ADVERTISEMENT

SMATನಲ್ಲಿ ಮಿಂಚಿನ ಬೌಲಿಂಗ್: ಕಡೆಗಣಿಸಿದವರಿಗೆ ಮೈದಾನದಲ್ಲೇ ಉತ್ತರಿಸಿದ ವೇಗಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಡಿಸೆಂಬರ್ 2025, 5:59 IST
Last Updated 5 ಡಿಸೆಂಬರ್ 2025, 5:59 IST
ಭಾರತ ತಂಡದ ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ, ವಿರಾಟ್ ಕೊಹ್ಲಿ ಹಾಗೂ ಆರ್ಷದೀಪ್ ಸಿಂಗ್ 
ಭಾರತ ತಂಡದ ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ, ವಿರಾಟ್ ಕೊಹ್ಲಿ ಹಾಗೂ ಆರ್ಷದೀಪ್ ಸಿಂಗ್    

ಭಾರತದ ಪ್ರಮುಖ ವೇಗದ ಬೌಲರ್‌ಗಳ ಪೈಕಿ ಒಬ್ಬರಾಗಿರುವ ಮೊಹಮ್ಮದ್ ಶಮಿ ದೇಶೀಯ ಕ್ರಿಕೆಟ್‌ನಲ್ಲಿ ತಮ್ಮ ಅಮೋಘ ಬೌಲಿಂಗ್ ಪ್ರದರ್ಶನ ಮುಂದುವರೆಸಿದ್ದಾರೆ. ಸದ್ಯ ನಡೆಯುತ್ತಿರುವ ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಮಿಂಚಿನ ಬೌಲಿಂಗ್ ಪದರ್ಶಿಸಿದ್ದಾರೆ. ಆ ಮೂಲಕ ತಮ್ಮನ್ನು ಕಡೆಗಣಿಸಿರುವ ಆಯ್ಕೆ ಸಮಿತಿಗೆ ತಾವು ತಂಡಕ್ಕೆ ಮರಳಲು ಸಿದ್ಧರಿರುವುದಾಗಿ ಸಂದೇಶ ರವಾನಿಸಿದ್ದಾರೆ.

ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿಯ ಕೊನೆಯ ಲೀಗ್ ಪಂದ್ಯದಲ್ಲಿ ಸರ್ವಿಸಸ್ ತಂಡದ ವಿರುದ್ಧ ಅಮೋಘ ಬೌಲಿಂಗ್ ಪ್ರದರ್ಶಿಸಿದ ಶಮಿ 13 ರನ್‌ ನೀಡಿ ಪ್ರಮುಖ 4 ವಿಕೆಟ್‌ ಕಬಳಿಸಿದರು. ಆ ಮೂಲಕ ಬಂಗಾಳ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಸದ್ಯ, ಆಡಿರುವ 5 ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆಲುವು ಸಾಧಿಸಿರುವ ಅಭಿಮನ್ಯು ಈಶ್ವರನ್ ನಾಯಕತ್ವದ ಬಂಗಾಳ ತಂಡ ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿಯ ಸಿ ಗುಂ‍ಪಿನಲ್ಲಿ ಅಗ್ರಸ್ಥಾನ ಪಡೆಯುವ ಮೂಲಕ ಕ್ವಾಲಿಫೈಯರ್‌ಗೆ ಲಗ್ಗೆ ಇಟ್ಟಿತು.

ADVERTISEMENT

ಆಯ್ಕೆದಾರರಿಗೆ ಶಮಿ ಸಂದೇಶ

ಪ್ರಸ್ತುತ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿ ಹಾಗೂ ಇತ್ತೀಚೆಗೆ ಮುಕ್ತಾಯಗೊಂಡ ಟೆಸ್ಟ್ ಸರಣಿಯಲ್ಲಿ ಭಾರತೀಯ ಬೌಲರ್‌ಗಳು ನೀರಸ ಪ್ರದರ್ಶನ ತೋರುತ್ತಿದ್ದಾರೆ. ವಿಶೇಷವಾಗಿ ವೇಗದ ಬೌಲರ್‌ಗಳು ಪರಿಣಾಮಕಾರಿ ದಾಳಿ ನಡೆಸುವಲ್ಲಿ ವಿಫಲರಾಗುತ್ತಿದ್ದಾರೆ. ಟೀಂ ಇಂಡಿಯಾ ಬೌಲಿಂಗ್ ವಿಭಾಗ ಜಸ್‌ಪ್ರೀತ್ ಬುಮ್ರಾ ಅವರ ಮೇಲೆ ಹೆಚ್ಚಾಗಿ ಅವಲಂಬಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಮೊಹಮ್ಮದ್ ಶಮಿ ಅವರು ಕೊನೆಯದಾಗಿ 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಪರ ಆಡಿದ್ದರು. ಅಂದಿನಿಂದ ಅವರು ಫಿಟ್‌ನೆಸ್ ಸಮಸ್ಯೆ ಎದುರಿಸುತ್ತಿದ್ದಾರೆ ಎಂಬ ಕಾರಣ ನೀಡಿ ಅವರನ್ನು ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ಹೊರಗಿಡಲಾಗಿದೆ. ಸದ್ಯ, ಅವರು ಫಿಟ್ ಆಗಿದ್ದಾರೆ. ಹಾಗೂ ಅಮೋಘ ಲಯದಲ್ಲೂ ಕಾಣಿಸುತ್ತಿರುವುದು ಅವರ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.