ಶುಭಮನ್ ಗಿಲ್
ಕೃಪೆ: ಪಿಟಿಐ
ಅಕ್ಟೋಬರ್ 19 ರಿಂದ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ 3 ಪಂದ್ಯಗಳ ಏಕದಿನ ಸರಣಿಗೆ 15 ಸದಸ್ಯರ ಟೀಂ ಇಂಡಿಯಾವನ್ನು ಆಯ್ಕೆ ಮಾಡಲಾಗಿದೆ. ಅಚ್ಚರಿ ಎಂಬಂತೆ ODI ನಾಯಕರಾಗಿದ್ದ ರೋಹಿತ್ ಶರ್ಮಾ ಅವರ ಬದಲಿಗೆ 25 ವರ್ಷದ ಶುಭಮನ್ ಗಿಲ್ ಅವರಿಗೆ ನಾಯಕತ್ವದ ಜವಾಬ್ದಾರಿ ನೀಡಲಾಗಿದೆ. ಆ ಮೂಲಕ ಭಾರತದ 28ನೇ ಏಕದಿನ ತಂಡದ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಶುಭಮನ್ ಗಿಲ್ ಅ.19 ರಂದು ಏಕದಿನ ತಂಡದ ನಾಯಕರಾಗಿ ಪದಾರ್ಪಣೆ ಮಾಡಲಿದ್ದಾರೆ. ಇದಕ್ಕೂ ಮೊದಲು ಟೀಂ ಇಂಡಿಯಾ ಏಕದಿನ ತಂಡವನ್ನು 27 ಆಟಗಾರರು ಮುನ್ನಡೆಸಿದ್ದಾರೆ. ಹಾಗಿದ್ರೆ, ಅವರುಗಳು ಯಾರೆಂದು ನೋಡೋಣ ಬನ್ನಿ.
ಅಜಿತ್ ವಾಡೇಕರ್ 1974 ರಲ್ಲಿ ಭಾರತದ ಮೊದಲ ಏಕದಿನ ತಂಡದ ನಾಯಕರಾಗಿ 2 ಪಂದ್ಯಗಳಲ್ಲಿ ಮುನ್ನಡೆಸಿದ್ದರು. ಎಸ್. ವೆಂಕಟರಾಘವನ್ 1975 ಮತ್ತು 1979 ವಿಶ್ವಕಪ್‌ನಲ್ಲಿ ಭಾರತ ತಂಡವನ್ನು 7 ಪಂದ್ಯಗಳಲ್ಲಿ ನಾಯರಾಗಿ ಮುನ್ನಡೆಸಿದ್ದರು.
ಶ್ರೇಷ್ಠ ಸ್ಪಿನ್ ಬೌಲರ್‌ಗಳಲ್ಲಿ ಒಬ್ಬರಾಗಿದ್ದ ಬಿಷನ್ ಸಿಂಗ್ ಬೇಡಿ ಭಾರತವನ್ನು 4 ಪಂದ್ಯಗಳಲ್ಲಿ ಮುನ್ನಡೆಸಿದ್ದರು. ಭಾರತ ಕ್ರಿಕೆಟ್‌ನ ದಂತಕತೆ ಸುನಿಲ್ ಗವಾಸ್ಕರ್ ಅವರು 1980ರಿಂದ 1985ರವರೆಗೆ 37 ಏಕದಿನ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ.
ಟೀಂ ಇಂಡಿಯಾದ ಯಶಸ್ವಿ ನಾಯಕರಲ್ಲಿ ಒಬ್ಬರು ಎನಿಸಿಕೊಂಡಿರುವ ಕಪಿಲ್ ದೇವ್ ಅವರು, 1982ರಿಂದ 1992ರವರೆಗೆ 74 ODIಗಳಲ್ಲಿ ಟೀಂ ಇಂಡಿಯಾದ ನಾಯಕರಾಗಿದ್ದರು. ಅವರು 1983 ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದರು.
