ADVERTISEMENT

ಮಹಿಳಾ ತಂಡದ ಕೋಚ್‌ ಹುದ್ದೆಗೆ ಅರ್ಜಿ ಆಹ್ವಾನ

ರಮೇಶ್‌ ಪೊವಾರ್‌ ಅವಧಿ ಅಂತ್ಯ

ಪಿಟಿಐ
Published 30 ನವೆಂಬರ್ 2018, 19:25 IST
Last Updated 30 ನವೆಂಬರ್ 2018, 19:25 IST
ವೆಂಕಟೇಶ್‌ ಪ್ರಸಾದ್‌
ವೆಂಕಟೇಶ್‌ ಪ್ರಸಾದ್‌   

ನವದೆಹಲಿ: ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಶುಕ್ರವಾರ ಮಹಿಳಾ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಹುದ್ದೆಗೆ ಅರ್ಜಿ ಆಹ್ವಾನಿಸಿದೆ.

ಈ ಮೊದಲು ಕೋಚ್‌ ಆಗಿದ್ದ ತುಷಾರ್‌ ಅರೋತೆ ಅವರು ಆಗಸ್ಟ್‌ನಲ್ಲಿ ರಾಜೀನಾಮೆ ನೀಡಿದ್ದರು. ಹೀಗಾಗಿ ರಮೇಶ್‌ ಪೊವಾರ್‌ ಜೊತೆ ಬಿಸಿಸಿಐ ಮೂರು ತಿಂಗಳ ಒಪ್ಪಂದ ಮಾಡಿಕೊಂಡಿತ್ತು. ಇದು ಶುಕ್ರವಾರ ಅಂತ್ಯವಾಗಿದೆ.

ಟಾಮ್‌ ಮೂಡಿ, ಡೇವ್‌ ವಾಟ್ಮೋರ್‌ ಮತ್ತು ವೆಂಕಟೇಶ್‌ ಪ್ರಸಾದ್‌ ಅವರು ಈ ಹುದ್ದೆ ಅಲಂಕರಿಸಲು ಆಸಕ್ತಿ ತೋರಿದ್ದಾರೆ ಎನ್ನಲಾಗಿದೆ.

ADVERTISEMENT

ಕನಿಷ್ಠ ಒಂದು ವರ್ಷ ಅಂತರರಾಷ್ಟ್ರೀಯ ತಂಡವೊಂದರ ಕೋಚ್‌ ಆಗಿ ಕೆಲಸ ಮಾಡಿದ ಅನುಭವ ಹೊಂದಿರುವವರಿಗೆ ಆದ್ಯತೆ ನೀಡಲು ಬಿಸಿಸಿಐ ತೀರ್ಮಾನಿಸಿದೆ. ಆಸ್ಟ್ರೇಲಿಯಾದ ಹಿರಿಯ ಆಟಗಾರ ಮೂಡಿ ಅವರು ಈ ಹಿಂದೆ ಹಲವು ತಂಡಗಳಿಗೆ ಮಾರ್ಗದರ್ಶನ ನೀಡಿದ್ದರು. ಐಪಿಎಲ್‌ನಲ್ಲಿ ಆಡುವ ಕಿಂಗ್ಸ್‌ ಇಲೆವನ್‌ ಪಂಜಾಬ್‌ ಮತ್ತು ಸನ್‌ರೈಸರ್ಸ್‌ ಹೈದರಾಬಾದ್‌ ತಂಡಗಳ ಕೋಚ್‌ ಆಗಿಯೂ ಕೆಲಸ ಮಾಡಿದ್ದರು. ವಾಟ್ಮೋರ್‌ ಅವರು ಈ ಹಿಂದೆ ಶ್ರೀಲಂಕಾ ತಂಡದ ಕೋಚ್‌ ಆಗಿದ್ದರು. ಅವರ ಮಾರ್ಗದರ್ಶನದಲ್ಲಿ ಸಿಂಹಳೀಯ ನಾಡಿನ ತಂಡ 1996ರ ವಿಶ್ವಕಪ್‌ನಲ್ಲಿ ಪ್ರಶಸ್ತಿ ಜಯಿಸಿತ್ತು.

ಕರ್ನಾಟಕದ ಪ್ರಸಾದ್‌ ಅವರು ಭಾರತ ತಂಡದ ಬೌಲಿಂಗ್‌ ಕೋಚ್‌ ಆಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

‌ಭಾರತ ತಂಡ 2019ರ ಜನವರಿಯಲ್ಲಿ ನ್ಯೂಜಿಲೆಂಡ್‌ ಪ್ರವಾಸ ಕೈಗೊಳ್ಳಲಿದೆ. ಹೀಗಾಗಿ ಡಿಸೆಂಬರ್‌ 20ರಂದು ಮುಂಬೈನಲ್ಲಿ ಕೋಚ್‌ ಹುದ್ದೆಯ ಆಕಾಂಕ್ಷಿಗಳ ಸಂದರ್ಶನ ನಡೆಸಲು ಬಿಸಿಸಿಐ ತೀರ್ಮಾನಿಸಿದೆ. ಆಯ್ಕೆಯಾದವರ ಜೊತೆ ಎರಡು ವರ್ಷಗಳ ಅವಧಿಗೆ ಒಪ್ಪಂದ ಮಾಡಿಕೊಳ್ಳಲು ನಿರ್ಧರಿಸಲಾಗಿದೆ.

ಪೊವಾರ್‌ ಮಾರ್ಗದರ್ಶನದಲ್ಲಿ ಭಾರತ ತಂಡ ಈ ಬಾರಿ ವಿಶ್ವ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯಲ್ಲಿ ಸೆಮಿಫೈನಲ್‌ ಪ್ರವೇಶಿಸಿತ್ತು. ಇಂಗ್ಲೆಂಡ್‌ ಎದುರಿನ ನಾಲ್ಕರ ಘಟ್ಟದ ಪೈಪೋಟಿಯಿಂದ ಅನುಭವಿ ಆಟಗಾರ್ತಿ ಮಿಥಾಲಿ ರಾಜ್‌ ಅವರನ್ನು ಕೈಬಿಡಲಾಗಿತ್ತು. ತಂಡದ ಆಡಳಿತ ಮಂಡಳಿಯ ಈ ನಿರ್ಣಯ ವಿವಾದದ ರೂಪ ಪಡೆದುಕೊಂಡಿತ್ತು.

‘ಪೊವಾರ್‌ ಅವರು ನನ್ನ ತೇಜೋವಧೆ ಮಾಡಲು ನಿರ್ಧರಿಸಿದ್ದಾರೆ. ಬಿಸಿಸಿಐ ಆಡಳಿತಾಧಿಕಾರಿಗಳ ಸಮಿತಿಯ ಸದಸ್ಯೆ ಡಯಾನ ಎಡುಲ್ಜಿ ಕೂಡಾ ನನ್ನನ್ನು ನಾಶಗೊಳಿಸಲು ಪ್ರಯತ್ನಿಸುತ್ತಿದ್ದಾರೆ’ ಎಂದು ಮಿಥಾಲಿ ಆರೋಪಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.