ಲಾಹೋರ್: ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಆಲ್‌ರೌಂಡರ್ ರಚಿನ್ ರವೀಂದ್ರ ಅವರು ಶನಿವಾರ ಇಲ್ಲಿ ನಡೆದ ಅಭ್ಯಾಸ ಪಂದ್ಯದಲ್ಲಿ ಹಣೆಗೆ ಚೆಂಡು ಬಡಿದು ಗಾಯಗೊಂಡಿದ್ದಾರೆ. ಅವರು ಕ್ಯಾಚ್ ಪಡೆಯುವ ವೇಳೆ ಈ ಘಟನೆ ನಡೆಯಿತು. ತಲೆಯಿಂದ ರಕ್ತಸ್ರಾವ ಆಯಿತು. ಕೂಡಲೇ ಅವರಿಗೆ ಚಿಕಿತ್ಸೆ ನೀಡಲಾಯಿತು.
ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಅಭ್ಯಾಸ ಪಂದ್ಯದಲ್ಲಿ (ಹೊನಲು ಬೆಳಕು) ಆತಿಥೇಯ ಪಾಕ್ ತಂಡದ ಬ್ಯಾಟರ್ ಖುಶ್ ದಿಲ್ ಶಾ ಅವರು ಎತ್ತರಕ್ಕೆ ಹೊಡೆದ ಚೆಂಡನ್ನು ಹಿಡಿಯಲು ರಚಿನ್ ಪ್ರಯತ್ನಿಸಿದರು. ಆದರೆ ಚೆಂಡಿನ ಚಲನೆಯನ್ನು ನಿಖರವಾಗಿ ಗುರುತಿಸುವಲ್ಲಿ ತುಸು ತಪ್ಪಿದ ಅವರ ಹಣೆಗೆ ಚೆಂಡು ಅಪ್ಪಳಿಸಿತು. ಇದರಿಂದಾಗಿ ಅವರು ತೀವ್ರ ನೋವಿನಿಂದ ಕುಸಿದರು. ಈ ಸಂದರ್ಭದಲ್ಲಿ ಮೈದಾನದಲ್ಲಿದ್ದ ಪ್ರೇಕ್ಷಕ ಹಾಗೂ ಡ್ರೆಸಿಂಗ್ ಕೋಣೆಯಲ್ಲಿದ್ದ ಉಭಯ ತಂಡಗಳ ಆಟಗಾರರಲ್ಲಿ ಆತಂಕ ಮೂಡಿತ್ತು.
ವೈದ್ಯಕೀಯ ತಂಡ ಮತ್ತು ಭದ್ರತಾ ಸಿಬ್ಬಂದಿಯು ಕೂಡಲೇ ಅವರತ್ತ ಧಾವಿಸಿದರು. ವೈದ್ಯರು ಅವರಿಗೆ ಚಿಕಿತ್ಸೆ ನೀಡಿ ಬ್ಯಾಂಡೇಜ್ ಹಾಕಿದರು. ವೈದ್ಯರ ನೆರವಿನಿಂದ ರಚಿನ್ ಮೈದಾನ ತೊರೆದರು. ಸೋಮವಾರ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುವ ಅಭ್ಯಾಸ ಪಂದ್ಯದಲ್ಲಿ ರಚಿನ್ ರವೀಂದ್ರ ಆಡುವುದು ಅನುಮಾನದಿಂದ ಕೂಡಿದೆ.
‘ಇನಿಂಗ್ಸ್‌ನ 38ನೇ ಓವರ್‌ನಲ್ಲಿ ರವೀಂದ್ರ ಅವರು ಕ್ಯಾಚ್ ಪಡೆಯುವ ಪ್ರಯತ್ನ ಮಾಡಿದರು. ಆಗ ಚೆಂಡು ಅವರ ಹಣೆಗೆ ಬಡಿಯಿತು. ಮೈದಾನದಲ್ಲಿಯೇ ಅವರಿಗೆ ಚಿಕಿತ್ಸೆ ನೀಡಲಾಯಿತು. ಅವರ ಆರೋಗ್ಯ ಸ್ಥಿರವಾಗಿದೆ. ಶಿರಭಾಗದ ಗಾಯದ ತಪಾಸಣೆ (ಎಚ್‌ಐಎ)ಗೆ ಅವರನ್ನು ಒಳಪಡಿಸಲಾಗುವುದು. ಚಿಕಿತ್ಸೆಯನ್ನು ಮುಂದುವರಿಸಲಾಗುವುದು’ ಎಂದು ನ್ಯೂಜಿಲೆಂಡ್ ಕ್ರಿಕೆಟ್ ವಕ್ತಾರರು ‘ಕ್ರಿಕ್‌ಇನ್ಫೋ’ಗೆ ತಿಳಿಸಿದ್ದಾರೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂಜಿಲೆಂಡ್ ತಂಡವು 6 ವಿಕೆಟ್‌ಗಳಿಗೆ 330 ರನ್ ಗಳಿಸಿತ್ತು. ಅದರಲ್ಲ ಇರವೀಂದ್ರ 19 ಎಸೆತಗಳಲ್ಲಿ 25 ರನ್ ಗಳಿಸಿದ್ದರು.
ರಚಿನ್ ಗಾಯಕ್ಕೆ ಕಾರಣ...
ಚಾಂಪಿಯನ್ಸ್ ಟ್ರೋಫಿಗಾಗಿ ಗಡಾಫಿ ಕ್ರೀಡಾಂಗಣವನ್ನು ನವೀಕರಿಸಲಾಗಿದೆ. ಆದರೆ ಕ್ರೀಡಾಂಗಣದಲ್ಲಿ ಅಳವಡಿಸಿರುವ ಫ್ಲಡ್‌ಲೈಟ್‌ಗಳು ಗುಣಮಟ್ಟದಿಂದ ಕೊಡಿಲ್ಲ. ರಚಿನ್ ಅವರು ಮಂದ ಬೆಳಕಿನಲ್ಲಿ ಚೆಂಡನ್ನು ಸರಿಯಾಗಿ ಗುರುತಿಸದೇ ಗಾಯ ಮಾಡಿಕೊಂಡಿದ್ದಾರೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ.
ಕಳಪೆ ಗುಣಮಟ್ಟದ ಫ್ಲಡ್‌ಲೈಟ್‌ಗಳೊಂದಿಗೆ ಕ್ರೀಡಾಂಗಣಗಳನ್ನು ಆಧುನೀಕರಿಸಲಾಗಿದೆ ಎಂದು ನೆಟ್ಟಿಗರು ಪಿಸಿಬಿಯನ್ನು ಟೀಕಿಸುತ್ತಿದ್ದಾರೆ. ಪಾಕಿಸ್ತಾನದಲ್ಲಿ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಲು ಐಸಿಸಿ ಹೇಗೆ ಅನುಮತಿ ನೀಡಿತು? ಕಳಪೆ ಗುಣಮಟ್ಟದ ಲೈಟ್‌ಗಳಿಂದ ರಚಿನ್ ಗಾಯಗೊಂಡಿದ್ದಾರೆ ಮತ್ತು ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಲವರು ಹಾರೈಸಿದ್ದಾರೆ.
ಆಟಗಾರರ ಸುರಕ್ಷತೆಗೆ ಐಸಿಸಿ ಬದ್ಧವಾಗಿರಬೇಕು ಎಂದು ಮತ್ತೊಬ್ಬ ನೆಟ್ಟಿಗರು ಹೇಳಿದ್ದಾರೆ. ಸದ್ಯ ಈ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.