕಟಿಸಿದೆ.

ಸುನೀಲ್‌ ಜೋಶಿ ನೇತೃತ್ವದ ಸಮಿತಿಯು ಮೂರೂ ಮಾದರಿಗೆ ತಂಡದ ಆಯ್ಕೆ ಮಾಡಿದ್ದು, ಕೆಲವು ಅಚ್ಚರಿಗಳನ್ನು ನೀಡಿದೆ. ಐಪಿಎಲ್‌ ಪಂದ್ಯದ ವೇಳೆ ಗಾಯಗೊಂಡಿರುವ ರೋಹಿತ್‌ ಶರ್ಮಾ ಅವರ ಬದಲು ಕನ್ನಡಿಗ ಕೆಎಲ್‌ ರಾಹುಲ್‌ ಅವರನ್ನು ಟಿ20 ಮತ್ತು ಏಕದಿನ ತಂಡಕ್ಕೆ ಉಪನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ವೇಗಿ ಇಶಾಂತ್‌ ಶರ್ಮಾ ಅವರು ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ. ಜೊತೆಗೆ ಸದ್ಯ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಆಲ್‌ರೌಂಡರ್‌ ಅಕ್ಷರ್‌ ಪಟೇಲ್‌ ಮತ್ತು ಸೂರ್ಯಕುಮಾರ್ ಯಾದವ್‌ಗೆ ಸ್ಥಾನ ಸಿಕ್ಕಿಲ್ಲ.

ADVERTISEMENT

ಈ ಬಗ್ಗೆ ಪ್ರತಿಕ್ರಿಯಿಸಿರುವ ತಿವಾರಿ, ‘ಅಕ್ಷರ್‌ ಪಟೇಲ್‌ ಮತ್ತು ಸೂರ್ಯಕುಮಾರ್‌ ಯಾದವ್ ಈ ಬಾರಿ ಭಾರತ ತಂಡಕ್ಕೆ ಸೇರ್ಪಡೆಯಾಗದಿರುವುದು ದುರದೃಷ್ಟಕರ. ಕೆಲ ವರ್ಷಗಳ ನಂತರ ಕೆಲವು ಸ್ನೇಹಶೀಲ ಗುಂಪಿನ ಜನರು ನೀವು ತಪ್ಪಾದ ಕಾಲಘಟ್ಟದಲ್ಲಿ ಜನಿಸಿದ್ದೀರಿ/ಆಡಿದ್ದೀರಿ ಎಂದು ಹೇಳಲಿದ್ದಾರೆ. ಆದರೆ, ನೀವು ನಿಮ್ಮ ಪ್ರತಿಸ್ಪರ್ಧಿಗಳೊಂದಿಗೆ ಸುಲಭವಾಗಿ ಆಡಬಹುದಿತ್ತು ಎಂದು ನಾನು ಹೇಳುತ್ತೇನೆ’ ಎಂದಿದ್ದಾರೆ.

ಐಪಿಎಲ್‌ 2020ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಪರ 10 ಇನಿಂಗ್ಸ್‌ಗಳಲ್ಲಿ ಬ್ಯಾಟ್‌ ಬೀಸಿರುವ ಯಾದವ್‌, ಎರಡು ಅರ್ಧಶತಕಗಳೊಂದಿಗೆ 283 ರನ್‌ ಗಳಿಸಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಆಡುತ್ತಿರುವ ಅಕ್ಷರ್,‌ 10 ಪಂದ್ಯಗಳಲ್ಲಿ ಬೌಲಿಂಗ್‌ ಮಾಡಿ ಕೇವಲ 5.78 ಸರಾಸರಿಯಲ್ಲಿ ರನ್ ಬಿಟ್ಟುಕೊಟ್ಟು 8 ವಿಕೆಟ್‌ಗಳನ್ನು ಪಡೆದಿದ್ದಾರೆ. ಜೊತೆಗೆ, 6 ಇನಿಂಗ್ಸ್‌ಗಳಲ್ಲಿ 65 ರನ್ ಗಳಿಸಿದ್ದಾರೆ.

ತಂಡದ ಆಯ್ಕೆ ಸಂಬಂಧ ಪ್ರಕಟಣೆ ಹೊರಡಿಸಿದ್ದ ಬಿಸಿಸಿಐ, ‘ಮುಂಬರುವ ಆಸ್ಟ್ರೇಲಿಯಾ ಪ್ರವಾಸಕ್ಕೆ ತಂಡದ ಆಯ್ಕೆ ಮಾಡಲು ಆಯ್ಕೆ ಸಮಿತಿಯು ವಿಡಿಯೊ ಕಾನ್ಫರೆನ್ಸ್‌ ಮೂಲಕ ಸೋಮವಾರ ಸಭೆ ನಡೆಸಿತು. ಭಾರತವು ಆಸ್ಟ್ರೇಲಿಯಾ ವಿರುದ್ಧ ಮೂರು ಟಿ20, ಮೂರು ಏಕದಿನ ಮತ್ತು ನಾಲ್ಕು ಟೆಸ್ಟ್‌ ಪಂದ್ಯಗಳನ್ನು ಆಡಲಿದೆ’ ಎಂದು ತಿಳಿಸಿತ್ತು.

