ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಎಂ.ಎಸ್. ಧೋನಿ ಬ್ಯಾಟಿಂಗ್ ವೈಖರಿ
ಪಿಟಿಐ ಚಿತ್ರ
ಚೆನ್ನೈ: ಐಪಿಎಲ್‌ನಲ್ಲಿ ಆಡುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರ ಎಂ.ಎಸ್. ಧೋನಿ ಅವರ ಬ್ಯಾಟಿಂಗ್ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಟೀಕೆ ವ್ಯಕ್ತವಾಗಿದೆ.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಧೋನಿ ಅವರ ಬ್ಯಾಟಿಂಗ್, ಟೆಸ್ಟ್ ಇನಿಂಗ್ಸ್‌ನಂತಿತ್ತು ಎಂದು ಕುಟುಕಿರುವ ನೆಟ್ಟಿಗರು, ಕೂಡಲೇ ವಿದಾಯ ಹೇಳಲಿ ಎಂದು ಒತ್ತಾಯಿಸಿದ್ದಾರೆ.
ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 183 ರನ್ ಕಲೆಹಾಕಿತು.
ಈ ಗುರಿ ಬೆನ್ನತ್ತಿದ ಚೆನ್ನೈ, ನಿಗದಿತ ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 158 ರನ್ ಗಳಿಸಲಷ್ಟೇ ಶಕ್ತವಾಯಿತು.
11ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ರವೀಂದ್ರ ಜಡೇಜ (2 ರನ್) ಔಟಾದ ನಂತರ ಧೋನಿ ಕ್ರೀಸ್‌ಗೆ ಇಳಿದರು. 24 ಎಸೆತಗಳಲ್ಲಿ 25 ರನ್ ಗಳಿಸಿದ್ದ ವಿಜಯ್ ಶಂಕರ್ ಮತ್ತೊಂದು ತುದಿಯಲ್ಲಿದ್ದರು.
ಈ ಹಂತದಲ್ಲಿ ತಂಡದ ಗೆಲುವಿಗೆ 56 ಎಸೆತಗಳಲ್ಲಿ 110 ರನ್ ಬೇಕಿತ್ತು. ಆದಾಗ್ಯೂ ಧೋನಿ, ಬೀಸಾಟಕ್ಕೆ ಒತ್ತು ನೀಡಲಿಲ್ಲ. ಗುರಿ ಬೆನ್ನಟ್ಟಿ ತಂಡಕ್ಕೆ ಗೆಲುವು ತಂದುಕೊಡುವುದರಲ್ಲಿ ನಿಸ್ಸೀಮ ಎನಿಸಿರುವ ಅವರು, ಮೊದಲ 18 ಎಸೆತಗಳಲ್ಲಿ ಗಳಿಸಿದ್ದು 14 ರನ್ ಮಾತ್ರ.
ಕೊನೇ ಮೂರು ಓವರ್‌ಗಳಲ್ಲಿ 67 ರನ್ ಬೇಕಿದ್ದಾಗ, (ತಾವೆದುರಿಸಿದ 19ನೇ ಎಸೆತದಲ್ಲಿ) ಸಿಕ್ಸರ್ ಬಾರಿಸಿದರು. ನಂತರ ಆಡಿದ 5 ಎಸೆತಗಳಲ್ಲಿ 7 ರನ್ ಗಳಿಸಿ ತಮ್ಮ ಗಳಿಕೆಯನ್ನು 30 ರನ್‌ಗೆ ಹೆಚ್ಚಿಸಿಕೊಂಡು ಔಟಾಗದೆ ಉಳಿದರು.
ಮತ್ತೊಂದೆಡೆ ಶಂಕರ್ ಸಹ ಪರಿಣಾಮಕಾರಿ ಆಟವಾಡಲಿಲ್ಲ. ಒಟ್ಟು 54 ಎಸೆತ ಎದುರಿಸಿದ ಅವರು 69 ರನ್ ಗಳಿಸಿದರೂ ತಮ್ಮ ತಂಡಕ್ಕೆ ಜಯ ತಂದುಕೊಡಲು ವಿಫಲವಾದರು.
