ADVERTISEMENT

ಧೋನಿಯಂತೆ ಯಾರೂ ಆಗಲು ಸಾಧ್ಯವಿಲ್ಲ, ಪ್ರಯತ್ನಿಸಲೂ ಬಾರದು: ಸಂಜು ಸ್ಯಾಮ್ಸನ್

ಪಿಟಿಐ
Published 29 ಸೆಪ್ಟೆಂಬರ್ 2020, 13:37 IST
Last Updated 29 ಸೆಪ್ಟೆಂಬರ್ 2020, 13:37 IST
ಸಂಜು ಸ್ಯಾಮ್ಸನ್
ಸಂಜು ಸ್ಯಾಮ್ಸನ್   

ದುಬೈ: ವಿಕೆಟ್‌ಕೀಪರ್–ಬ್ಯಾಟ್ಸ್‌ಮನ್ ಮಹೇಂದ್ರಸಿಂಗ್ ಧೋನಿ ಅವರಂತಾಗಲು ಯಾರಿಗೂ ಸಾಧ್ಯವಿಲ್ಲ. ಅವರ ಹಾಗೆ ಆಡುವ ಪ್ರಯತ್ನವನ್ನೂ ಯಾರೂ ಮಾಡಬಾರದು. ಏಕೆಂದರೆ ಅವರು ಮಹಾನ್ ಆಟಗಾರ ಎಂದು ರಾಜಸ್ಥಾನ ರಾಯಲ್ಸ್‌ ತಂಡದ ಸಂಜು ಸ್ಯಾಮ್ಸನ್ ಹೇಳಿದ್ದಾರೆ.

ಐಪಿಎಲ್‌ನಲ್ಲಿ ಸತತ ಎರಡು ಅರ್ಧಶತಕ ಬಾರಿಸಿರುವ ಸಂಜು ಅವರನ್ನು ಕಾಂಗ್ರೆಸ್ ಪಕ್ಷದ ಮುಖಂಡ ಶಶಿ ತರೂರ್ ಅವರು ಮಹೇಂದ್ರಸಿಂಗ್ ಧೋನಿಗೆ ಹೋಲಿಕೆ ಮಾಡಿದ್ದರು. ಅದನ್ನು ಬಿಜೆಪಿ ಸಂಸದ ಗೌತಮ್ ಗಂಭೀರ್ ಟೀಕಿಸಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.

ಈ ಪ್ರತಿಕ್ರಿಯಿಸಿರುವ ಸಂಜು, ‘ಭಾರತದ ಕ್ರಿಕೆಟ್‌ ಮತ್ತು ಸಮಗ್ರ ಕ್ರಿಕೆಟ್ ಕ್ಷೇತ್ರದ ದಿಗ್ಗಜ ಆಟಗಾರ ಮಹೇಂದ್ರಸಿಂಗ್ ಧೋನಿ. ಅವರಿಗೆ ಅವರೇ ಸಾಟಿ. ಅವರಂತೆ ಆಡುವುದು ಯಾರಿಗೂ ಸಾಧ್ಯವಿಲ್ಲ ಮತ್ತು ಅದು ಸುಲಭವೂ ಅಲ್ಲ. ನಾನು ಅವರ ಶೈಲಿಯನ್ನು ಅನುಕರಿಸುವ ಪ್ರಯತ್ನ ಮಾಡಿಲ್ಲ’ ಎಂದರು.

ADVERTISEMENT

‘ನನ್ನ ಆಟದ ಮೇಲಷ್ಟೇ ಗಮನ ಹರಿಸುತ್ತೇನೆ. ನನ್ನ ಶೈಲಿ ಮತ್ತು ಸಾಮರ್ಥ್ಯವನ್ನು ಇನ್ನಷ್ಟು ಉತ್ತಮಪಡಿಸಿಕೊಳ್ಳುವತ್ತ ಮಾತ್ರ ಚಿತ್ತ ಇದೆ. ನಮ್ಮ ತಂಡಕ್ಕೆ ಪಂದ್ಯಗಳನ್ನು ಜಯಿಸಿ ಕೊಡುವುದರ ಬಗ್ಗೆ ಮಾತ್ರ ಯೋಚಿಸುತ್ತೇನೆ’ ಎಂದು ಹೇಳಿದರು.

ರಾಷ್ಟ್ರೀಯ ತಂಡದ ಆಯ್ಕೆ ಸಮಿತಿಯ ಗಮನ ಸೆಳೆಯುವ ಕುರಿತು ಪ್ರತಿಕ್ರಿಯಿಸಿದ ಕೇರಳದ ಸಂಜು, ‘ಸದ್ಯ ಉತ್ತಮ ಫಾರ್ಮ್‌ನಲ್ಲಿದ್ದೇನೆ. ನಾನು ಪ್ರತಿನಿಧಿಸುವ ತಂಡಕ್ಕಾಗಿ ಪಂದ್ಯಗಳನ್ನು ಜಯಿಸಲು ಕಾಣಿಕೆ ನೀಡುವುದಷ್ಟೇ ಗುರಿ ಇದೆ’ ಎಂದರು.

‘ರಾಜಸ್ಥಾನ ರಾಯಲ್ಸ್‌ ತಂಡದಲ್ಲಿರುವುದು ಅದೃಷ್ಟ. ಈ ಬಳಗದಲ್ಲಿ ಶ್ರೇಷ್ಠ ಆಟಗಾರರು ಇದ್ದಾರೆ. ಒಳ್ಳೆಯ ವ್ಯಕ್ತಿಗಳು ಜೊತೆಗಿದ್ದಾರೆ. ನನ್ನ ಜೀವನ, ಭವಿಷ್ಯದ ಕುರಿತು ಕಡಿಮೆ ಯೋಚಿಸುತ್ತೇನೆ. ಒಂದು ದಿನ ಎಲ್ಲರೂ ಸಾಯಲೇಬೇಕು. ನಾನು ಭಾರತ ತಂಡದಲ್ಲಿದ್ದಾಗ ಜಿಮ್‌ನಲ್ಲಿ ವಿರಾಟ್ ಕೊಹ್ಲಿಯವರಿಗೆ ಬಹಳಷ್ಟು ಪ್ರಶ್ನೆಗಳನ್ನು ಕೇಳುತ್ತಿದ್ದೆ. ಆಗ ಅವರು ನನಗೆ ಎಷ್ಟು ಕಾಲ ತಾವು ಕ್ರಿಕೆಟ್ ಆಡುತ್ತೀರಿ ಎಂದರು. ನಾನು ಅದಕ್ಕೆ ಸುಮಾರು ಹತ್ತು ವರ್ಷ ಎಂದು ಪ್ರತಿಕ್ರಿಯಿಸಿದ್ದೆ. ಆಗ ಅವರು ನಿಮ್ಮ ಸರ್ವಸ್ವವನ್ನೂ ಆ ಹತ್ತು ವರ್ಷಗಳಿಗೆ ನೀಡಿ. ಅದರ ನಂತರ ನಿಮ್ಮ ತವರು ಕೇರಳದ ಆಹಾರವನ್ನು ಯಥೇಚ್ಚವಾಗಿ ತಿನ್ನಬಹುದು ಎಂದಿದ್ದರು. ಆ ಮಾತು ಅಪಾರ ಪ್ರಭಾವ ಬೀರಿದೆ.ಮುಂದಿನ 10–12 ವರ್ಷಗಳವರೆಗೆ ಕ್ರಿಕೆಟ್‌ಗಾಗಿ ಎಲ್ಲವೂ ಸಮರ್ಪಿತ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.