ADVERTISEMENT

IPL 2022: ಚೆನ್ನೈ ಆಟಗಾರರಿಗೆ ಹೊಸ ಪೋಷಾಕು

ಮೋಯಿನ್ ಅಲಿಗೆ ವೀಸಾ ಸಮಸ್ಯೆ–ಮೊದಲ ಪಂದ್ಯಕ್ಕೆ ಅಲಭ್ಯ

ಪಿಟಿಐ
Published 23 ಮಾರ್ಚ್ 2022, 19:46 IST
Last Updated 23 ಮಾರ್ಚ್ 2022, 19:46 IST
ಹೊಸ ಪೋಷಾಕಿನಲ್ಲಿ ಮಹೇಂದ್ರಸಿಂಗ್ ಧೋನಿ  –ಟ್ವಿಟರ್ ಚಿತ್ರ 
ಹೊಸ ಪೋಷಾಕಿನಲ್ಲಿ ಮಹೇಂದ್ರಸಿಂಗ್ ಧೋನಿ  –ಟ್ವಿಟರ್ ಚಿತ್ರ    

ಚೆನ್ನೈ/ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ನಾಲ್ಕು ಸಲ ಚಾಂಪಿಯನ್ ಆಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರರರಿಗಾಗಿ ಸಿದ್ಧಪಡಿಸಲಾದ ಹೊಸ ಪೋಷಾಕನ್ನು ಬುಧವಾರ ಬಿಡುಗಡೆ ಮಾಡಲಾಯಿತು.

ಹೊಸ ವಿನ್ಯಾಸದ ಪೋಷಾಕುಗಳನ್ನು ತಂಡದ ನಾಯಕ ಮಹೇಂದ್ರಸಿಂಗ್ ಧೋನಿ ಬಿಡುಗಡೆ ಮಾಡಿದ ವಿಡಿಯೊವನ್ನು ಫ್ರ್ಯಾಂಚೈಸಿಯು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ.

ಹಳದಿ ಬಣ್ಣದ ಮೇಲೆ ಸೇನೆಯ ಸಮವಸ್ತ್ರದ ಮಾದರಿಯ ಹಸಿರು ಬಣ್ಣದ ಸಣ್ಣ ಪಟ್ಟಿಗಳನ್ನು ಕಾಲರ್ ಮೇಲೆ ವಿನ್ಯಾಸ ಮಾಡಲಾಗಿದೆ. ನಾಲ್ಕು ಬಾರಿಗೆ ಪ್ರಶಸ್ತಿ ವಿಜಯದ ಸಂಕೇತವಾಗಿ ಎದೆಯ ಭಾಗದ ಮೇಲೆ ನಾಲ್ಕು ತಾರೆಗಳ ಚಿತ್ರಗಳಿವೆ. 2010, 2011, 2018 ಮತ್ತು 2021ರಲ್ಲಿ ತಂಡವು ಚಾಂಪಿಯನ್ ಆಗಿತ್ತು.

ADVERTISEMENT

ಅದರ ಕೆಳಗೆ ತಂಡದ ಲಾಂಛನ ಇದ್ದು ಉಳಿದೆಡೆ ಪ್ರಾಯೋಜಕತ್ವರ ಲೋಗೊಗಳು ಇವೆ. ಎಡ ಮತ್ತು ಬಲ ಭಾಗದಲ್ಲಿ ನೀಲಿ ಪಟ್ಟಿಗಳಿವೆ.

‘ನಮ್ಮ ದೇಶದ ಸೇನಾ ಯೋಧರಿಗೆ ಗೌರವ ಸಲ್ಲಿಸುವ ಸಲುವಾಗಿ ಪೋಷಾಕಿನ ಕಾಲರ್‌ ಮೇಲೆ ಕೆಮೌಫ್ಲ್ಯಾಗ್ ಚಿತ್ರಿಸಲಾಗಿದೆ. ಹಳದಿ ಬಣ್ನದೊಂದಿಗೆ ಹಸಿರು ಮಿಶ್ರಿತ ಈ ಫ್ಲ್ಯಾಗ್ ಸುಂದರವಾಗಿ ಕಾಣುತ್ತಿದೆ.ವಿಶ್ವಾಸಾರ್ಹ ಬ್ರ್ಯಾಂಡ್ ಆಗಿರುವ ಟಿವಿಎಸ್‌ ಯುರೊಗ್ರಿಪ್ ಜಾಹೀರಾತನ್ನು ಪೋಷಾಕು ಮೇಲೆ ಹಾಕಿರುವುದು ಹೆಮ್ಮೆಯ ಸಂಗತಿ‘ ಎಂದು ತಂಡದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಾಶಿ ವಿಶ್ವನಾಥನ್ ಹೇಳಿದ್ದಾರೆ.