ತಂಡಗಳು ಹೀಗಿವೆ.
ಟಿ20: ವಿರಾಟ್‌ ಕೊಹ್ಲಿ (ನಾಯಕ), ಶಿಖರ್‌ ಧವನ್‌, ಮಯಾಂಕ್‌ ಅಗರ್ವಾಲ್‌, ಕೆ.ಎಲ್‌ ರಾಹುಲ್‌ (ಉಪ ನಾಯಕ– ವಿಕೆಟ್‌ ಕೀಪರ್‌), ಶ್ರೇಯಸ್‌ ಅಯ್ಯರ್‌, ಮನಿಷ್‌ ಪಾಂಡೆ, ಹರ್ದಿಕ್‌ ಪಾಂಡ್ಯ, ಸಂಜು ಸ್ಯಾಮ್ಸನ್‌ (ವಿಕೆಟ್‌ ಕೀಪರ್‌), ರವೀಂದ್ರ ಜಡೆಜಾ, ವಾಷಿಂಗ್ಟನ್‌ ಸುಂದರ್‌, ಯಜುವೇಂದ್ರ ಚಹಾಲ್‌, ಜಸ್ಪ್ರಿತ್‌ ಬೂಮ್ರಾ, ಮೊಹಮದ್‌ ಶಮಿ, ನವದೀಪ್‌ ಸೈನಿ, ದೀಪಕ್‌ ಚಹರ್‌, ವರುಣ್‌ ಚಕ್ರವರ್ತಿ.

ಏಕದಿನ: ವಿರಾಟ್‌ ಕೊಹ್ಲಿ (ನಾಯಕ), ಶಿಖರ್‌ ಧವನ್‌, ಶುಭ್‌ಮನ್‌ ಗಿಲ್‌, ಕೆ.ಎಲ್‌ ರಾಹುಲ್‌ (ಉಪ ನಾಯಕ– ವಿಕೆಟ್‌ ಕೀಪರ್‌), ಶ್ರೇಯಸ್‌ ಐಯ್ಯರ್‌, ಮನಿಷ್‌ ಪಾಂಡೆ, ಹರ್ದಿಕ್‌ ಪಾಂಡ್ಯ, ಮಯಾಂಕ್‌ ಅಗರ್ವಾಲ್‌, ರವೀಂದ್ರ ಜಡೆಜಾ, ಯಜುವೇಂದ್ರ ಚಹಾಲ್‌, ಕುಲದೀಪ್‌ ಯಾದವ್‌, ಜಸ್‌ಪ್ರೀತ್‌ ಬೂಮ್ರಾ, ಮೊಹಮದ್‌ ಶಮಿ, ನವದೀಪ್‌ ಸೈನಿ, ಶಾರ್ದೂಲ್‌ ಠಾಕೂರ್‌

‌ಟೆಸ್ಟ್‌: ವಿರಾಟ್‌ ಕೊಹ್ಲಿ (ನಾಯಕ), ಮಯಾಂಕ್‌ ಅಗರ್ವಾಲ್‌, ಪೃಥ್ವಿ ಶಾ, ಕೆ.ಎಲ್‌ ರಾಹುಲ್‌, ಚೇತೇಶ್ವರ ಪೂಜಾರಾ, ಅಜಿಂಕ್ಯಾ ರಹಾನೆ (ಉಪ ನಾಯಕ), ಹನುಮ ವಿಹಾರಿ, ಶುಭ್‌ಮನ್‌ ಗಿಲ್‌, ವೃದ್ಧಿಮಾನ್‌ ಸಾಹಾ (ವಿಕೆಟ್‌ ಕೀಪರ್‌), ಜಸ್ಪ್ರಿತ್‌ ಬೂಮ್ರಾ, ಮಹಮದ್‌ ಶಮಿ, ಉಮೇಶ್‌ ಯಾದವ್‌, ನವದೀಪ್‌ ಸೈನಿ, ಕುಲದೀಪ್‌ ಯಾದವ್‌, ರವೀಂದ್ರ ಜಡೆಜಾ, ಆರ್‌. ಅಶ್ವಿನ್‌, ಮಹಮದ್‌ ಸಿರಾಜ್‌

ಈ ಸರಣಿಯು ನವೆಂಬರ್‌ 27ರಿಂದ ಜನವರಿ 19ರ ವರೆಗೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.