'ಪ್ರತಿ ಓವರ್‌ಗೆ 10ಕ್ಕಿಂತ ಹೆಚ್ಚಿನ ದರದಲ್ಲಿ ರನ್ ಬೇಕಿದ್ದರೂ ಒಂಟಿ ರನ್ ಗಳಿಸುವ ಧೋನಿ, ಸಿಎಸ್‌ಕೆ ಹೊರೆಯಾಗುತ್ತಿದ್ದಾರೆ' ಎಂದು ನೆಟ್ಟಿಗರು ಟೀಕಿಸಿದ್ದಾರೆ.
ಧೋನಿ ಬ್ಯಾಟಿಂಗ್ ಅನ್ನು 'ಟೆಸ್ಟ್ ಮ್ಯಾಚ್ ಇನಿಂಗ್ಸ್' ಎಂದು ಹಲವರು ಕುಟುಕಿದ್ದಾರೆ. ಮತ್ತಷ್ಟು ಮಂದಿ, 'ಧೋನಿ ಈ ರೀತಿ ಬ್ಯಾಟಿಂಗ್ ಮಾಡಿ ತಮ್ಮ ಖ್ಯಾತಿಯನ್ನು ತಾವೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಅದರ ಬದಲು ವಿದಾಯ ಹೇಳಲಿ' ಎಂದು ಒತ್ತಾಯಿಸಿದ್ದಾರೆ.
'ಧೋನಿ ದೊಡ್ಡ ವಂಚಕ. ಗಮನ ಸೆಳೆಯಲು ಮತ್ತು ಸಿಂಪತಿ ಗಿಟ್ಟಿಸಲು ಆಡುತ್ತಾರೆ ಅಷ್ಟೇ' ಎಂಬ ಮಾತುಗಳು ಕೇಳಿಬಂದಿವೆ.
ಅಭಿಮಾನಿಗಳು, ಚಿಯರ್ ಲೀಡರ್ಸ್ ಬೇಸರದಿಂದ ಕುಳಿತಿರುವ ಹಾಗೂ ಆಟಗಾರರು ಡಗೌಟ್‌ನಲ್ಲಿ ನಿದ್ರಿಸುತ್ತಿರುವಂತೆ ಕಾಣುವ ಚಿತ್ರಗಳನ್ನೂ ಹಂಚಿಕೊಳ್ಳಲಾಗುತ್ತಿದೆ.
2019ರ ಸೆಮಿಫೈನಲ್ ನೆನಪು
ಕೆಲವರು 2019ರ ಏಕದಿನ ಕ್ರಿಕೆಟ್ ವಿಶ್ವಕಪ್‌ನ ಸೆಮಿಫೈನಲ್ ಆಟವನ್ನು ಸ್ಮರಿಸಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಆ ಪಂದ್ಯದಲ್ಲಿ ಬಾಕಿ ಎಸೆತಗಳಿಗಿಂತ ಹೆಚ್ಚಿನ ದರದಲ್ಲಿ ರನ್ ಬೇಕಿದ್ದಾಗಲೂ ಮತ್ತು ಮತ್ತೊಂದು ತುದಿಯಲ್ಲಿ ರವೀಂದ್ರ ಜಡೇಜ ಅತ್ಯುತ್ತಮವಾಗಿ ಬ್ಯಾಟ್ ಬೀಸುತ್ತಿದ್ದರೂ, ಧೋನಿ ನಿಧಾನಗತಿಯ ಇನಿಂಗ್ಸ್ ಆಡಿದ್ದನ್ನು ಡೆಲ್ಲಿ ವಿರುದ್ಧದ ಆಟಕ್ಕೆ ಹೋಲಿಸಿದ್ದಾರೆ.
ಆ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂಜಿಲೆಂಡ್ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್‌ಗೆ 239 ರನ್ ಗಳಿಸಿತ್ತು. ಗುರಿ ಬೆನ್ನತ್ತಿದ ಭಾರತ, 96 ರನ್ ಗಳಿಸುವಷ್ಟರಲ್ಲೇ 6 ವಿಕೆಟ್ ಕಳೆದುಕೊಂಡಿತ್ತು.
