ADVERTISEMENT

ಐಪಿಎಲ್‌ ಐತಿಹಾಸಿಕ ಚೇಸ್: ಪಂದ್ಯ ಬದಲಿಸಿದ ಆ ಒಂದು ಓವರ್‌!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಸೆಪ್ಟೆಂಬರ್ 2020, 3:27 IST
Last Updated 28 ಸೆಪ್ಟೆಂಬರ್ 2020, 3:27 IST
ರಾಹುಲ್‌ ತೆವಾಟಿಯಾ ಆಟದ ವೈಖರಿ
ರಾಹುಲ್‌ ತೆವಾಟಿಯಾ ಆಟದ ವೈಖರಿ   

ಶಾರ್ಜಾ: ಅತಿ ದೊಡ್ಡ ಮೊತ್ತದ ಗುರಿಯನ್ನು ಬೆನ್ನಟ್ಟಿ ಗೆಲುವು ಪಡೆಯುವ ಮೂಲಕ ಐಪಿಎಲ್‌ ಇತಿಹಾಸದಲ್ಲಿಯೇ ಹೊಸದೊಂದು ದಾಖಲೆ ಸೃಷ್ಟಿಸಿತು ರಾಜಸ್ಥಾನ್‌ ರಾಯಲ್ಸ್‌ ತಂಡ. ಮೊದಲ ಇನಿಂಗ್ಸ್‌ನಲ್ಲಿ ಮಯಾಂಕ್‌–ರಾಹುಲ್‌ ಜೋಡಿಯ ಮೋಡಿ ಆವರಿಸಿಕೊಂಡರೆ, ದ್ವಿತಿಯಾರ್ಧದಲ್ಲಿ ರಾಜಸ್ಥಾನ ತಂಡದ ಸ್ಯಾಮ್ಸನ್‌ ಹೋರಾಟ ಪಂಜಾಬ್‌ ಆರ್ಭಟವನ್ನು ಮರೆಯಾಗಿಸಿತು. ಟಿವಿಗಳ ಮುಂದೆ ಕುಳಿತ ಕ್ರಿಕೆಟ್‌ ಪ್ರಿಯರಂತೂ ಭಾನುವಾರ ರಾತ್ರಿ ರನ್‌ ಹೊಳೆಯಲ್ಲಿ ತೋಯ್ದು ಹೋದರು.

ಆಗ ರಾಯಲ್ಸ್‌ ತಂಡದ ಸ್ಕೋರ್‌ 16.1 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 161 ರನ್‌. ಗೆಲುವು ಪಡೆಯಲು ಕೇವಲ ನಾಲ್ಕು ಓವರ್‌ಗಳಲ್ಲಿ 63 ರನ್‌ ಗಳಿಸಬೇಕಾದ ಒತ್ತಡ ಸ್ಥಿತಿ ಉಂಟಾಗಿತ್ತು. ಎದುರಿಸಿದ ಬಾಲ್‌ಗಳಿಗಿಂತ ಕಡಿಮೆ ರನ್‌ ದಾಖಲಿಸಿ ಇನ್ನಷ್ಟು ಒತ್ತಡಕ್ಕೆ ಸಿಲುಕಿದ್ದ ಆಲ್ರೌಂಡರ್ ರಾಹುಲ್‌ ತೆವಾಟಿಯಾ ಒಂದೇ ಓವರ್‌ನಲ್ಲಿ ಇಡೀ ಪಂದ್ಯದ ದಿಕ್ಕು ಬದಲಿಸಿದರು.

ವಿಕೆಟ್‌ ಪಡೆದು ಸಲ್ಯೂಟ್‌ ಮಾಡುವ ಶೈಲಿಯಿಂದ ಗುರುತಿಸಿಕೊಂಡಿರುವ ಶೇಲ್ಡನ್‌ ಕಾಟ್ರೇಲ್‌ 17ನೇ ಓವರ್‌ ನಿರ್ವಹಿಸಲು ಬಂದರು. ಆ ಓವರ್‌ನ ಮೊದಲ ಎಸೆತವನ್ನು ರಾಹುಲ್ ತೆವಾಟಿಯಾ ಸಿಕ್ಸರ್‌ಗಟ್ಟಿದರು. ಪಂಜಾಬ್‌ ತಂಡ ಮತ್ತು ಅದರ ಅಭಿಮಾನಿಗಳಲ್ಲಿ ಬಿಗಿಯಾಗಿದ್ದ ಉಸಿರು ಕೊಂಚ ಸಡಿಲಗೊಂಡ ಅನುಭವವಾಗಿತ್ತು. ಎರಡನೇ ಎಸೆತದಲ್ಲಿ ಮತ್ತೊಂದು ದೊಡ್ಡ ಹೊಡೆತದ ಮೂಲಕ ಚೆಂಡು ಗಾಳಿಯಲ್ಲಿ ತೇಲಿ ಬೌಂಡರಿ ದಾಟಿ ಹೋಗಿತ್ತು. ಅಲ್ಲಿಂದ ಮೂರು, ನಾಲ್ಕು...ಮತ್ತೆರಡು ಸಿಕ್ಸರ್‌ಗಳು. ಕಾಟ್ರೇಲ್‌ ಐದನೇ ಎಸೆತ ಸ್ವಿಂಗ್‌ ಮಾಡುವ ಮೂಲಕ ಹೊಡೆತದಿಂದ ತಪ್ಪಿಸಿಕೊಂಡರಾದರೂ ಕೊನೆಯ ಎಸೆತದಲ್ಲಿ ರಾಹುಲ್‌ ಮತ್ತೆ ಸಿಕ್ಸರ್‌ ಸಿಡಿಸಿದ್ದರು. ನೋಡ ನೋಡುತ್ತಿದ್ದಂತೆ ಪಂದ್ಯದ ದಿಕ್ಕು ಬದಲಾಯಿತು. ಒಂದೇ ಓವರ್‌ನಲ್ಲಿ 30 ರನ್‌ ದಾಖಲಾಯಿತು.

