
ಕ್ರಿಕೆಟ್
(ಸಾಂಕೇತಿಕ ಚಿತ್ರ)
ಮುಂಬೈ: ಕರ್ನಾಟಕ ವಿರುದ್ಧ 425 ರನ್‌ಗಳ ಮೊದಲ ಇನಿಂಗ್ಸ್ ಮುನ್ನಡೆ ಆಧಾರದಲ್ಲಿ ಮುಂಬೈ ತಂಡ ಕರ್ನಲ್ ಸಿ.ಕೆ.ನಾಯ್ಡು ಟ್ರೋಫಿ (23 ವರ್ಷದೊಳಗಿನವರ) ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ತಲುಪಿತು. ಈ ಪಂದ್ಯದ ಕೊನೆಯ ದಿನವಾದ ಮಂಗಳವಾರ ಒಂದು ಹಂತದಲ್ಲಿ ಸೋಲಿನ ಹಾದಿಯಲ್ಲಿದ್ದ ಕರ್ನಾಟಕ ಕೊನೆಗೂ ಹೋರಾಡಿ ಡ್ರಾ ಮಾಡಿಕೊಂಡಿತಷ್ಟೇ.
ಖಾಂದಿವಿಲಿಯ ಸಚಿನ್ ತೆಂಡೂಲ್ಕರ್ ಜಿಮ್ಖಾನಾದಲ್ಲಿ, ಕರ್ನಾಟಕದ 240 ರನ್‌ಗಳಿಗೆ ಉತ್ತರವಾಗಿ ಸೋಮವಾರ 7 ವಿಕೆಟ್‌ಗೆ 616 ರನ್ ಗಳಿಸಿದ್ದ ಮುಂಬೈ ತಂಡ ನಾಲ್ಕನೇ ದಿನವಾದ ಮಂಗಳವಾರ ಮೊದಲ ಇನಿಂಗ್ಸ್‌ನಲ್ಲಿ 665 ರನ್‌ಗಳಿಗೆ (210 ಓವರ್) ಆಲೌಟ್ ಆಯಿತು.
ಕರ್ನಾಟಕ ಒಂದು ಹಂತದಲ್ಲಿ 26 ಓವರುಗಳಾಗುವಷ್ಟರಲ್ಲಿ 81 ರನ್‌ಗಳಿಗೆ 7 ವಿಕೆಟ್ ಗಳಿಸಿ ಸೋಲಿನ ಅಪಾಯದಲ್ಲಿತ್ತು. ಆದರೆ ನೆಲಕಚ್ಚಿ ಆಡಿದ ಧ್ರುವ್ ಪ್ರಭಾಕರ್ (ಔಟಾಗದೇ 31, 134 ಎಸೆತ, 4x5) ಮತ್ತು ಸಮಿತ್ ದ್ರಾವಿಡ್ (15, 65 ಎಸೆತ) ಅವರು 23 ಓವರುಗಳ ಆಟವನ್ನು ನಿಭಾಯಿಸಿದರು. ಮುರಿಯದ ಎಂಟನೇ ವಿಕೆಟ್‌ಗೆ 29 ರನ್ ಸೇರಿಸಿದರು. 136 ಎಸೆತ ಎದುರಿಸಿ ತಂಡ ಆಲೌಟ್ ಆಗುವುದನ್ನು ತಪ್ಪಿಸಿದರು.
ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಕರ್ನಾಟಕ: 240; ಮುಂಬೈ 210 ಓವರುಗಳಲ್ಲಿ 665; ಎರಡನೇ ಇನಿಂಗ್ಸ್: ಕರ್ನಾಟಕ: 48 ಓವರುಗಳಲ್ಲಿ 7 ವಿಕೆಟ್‌ಗೆ 110 (ಧ್ರುವ್ ಪ್ರಭಾಕರ್ ಔಟಾಗದೇ 31; ಸೂರ್ಯಾಂಶ್ ಶೆಡ್ಗೆ 30ಕ್ಕೆ2, ಆಥರ್ವ ಭೋಸಲೆ 16ಕ್ಕೆ2, ಮನನ್ ಭಟ್ 25ಕ್ಕೆ2). ಪಂದ್ಯ ಡ್ರಾ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.