ಈ ಹಂತದಲ್ಲಿ ಜೊತೆಯಾಗಿದ್ದ ಜಡೇಜ ಹಾಗೂ ಧೋನಿ, 7ನೇ ವಿಕೆಟ್‌ಗೆ 116 ರನ್ ಸೇರಿಸಿ ಕುಸಿತ ತಪ್ಪಿಸಿದ್ದರು. ಆರಂಭದಲ್ಲಿ ರಕ್ಷಣಾತ್ಮಕವಾಗಿ ಆಡಿದರೂ, ಕೊನೆಯಲ್ಲಿ ರನ್ ಗತಿ ಏರಿಸಿದ್ದ ಜಡೇಜ, 59 ಎಸೆತಗಳಲ್ಲಿ 77 ರನ್ ಬಾರಿಸಿದ್ದರು. ಆದರೆ, ಮತ್ತೊಂದು ತುದಿಯಲ್ಲಿದ್ದ ಧೋನಿ, ಕೊನೆವರೆಗೂ ಅಂತಹ ಆಟವಾಡಲಿಲ್ಲ.
49ನೇ ಓವರ್‌ನಲ್ಲಿ ಅವರು ರನೌಟ್ ಆದಾಗ, ಟೀಂ ಇಂಡಿಯಾ ಗೆಲುವಿಗೆ 9 ಎಸೆತಗಳಲ್ಲಿ 24 ರನ್ ಬೇಕಿದ್ದಾಗಿತ್ತು. ಪ್ರಮುಖ ಬ್ಯಾಟರ್‌ಗಳು ಕ್ರೀಸ್‌ನಲ್ಲಿಲ್ಲದ ಕಾರಣ, ಭಾರತದ ವಿಶ್ವಕಪ್ ಜಯದ ಕನಸು ಕಮರಿತ್ತು.
ಎರಡೂ ಇನಿಂಗ್ಸ್‌ಗಳಲ್ಲಿ ಧೋನಿ ಬ್ಯಾಟಿಂಗ್ ಮಾಡುತ್ತಿರುವ ಚಿತ್ರಗಳನ್ನು ಹಂಚಿಕೊಂಡಿರುವ ಕ್ರಿಕೆಟ್ ಪ್ರಿಯರು, ಆಗ (2019ರಲ್ಲಿ) ಭಾರತ ತಂಡದ ನಾಯಕನಾಗಿದ್ದ ವಿರಾಟ್ ಕೊಹ್ಲಿ ಇದ್ದ ಪರಿಸ್ಥಿತಿಯಲ್ಲಿ, ಇದೀಗ ಚೆನ್ನೈ ನಾಯಕ ಋತುರಾಜ್ ಗಾಯಕವಾಡ್ ಇದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಹ್ಯಾಟ್ರಿಕ್ ಸೋಲು
ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ನಾಲ್ಕು ಪಂದ್ಯಗಳನ್ನು ಆಡಿರುವ ಚೆನ್ನೈ, ಮೊದಲ ಪಂದ್ಯದಲ್ಲಿ ಮುಂಬೈ ವಿರುದ್ಧ ಗೆದ್ದಿತ್ತು. ನಂತರ ಹ್ಯಾಟ್ರಿಕ್ ಸೋಲು ಅನುಭವಿಸಿದೆ. ಎರಡು ಮತ್ತು ಮೂರನೇ ಪಂದ್ಯಗಳಲ್ಲಿ ಕ್ರಮವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ರಾಜಸ್ಥಾನ ರಾಯಲ್ಸ್ ಎದುರು ಮುಗ್ಗರಿಸಿತ್ತು.
ಇತ್ತ 25 ರನ್ ಅಂತರದಿಂದ ಗೆದ್ದ ಡೆಲ್ಲಿ ತಂಡ ಅಜೇಯ ಓಟ ಮುಂದುವರಿಸಿದೆ. ಆಡಿರುವ ಮೂರೂ ಪಂದ್ಯಗಳನ್ನು ಜಯಿಸಿ, ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.