ADVERTISEMENT

ಅಪಘಾತ: ಕ್ರಿಕೆಟಿಗ ಪಂತ್ ತಾಯಿಗೆ ದೂರವಾಣಿ ಕರೆ ಮಾಡಿ ಆರೋಗ್ಯ ವಿಚಾರಿಸಿದ ಮೋದಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಡಿಸೆಂಬರ್ 2022, 16:10 IST
Last Updated 30 ಡಿಸೆಂಬರ್ 2022, 16:10 IST
ಪ್ರಧಾನಿ ನರೇಂದ್ರ ಮೋದಿ ಮತ್ತು ಕ್ರಿಕೆಟರ್‌ ರಿಷಬ್ ಪಂತ್‌
ಪ್ರಧಾನಿ ನರೇಂದ್ರ ಮೋದಿ ಮತ್ತು ಕ್ರಿಕೆಟರ್‌ ರಿಷಬ್ ಪಂತ್‌    

ನವದೆಹಲಿ: ಮಾತೃ ವಿಯೋಗದ ನೋವಿನಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಅಪಘಾತಕ್ಕೀಡಾಗಿರುವ ಟೀಮ್ ಇಂಡಿಯಾ ಆಟಗಾರ ರಿಷಬ್‌ ಪಂತ್‌ ಅವರ ಯೋಗಕ್ಷೇಮ ಕೋರಿದ್ದಾರೆ.

ಮೋದಿ ಅವರು ಶುಕ್ರವಾರ ಸಂಜೆ ರಿಷಬ್ ಪಂತ್ ಅವರ ತಾಯಿಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದು, ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ಸುದ್ದಿಸಂಸ್ಥೆ ’ಎಎನ್‌ಐ‘ ಟ್ವೀಟ್ ಮಾಡಿದೆ.

ಇದಕ್ಕೂ ಮುನ್ನ ಟ್ವೀಟ್‌ ಮಾಡಿದ್ದ ಮೋದಿ, 'ಕ್ರಿಕೆಟಿಗ ರಿಷಬ್ ಪಂತ್ ಅವರ ಅಪಘಾತದಿಂದ ನೊಂದಿದ್ದೇನೆ. ಅವರ ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ನಾನು ಪ್ರಾರ್ಥಿಸುತ್ತೇನೆ’ ಎಂದು ಬರೆದುಕೊಂಡಿದ್ದರು.

ADVERTISEMENT

ಉತ್ತರಾಖಂಡದ ರೂರ್ಕಿ ಬಳಿ ಶುಕ್ರವಾರ ಮುಂಜಾನೆ ಕಾರು ಅಪಘಾತಕ್ಕೀಡಾಗಿ ವಿಕೆಟ್ ಕೀಪರ್-ಬ್ಯಾಟರ್ ತೀವ್ರವಾಗಿ ಗಾಯಗೊಂಡಿದ್ದಾರೆ.

25 ವರ್ಷದ ಪಂತ್‌ ಅವರ ತಲೆ ಮತ್ತು ಕಾಲಿಗೆ ಗಾಯವಾಗಿದ್ದು ಡೆಹ್ರಾಡೂನ್‌ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಸದ್ಯ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆನ್ನಿಗೆ ತೀವ್ರ ಪೆಟ್ಟಾಗಿದೆ ಎನ್ನಲಾಗಿದೆ.

ಪಂತ್‌ ಅವರ ಬಿಎಂಡಬ್ಲ್ಯು ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿತ್ತು. ಅಪಘಾತದ ಬಳಿಕ ತೆಗೆಯಲಾದ ಚಿತ್ರದಲ್ಲಿ ಪಂತ್‌ ಅವರಿದ್ದ ಕಾರು ಸಂಪೂರ್ಣವಾಗಿ ಸುಟ್ಟು ಹೋಗಿರುವ ಸ್ಥಿತಿಯಲ್ಲಿದೆ. ಪಂತ್‌ ಅವರ ತಲೆಗೆ ಬ್ಯಾಂಡೇಜ್‌ ಹಾಕಲಾದ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ನಗದು ಕಳ್ಳತನವಾಗಿಲ್ಲ: ರಿಷಬ್ ಪಂತ್ ಡೆಹ್ರಾಡೂನ್‌ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತದ ನಂತರ ಕಾರಿನಲ್ಲಿದ್ದ ನಗದು ಮತ್ತು ಇತರ ವಸ್ತುಗಳನ್ನು ಕಳವು ಮಾಡಲಾಗಿದೆ ಎಂಬ ಮಾಧ್ಯಮ ವರದಿಗಳು ಸುಳ್ಳು ಮತ್ತು ಆಧಾರರಹಿತವಾಗಿವೆ. ಪ್ಲಾಟಿನಂ ಚೈನ್, ಚಿನ್ನದ ಬಳೆ ಮತ್ತು ₹4000 ನಗದು ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ ಎಂದುಹರಿದ್ವಾರದ ಎಸ್ಪಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.