ADVERTISEMENT

ರಾಹುಲ್‌ ತೆವಾಟಿಯಾ 31 ಎಸೆತಗಳಲ್ಲಿ 7 ಸಿಕ್ಸರ್‌ ಸಹಿತ 53 ರನ್‌ ಗಳಿಸಿದರು. 18ನೇ ಓವರ್‌ ಕೊನೆಯಲ್ಲಿ ಅವರು ಶಮಿಗೆ ವಿಕೆಟ್ ಒಪ್ಪಿಸುವಷ್ಟರಲ್ಲಿ ತಂಡದ ಸ್ಕೋರ್‌ 222 ರನ್‌ ಆಗಿತ್ತು. ಇನ್ನೂ ಮೂರು ಎಸೆತ ಬಾಕಿ ಇರುವಂತೆ ರಾಯಲ್ಸ್‌ 226 ರನ್‌ ಗಳಿಸಿ ಹೊಸ ದಾಖಲೆ ಸೃಷ್ಟಿಸಿತು.

ಮೊದಲಿಗೆ ಕನ್ನಡಿಗರಾದ ಮಯಂಕ್ ಅಗರವಾಲ್‌ ಚುರುಕಿನ ಶತಕ (106) ಮತ್ತು ಕೆ.ಎಲ್‌.ರಾಹುಲ್‌ (69) ಅರ್ಧಶತಕದ ನೆರವಿನೊಂದಿಗೆ ಮೊದಲ ವಿಕೆಟ್‌ ಜೊತೆಯಾಟದಲ್ಲಿಯೇ ಪಂಜಾಬ್‌ 183 ರನ್‌ ಪೇರಿಸಿತು. ನಂತರ ನಿಕೋಲಸ್‌ ಪೂರನ್‌ ಮತ್ತು ಗ್ಲೇನ್‌ ಮ್ಯಾಕ್ಸ್‌ವೆಲ್‌ ಅಬ್ಬರದಿಂದ ರಾಜಸ್ಥಾನ್‌ಗೆ 224ರನ್‌ ಗೆಲುವಿನ ಗುರಿ ನಿಗದಿಯಾಯಿತು.

ಕಿಂಗ್ಸ್‌ ಪಂಜಾಬ್‌ ನೀಡಿದ ಸವಾಲು ಎದುರಿಸಲು ಮುಂದಾದ ರಾಜಸ್ಥಾನ್‌ ರಾಯಲ್ಸ್‌ಗೆ ಶೇಲ್ಡನ್‌ ಕಾಟ್ರೇಲ್‌ ಆರಂಭದಲ್ಲೇ ಆಘಾತ ನೀಡಿದರು. ಜಾಸ್‌ ಬಟ್ಲರ್ (4) ಕ್ಯಾಚ್‌ ನೀಡಿ ನಿರ್ಗಮಿಸಿದರು. ಎರಡನೇ ವಿಕೆಟ್‌ ಜೊತೆಯಾಟದಲ್ಲಿ ಸ್ಟೀವ್ ಸ್ಮಿತ್‌ (50) ಮತ್ತು ಸಂಜು ಸ್ಯಾಮ್ಸನ್‌ (85) ಗೆಲುವಿನ ಭರವಸೆ ಚಿಗುರಿಸಿದರು. ಆದರೆ, ನಾಯಕ ಸ್ಮಿತ್‌ ವಿಕೆಟ್‌ ಒಪ್ಪಿಸಿದ ಬಳಿಕ ರನ್ ಓಘಕ್ಕೆ ಬ್ರೇಕ್‌ ಬಿದ್ದಂತಾಯಿತು. ಏಳು ಸಿಕ್ಸರ್‌, ನಾಲ್ಕು ಫೋರ್‌ಗಳನ್ನು ಬಾರಿಸಿದ ಸಂಜು ಸ್ಯಾಮ್ಸನ್‌ 41 ಎಸೆತಗಳಲ್ಲಿ 85 ರನ್‌ ಗಳಿಸಿದ್ದರು. ಆದರೆ, ಮೊಹಮ್ಮದ್ ಶಮಿ ಎಸೆತದಲ್ಲಿ ಸ್ಯಾಮ್ಸನ್‌ ಹೊರನಡೆಯಬೇಕಾಯಿತು.

ಕೊನೆಯಲ್ಲಿ ಎರಡು ಸಿಕ್ಸರ್‌ ಸಹಿತ ಮೂರು ಎಸೆತಗಳಲ್ಲಿ 13 ರನ್‌ ಗಳಿಸಿದ ಜೋಫ್ರಾ ಆರ್ಚರ್‌ ಆಟವು ತಂಡದ ಗೆಲುವಿಗೆ ನೆರವಾಯಿತು. ರಾಬಿನ್‌ ಉತ್ತಪ್ಪ 4 ಎಸೆತಗಳಲ್ಲಿ 9 ರನ್‌ ಗಳಿಸಿ ಔಟ್‌ ಆದರು. ಪಂಜಾಬ್‌ನ ಮೊಹಮ್ಮದ್‌ ಶಮಿ 53 ರನ್‌ ನೀಡಿ ನಾಲ್ಕು ಓವರ್‌ಗಳಲ್ಲಿ 3 ವಿಕೆಟ್‌ ಕಬಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.