ಅಲಿಗೆ ವೀಸಾ ಸಮಸ್ಯೆ:ಚೆನ್ನೈ ತಂಡದಲ್ಲಿ ಆಡುವ ಇಂಗ್ಲೆಂಡ್ ಆಲ್‌ರೌಂಡರ್ ಮೋಯಿನ್ ಅಲಿ ಅವರಿಗೆ ವೀಸಾ ಲಭಿಸುವಲ್ಲಿ ವಿಳಂಬವಾಗಿದೆ. ಅದರಿಂದಾಗಿ ಅವರು ಐಪಿಎಲ್‌ ನ ಮೊದಲ ಪಂದ್ಯದಲ್ಲಿ ಆಡುತ್ತಿಲ್ಲ.

‘ಅಲಿಗೆ ಇನ್ನೂ ವೀಸಾ ಲಭಿಸಿಲ್ಲ. ಆದ್ದರಿಂದ ಅವರು ಐಪಿಎಲ್‌ನ ಮೊದಲ ಪಂದ್ಯದಲ್ಲಿ ಆಡುವುದಿಲ್ಲ. ಇನ್ನೆರಡು ದಿನಗಳಲ್ಲಿ ಸಮಸ್ಯೆ ಬಗೆಹರಿಯುವ ವಿಶ್ವಾಸವಿದೆ. ಅವರು ಅಲಭ್ಯರಾಗಿರುವುದು ಬೇಸರ ಮೂಡಿಸಿದೆ. ಇಂಗ್ಲೆಂಡ್‌ನಲ್ಲಿ ಪಾಕಿಸ್ತಾನ ಮೂಲವಿರುವ ವ್ಯಕ್ತಿಗಳಿಗೆ ವೀಸಾ ನೀಡುವಾಗ ಕೆಲವು ಕಠಿಣ ಪ್ರಕ್ರಿಯೆಗಳನ್ನು ಅನುಸರಿಸಲಾಗುತ್ತದೆ. ವಿಳಂಬಕ್ಕೆ ಬಹುಶಃ ಅದೇ ಕಾರಣವಿರಬೇಕು‘ ಎಂದು ಸಿಇಒ ವಿಶ್ವನಾಥನ್ ಹೇಳಿದ್ದಾರೆ.

ಮೋಯಿನ್ ಅವರ ಅಜ್ಜ ಕುಟುಂಬ ಸಮೇತ ಪಾಕಿಸ್ತಾನದಿಂದ ಇಂಗ್ಲೆಂಡ್‌ಗೆ ವಲಸೆ ಹೋಗಿದ್ದರು. ಮೋಯಿನ್ ಇಂಗ್ಲೆಂಡ್‌ನಲ್ಲಿಯೇ ಜನಿಸಿದ್ದರು.

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಇದೇ ಶನಿವಾರ ನಡೆಯಲಿರುವ ಉದ್ಘಾಟನೆ ಪಂದ್ಯದಲ್ಲಿ ಚೆನ್ನೈ ತಂಡವು ಕೋಲ್ಕತ್ತ ನೈಟ್ ರೈಡರ್ಸ್ ಎದುರು ಆಡಲಿದೆ.

‘ಮೋಯಿನ್ ಇಲ್ಲಿಗೆ ತಲುಪಿದ ನಂತರ ಮೂರು ದಿನಗಳ ಕಡ್ಡಾಯ ಕ್ವಾರಂಟೈನ್ ಪಾಲಿಸಬೇಕು. ತಪಾಸಣೆಯ ನಂತರವಷ್ಟೇ ಅವರು ಬಯೋಬಬಲ್ ಪ್ರವೇಶಿಸಲು ಅರ್ಹತೆ ಪಡೆಯುವರು’ ಎಂದು ವಿಶ್ವನಾಥನ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.