ನವದೆಹಲಿ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ಉಪನಾಯಕ ರೋಹಿತ್ ಶರ್ಮಾ, ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಸೇರಿದಂತೆ ಹಲವು ಕ್ರೀಡಾ ತಾರೆಗಳು, ಕೋವಿಡ್–19 ಪಿಡುಗಿನ ಸಂತ್ರಸ್ತರಿಗೆ ದೇಣಿಗೆ ಸಂಗ್ರಹಕ್ಕಾಗಿ ಆನ್‌ಲೈನ್ ಸಂಗೀತ ಗೋಷ್ಠಿಯಲ್ಲಿ ಪಾಲ್ಗೊಂಡಿದ್ದಾರೆ.
‘ಐ ಫಾರ್ ಇಂಡಿಯಾ’ ಸಂಸ್ಥೆಯು ಆಯೋಜಿಸುತ್ತಿರುವ ಈ ಮೇಳದಲ್ಲಿ ನಟರು, ಸಂಗೀತಗಾರರು, ಗಾಯಕರು, ಕ್ರೀಡಾಪಟುಗಳು ಹಾಗೂ ಉದ್ಯಮಿಗಳು ಅವರವರ ಮನೆಯಿಂದಲೇ ಭಾಗವಹಿಸುತ್ತಿದ್ದಾರೆ.
ಸಂಗೀತ ಗೋಷ್ಠಿಯಿಂದ ಸಂಗ್ರಹವಾಗುವ ಹಣವನ್ನು ‘ಗಿವ್ ಇಂಡಿಯಾ’ ನಿಧಿ ಸಂಗ್ರಹ ವೇದಿಕೆಯ ಮೂಲಕ ಸಂತ್ರಸ್ತರಿಗೆ ತಲುಪಿಸಲಾಗುತ್ತಿದೆ.
‘ಎರಡು ವಾರಗಳಿಂದ ಈ ಕಾರ್ಯಕ್ರಮ ನಡೆಸುತ್ತಿದ್ದೇವೆ. ಲಾಕ್‌ಡೌನ್‌ನಿಂದಾಗಿ ಮನೆಯಲ್ಲೇ ಇರುವವರ ಮನರಂಜನೆಗಾಗಿ ಗೋಷ್ಠಿ ಹಮ್ಮಿಕೊಂಡಿದ್ದೇವೆ. ಜನರ ಆರೋಗ್ಯ ರಕ್ಷಣೆಗಾಗಿ ಕೋವಿಡ್ ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿರುವವರಿಗೆ ನಮ್ಮ ಅಭಿನಂದನೆ. ಆಶ್ರಯರಹಿತರಿಗೆ ಹಾಗೂ ಉದ್ಯೋಗರಹಿತರಿಗೆ ಈ ನಿಧಿ ಹಂಚಲಾಗುತ್ತದೆ’ ಎಂದು ಐ ಫಾರ್ ಇಂಡಿಯಾ ಹೇಳಿದೆ.
ಕೊಹ್ಲಿ ಪತ್ನಿ ಹಾಗೂ ನಟಿ ಅನುಷ್ಕಾ ಶರ್ಮಾ, ಶಾರೂಕ್ ಖಾನ್, ಎ.ಆರ್.ರೆಹಮಾನ್, ಉಸ್ತಾದ್ ಜಾಕೀರ್ ಹುಸೇನ್, ಅಮೀರ್ ಖಾನ್, ಐಶ್ವರ್ಯ ರೈ ಬಚ್ಚನ್, ಆಲಿಯಾ ಭಟ್, ಆಯುಷ್ಮಾನ್ ಖುರಾನಾ, ಬ್ರಿಯಾನ್ ಆ್ಯಡಮ್ಸ್, ನಿಕ್ ಜೋನ್ಸ್, ಪ್ರಿಯಾಂಕಾ ಚೋಪ್ರಾ ಸೇರಿದಂತೆ ಹಲವರು ಗೋಷ್ಠಿಯಲ್ಲಿ ಭಾಗವಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.