
ಅನೀಶ್ ಹಾಗೂ ಡೋಗ್ರಾ ನಡುವೆ ಮಾತಿನ ಚಕಮಕಿ
ಹುಬ್ಬಳ್ಳಿ: ಇಲ್ಲಿ ನಡೆಯುತ್ತಿರುವ ಕರ್ನಾಟಕ ಹಾಗೂ ಜಮ್ಮು ಮತ್ತು ಕಾಶ್ಮೀರ ತಂಡಗಳ ನಡುವಿನ ರಣಜಿ ಟ್ರೋಫಿ ಫೈನಲ್ ಪಂದ್ಯದ ಎರಡನೇ ದಿನದಾಟದಲ್ಲೂ ಜಮ್ಮುವಿನ ಬ್ಯಾಟರ್‌ಗಳು ಅಬ್ಬರಿಸಿದ್ದಾರೆ. ಈ ನಡುವೆ, ಮೈದಾನದಲ್ಲಿ ಉಭಯ ತಂಡದ ಆಟಗಾರರ ನಡುವೆ ವಾಗ್ವಾದ ನಡೆದ ಪ್ರಸಂಗವೂ ಜರುಗಿದೆ.
ಜಮ್ಮು ಮತ್ತು ಕಾಶ್ಮೀರ ತಂಡದ ನಾಯಕ ಪರಾಸ್ ಡೋಗ್ರಾ ಮತ್ತು ಕರ್ನಾಟಕದ ಕೆ.ವಿ. ಅನೀಶ್ ನಡುವೆ ತೀವ್ರ ವಾಗ್ವಾದ ನಡೆದಿದೆ. ಈ ಇಬ್ಬರ ನಡುವಿನ ವಾಗ್ವಾದವು ಮೈಮುಟ್ಟಿಕೊಳ್ಳುವ ಹಂತ ತಲುಪಿದೆ.
ಜಮ್ಮು ಮತ್ತು ಕಾಶ್ಮೀರ ಇನಿಂಗ್ಸ್‌ನ 101ನೇ ಓವರ್‌ನಲ್ಲಿ ಈ ಘಟನೆ ನಡೆದಿದ್ದು, ಕರ್ನಾಟಕದ ವೇಗಿ ಪ್ರಸಿದ್ಧ ಕೃಷ್ಣ ಬೌಲಿಂಗ್‌ನಲ್ಲಿ ಡೋಗ್ರಾ ಅವರು ಬಾಲ್ ಅನ್ನು ಎಡ್ಜ್ ಮಾಡಿ ಬೌಂಡರಿಗೆ ಅಟ್ಟುತ್ತಾರೆ.
ಚೆಂಡು ಬೌಂಡರಿಗೆ ತಲುಪುತ್ತಿದ್ದಂತೆ, ಡೋಗ್ರಾ ಮತ್ತು ಫಾರ್ವರ್ಡ್ ಶಾರ್ಟ್ ಲೆಗ್‌ನಲ್ಲಿ ಕ್ಷೇತ್ರರಕ್ಷಣೆ ಮಾಡುತ್ತಿದ್ದ ಬದಲಿ ಆಟಗಾರ ಅನೀಶ್ ನಡುವೆ ಮಾತಿನ ಚಕಮಕಿ ನಡೆಯುತ್ತದೆ. ಕೂಡಲೆ ಕರ್ನಾಟಕ ತಂಡದ ಹಿರಿಯ ಆಟಗಾರ ಮಯಂಕ್ ಅಗರವಾಲ್ ಅವರು ಸಮಾಧಾನ ಮಾಡಲು ಮುಂದಾಗುತ್ತಾರೆ. ಆದರೆ, ಅದಕ್ಕೂ ಮೊದಲೇ ಡೋಗ್ರಾ ಅವರು ಅನೀಶ್ ಮೇಲೆ ಕೋಪಗೊಂಡು, ತಮ್ಮ ಹೆಲ್ಮೆಟ್‌ನಿಂದ ಅನೀಶ್ ತಲೆಗೆ ಪಂಚ್ ಮಾಡುತ್ತಾರೆ.
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ರಾಜನಗರ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಫೈನಲ್ ಪಂದ್ಯದ ಮೊದಲ ದಿನ ಡೋಗ್ರಾ, 48 ಎಸೆತಗಳಲ್ಲಿ 9 ರನ್ ಗಳಿಸಿದ್ದಾಗ ವೈಶಾಕ್ ವಿಜಯಕುಮಾರ್ ಅವರು ಎಸೆದ ಬೌನ್ಸರ್ ಗ್ಲೌಸ್‌ಗೆ ಬಡಿದು ಗಾಯಗೊಂಡು ನಿವೃತ್ತರಾಗಿದ್ದರು.
ಕರ್ನಾಟಕ ತಂಡವು ರಣಜಿಯಲ್ಲಿ 8 ಬಾರಿ ಚಾಂಪಿಯನ್ ಆಗಿದೆ. ಆದರೆ, ಜಮ್ಮು ಮತ್ತು ಕಾಶ್ಮೀರ ತಂಡವು ತಮ್ಮ 68 ವರ್ಷಗಳ ರಣಜಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.