ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಪೆವಿಲಿಯನ್‌ನತ್ತ ಹೆಜ್ಜೆ ಇಟ್ಟ ಇಶಾನ್ ಕಿಶನ್
ಪಿಟಿಐ ಚಿತ್ರ
ಹೈದರಾಬಾದ್: ಮುಂಬೈ ಇಂಡಿಯನ್ಸ್ (ಎಂಐ) ವಿರುದ್ಧ ಬುಧವಾರ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಎಚ್) ತಂಡದ ಬ್ಯಾಟರ್ ಇಶಾನ್ ಕಿಶನ್ ಔಟಾದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಚರ್ಚೆಯಾಗುತ್ತಿದೆ. ಮ್ಯಾಚ್ ಫಿಕ್ಸಿಂಗ್ ಆರೋಪಗಳೂ ಕೇಳಿ ಬಂದಿವೆ.
ಇನಿಂಗ್ಸ್‌ನ ಮೂರನೇ ಓವರ್‌ನ ಮೊದಲ ಎಸೆತದಲ್ಲಿ ಕಿಶನ್ ಔಟಾದರು. ದೀಪಕ್ ಚಾಹರ್ ಎಸೆತವನ್ನು ಲೆಗ್‌ಸೈಡ್‌ನತ್ತ ಬಾರಿಸಲು ಮುಂದಾದರು. ಆದರೆ, ಅದು ಸಾಧ್ಯವಾಗಲಿಲ್ಲ. ಚೆಂಡು ವಿಕೆಟ್‌ಕೀಪರ್ ರಿಯಾನ್ ರಿಕೆಲ್ಟನ್ ಕೈಸೇರಿತು. ಈ ವೇಳೆ ಯಾರೊಬ್ಬರೂ ಔಟ್‌ಗಾಗಿ ಮನವಿ ಮಾಡಲಿಲ್ಲ. ಚಾಹರ್ ಮುಂದಿನ ಎಸೆತಕ್ಕಾಗಿ ಹೋಗುತ್ತಿದ್ದರು. ಆದರೆ, ಆನ್ ಫೀಲ್ಡ್ ಅಂಪೈರ್ ವಿನೋದ್ ಶೇಷನ್ ಗೊಂದಲದಲ್ಲಿಯೇ ಔಟ್ ನೀಡಲು ಮುಂದಾದರು.
ಇದನ್ನು ಗಮನಿಸಿದ ಚಾಹರ್, ವಿಕೆಟ್‌ಕೀಪರ್ ಕಡೆಗೆ ನೋಡಿ ಔಟ್ ಮನವಿ ಮಾಡಿದರು. ಈ ಬೆಳವಣಿಗೆ ಮುಂಬೈ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಸೇರಿದಂತೆ ಉಳಿದವರನ್ನೂ ಅಚ್ಚರಿಗೊಳಿಸಿತು.
ಇಷ್ಟೆಲ್ಲ ಆದರೂ, ಕಿಶನ್ ಡಿಆರ್‌ಎಸ್ ತೆಗೆದುಕೊಳ್ಳಲಿಲ್ಲ. ನಗುತ್ತಲೇ ಪೆವಿಲಿಯನ್ ಕಡೆಗೆ ಹೊರಟರು. ಅವರನ್ನು, ಮುಂಬೈ ಆಟಗಾರರು 'ತಲೆ ನೇವರಿಸಿ' ಬೀಳ್ಕೊಟ್ಟರು.
ಅಲ್ಟ್ರಾಎಡ್ಜ್ ಪರಿಶೀಲನೆ ವೇಳೆ ಚೆಂಡು ಬ್ಯಾಟ್‌ಗೆ ತಾಗದಿರುವುದು ಸ್ಪಷ್ಟವಾಗಿತ್ತು. ಅದು ನೇರಪ್ರಸಾರವೂ ಆಯಿತು. ಅಷ್ಟರಲ್ಲಿ ಕಿಶನ್ ಬೌಂಡರಿ ಗೆರೆ ದಾಟಿದ್ದರು.
ಈ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಚರ್ಚೆಯಾಗುತ್ತಿದೆ.
'ಇಶಾನ್ ಕಿಶನ್ ವಿಚಿತ್ರ ರೀತಿಯಲ್ಲಿ ಔಟಾದರು. ಮುಂಬೈ ತಂಡದ ಯಾರೊಬ್ಬರೂ ಔಟ್‌ಗಾಗಿ ಮನವಿ ಮಾಡಲಿಲ್ಲ. ಇಶಾನ್ ಕಿಶನ್ ಕೂಡ ಡಿಆರ್‌ಎಸ್ ತೆಗೆದುಕೊಳ್ಳಲಿಲ್ಲ. ಆದರೂ, ಅಂಪೈರ್ ಔಟ್ ನೀಡಿದು. ಚೆಂಡು ಬ್ಯಾಟ್‌ಗೆ ತಾಗಿಲ್ಲ ಎಂಬುದು ಅಲ್ಟ್ರಾಎಡ್ಜ್ ಪರಿಶೀಲನೆ ವೇಳೆಯೂ ಸ್ಪಷ್ಟವಾಗಿತ್ತು. ಆದರೂ, ಔಟ್ ನೀಡಿದ್ದೇಕೆ? ಫಿಕ್ಸಿಂಗ್ ನಡೆದಿದೆಯೇ?' ಎಂದು ನೆಟ್ಟಿಗರೊಬ್ಬರು ಅನುಮಾನ ವ್ಯಕ್ತಪಡಿಸಿದ್ದಾರೆ.
'ಇಂತಹ ಪ್ರಸಂಗವನ್ನು ಈ ಹಿಂದೆ ನೋಡಿರಲಿಲ್ಲ' ಎಂದಿರುವ ಕೆಲವರು, 'ಈ ಕುರಿತು ತನಿಖೆಯಾಗಬೇಕು' ಎಂದು ಒತ್ತಾಯಿಸಿದ್ದಾರೆ.
ಮುಂಬೈಗೆ ಜಯ
ಹೈದರಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಬೌಲಿಂಗ್ ಆಯ್ದುಕೊಂಡರು. ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ರೈಸರ್ಸ್ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 143 ರನ್ ಗಳಿಸುವಷ್ಟೇ ಶಕ್ತವಾಯಿತು. ಈ ಗುರಿ ಬೆನ್ನತ್ತಿದ ಮುಂಬೈ, ಕೇವಲ 3 ವಿಕೆಟ್ ಕಳೆದುಕೊಂಡು 15.4 ಓವರ್‌ಗಳಲ್ಲೇ 146 ರನ್ ಗಳಿಸಿತು.
ಟೂರ್ನಿಯಲ್ಲಿ 9 ಪಂದ್ಯ ಆಡಿರುವ ಮುಂಬೈ ಪಡೆಗೆ ದಕ್ಕಿದ 5ನೇ ಗೆಲುವು ಇದು. ಇದರೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಜಿಗಿದಿದೆ. 8 ಪಂದ್ಯಗಳನ್ನು ಆಡಿ ಆರರಲ್ಲಿ ಪರಾಭವಗೊಂಡಿರುವ ರೈಸರ್ಸ್ 9ನೇ ಸ್ಥಾನದಲ್ಲೇ ಉಳಿದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.