ಫಖರ್ ಜಮಾನ್
(ರಾಯಿಟರ್ಸ್ ಚಿತ್ರ)
ಕರಾಚಿ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ 'ಎ' ಗುಂಪಿನಲ್ಲಿ ಸಾಂಪ್ರದಾಯಿಕ ಬದ್ಧ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯವು ಭಾನುವಾರ (ಫೆ.23) ನಿಗದಿಯಾಗಿದೆ.
ಈ ಪಂದ್ಯ ದುಬೈನಲ್ಲಿ ನಡೆಯಲಿದೆ. ಆದರೆ ಈ ಪಂದ್ಯ ಆರಂಭಕ್ಕೂ ಮುನ್ನವೇ ಆತಿಥೇಯ ಪಾಕಿಸ್ತಾನ ಹಿನ್ನಡೆಗೊಳಗಾಗಿದೆ.
ಗಾಯದ ಸಮಸ್ಯೆ ಎದುರಿಸುತ್ತಿರುವ ಸ್ಟಾರ್ ಆಟಗಾರ ಫಖರ್ ಜಮಾನ್ ಭಾರತದ ವಿರುದ್ಧದ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.
ಕರಾಚಿಯಲ್ಲಿ ಬುಧವಾರ (ಫೆ.19) ನ್ಯೂಜಿಲೆಂಡ್ ವಿರುದ್ಧ ನಡೆದ ಉದ್ಘಾಟನಾ ಪಂದ್ಯದ ವೇಳೆ ಫಖರ್ ಗಾಯಗೊಂಡಿದ್ದರು. ಈ ಪಂದ್ಯದಲ್ಲಿ ನ್ಯೂಜಿಲೆಂಡ್ 60 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿತ್ತು.
ಫಖರ್ ಜಮಾನ್ 41 ಎಸೆತಗಳಲ್ಲಿ 24 ರನ್ ಗಳಿಸಿ ಔಟ್ ಆಗಿದ್ದರು.
ಈಗ ಭಾರತದ ವಿರುದ್ಧದ ಪಂದ್ಯಕ್ಕಾಗಿ ಪಾಕಿಸ್ತಾನ ತಂಡ ದುಬೈಗೆ ಪ್ರಯಾಣ ಬೆಳೆಸಿದೆ. ಆದರೆ ಗಾಯಾಳು ಫಖರ್ ಜಮಾನ್ ವಿಮಾನವನ್ನೇರಿಲ್ಲ. ಅವರು ಎರಡು ಪಂದ್ಯಗಳಿಗೆ ಅಲಭ್ಯರಾಗುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.
ಒಂದು ವೇಳೆ ಸಂಪೂರ್ಣ ಟೂರ್ನಿಗೆ ಫಖರ್ ಅಲಭ್ಯರಾದರೆ ಇಮಾನ್ ಉಲ್ ಹಕ್ ಅವರನ್ನು ಬದಲಿ ಆಟಗಾರನಾಗಿ ತಂಡಕ್ಕೆ ಸೇರಿಸಿಕೊಳ್ಳುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.