ಸಯ್ಯದ್ ಕಿರ್ಮಾನಿ ಹಾಗೂ ಮೊಹಿಂದರ್ ಅಮರನಾಥ್ ತಲಾ ಒಂದೊಂದು ಪಂದ್ಯಗಳಲ್ಲಿ ಮತ್ತು ರವಿಶಾಸ್ತ್ರಿ 11 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದರೆ, ದಿಲೀಪ್ ವೆಂಗ್ಸರ್ಕರ್ 18 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ.
1989 ರಲ್ಲಿ ಕೃಷ್ಣಮಾಚಾರಿ ಶ್ರೀಕಾಂತ್ 13 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದರೆ, ಮೊಹಮ್ಮದ್ ಅಜರುದ್ದೀನ್ ಬರೋಬ್ಬರಿ 174 ಏಕದಿನ ಪಂದ್ಯಗಳಲ್ಲಿ ತಂಡದ ನಾಯಕರಾಗಿದ್ದರು.
ಸಚಿನ್ ತೆಂಡೂಲ್ಕರ್ 73, ಅಜಯ್ ಜಡೇಜಾ 13 ಹಾಗೂ ಸೌರವ್ ಗಂಗೂಲಿ 1999ರಿಂದ 2005ರ ಅವಧಿಯಲ್ಲಿ 146 ಏಕದಿನ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಿದ್ದರು.
ರಾಹುಲ್ ದ್ರಾವಿಡ್ 79 ಪಂದ್ಯಗಳು ಹಾಗೂ ಅನಿಲ್ ಕುಂಬ್ಳೆ 1 ಏಕದಿನ ಪಂದ್ಯದಲ್ಲಿ ನಾಯಕರಾಗಿದ್ದರು. ಇವರ ಜೊತೆಗೆ ವಿರೇಂದ್ರ ಸೆಹ್ವಾಗ್ ಕೂಡ 12 ಪಂದ್ಯಗಳಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸಿದ್ದರು.
ಎಂ.ಎಸ್. ಧೋನಿ: ಭಾರತ ಕಂಡ ಅತ್ಯಂತ ಯಶಸ್ವಿ ನಾಯಕ ಎನಿಸಿಕೊಂಡಿದ್ದ ಧೋನಿ, 2007 ರಿಂದ 2018ರವರೆಗೆ ಟೀಂ ಇಂಡಿಯಾವನ್ನು ಬರೋಬ್ಬರಿ 200 ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದರು. ಮಾತ್ರವಲ್ಲಿ ಅವರು 2010 ಏಷ್ಯಾ ಕಪ್, 2011 ಏಕದಿನ ವಿಶ್ವಕಪ್ ಮತ್ತು 2013 ಚಾಂಪಿಯನ್ಸ್ ಟ್ರೋಫಿ ಗೆಲ್ಲಿಸಿದ ಸಾಧನೆ ಮಾಡಿದ್ದಾರೆ.
ಸುರೇಶ್ ರೈನಾ 12 ಹಾಗೂ ಗೌತಮ್ ಗಂಭೀರ್ 6 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದರೆ, ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ 2013ರಿಂದ 2021ರವರೆಗೆ 95 ಪಂದ್ಯಗಳಲ್ಲಿ ತಂಡದ ನಾಯಕರಾಗಿದ್ದರು.
ಅಜಿಂಕ್ಯ ರಹಾನೆ 3 ಹಾಗೂ ರೋಹಿತ್ ಶರ್ಮಾ 56 ಏಕದಿನ ಪಂದ್ಯಗಳಲ್ಲಿ ನಾಯಕರಾಗಿ ತಂಡವನ್ನು ಮುನ್ನಡೆಸಿದ್ದಾರೆ. ಇವರ ಜೊತೆಗೆ ಶಿಖರ್ ಧವನ್ 12, ಕೆ.ಎಲ್. ರಾಹುಲ್ 12 ಹಾಗೂ ಹಾರ್ದಿಕ್ ಪಾಂಡ್ಯ 3 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.