ADVERTISEMENT

ಸೌರಾಷ್ಟ್ರಕ್ಕೆ ಸಂಕಷ್ಟ ತಂದಿಟ್ಟ ಮೋರೆ: ಕರ್ನಾಟಕದ ಇನಿಂಗ್ಸ್ ಮುನ್ನಡೆ ಆಸೆ ಜೀವಂತ

ಗಿರೀಶದೊಡ್ಡಮನಿ
Published 25 ಜನವರಿ 2019, 13:18 IST
Last Updated 25 ಜನವರಿ 2019, 13:18 IST
ರೋನಿತ್‌ ಮೋರೆ ಚಿತ್ರ/ತಾಜುದ್ದೀನ್‌ ಆಜಾದ್‌
ರೋನಿತ್‌ ಮೋರೆ ಚಿತ್ರ/ತಾಜುದ್ದೀನ್‌ ಆಜಾದ್‌   

ಬೆಂಗಳೂರು: ರೋನಿತ್ ಮೋರೆ ಮತ್ತೊಮ್ಮೆ ಬಿರುಗಾಳಿ ವೇಗದ ಬೌಲಿಂಗ್ ಮಾಡಿದರು. ಈ ಋತುವಿನಲ್ಲಿ ನಾಲ್ಕನೇ ಬಾರಿ ಐದು ವಿಕೆಟ್‌ ಗೊಂಚಲು ಗಳಿಸಿದ ಅವರು ಕರ್ನಾಟಕದ ಮೊದಲ ಇನಿಂಗ್ಸ್ ಮುನ್ನಡೆಯ ಆಸೆಯನ್ನು ಜೀವಂತವಾಗಿಟ್ಟಿದ್ದಾರೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಸೆಮಿಫೈನಲ್‌ ಪಂದ್ಯದ ಎರಡನೇ ದಿನ ಕರ್ನಾಟಕವು 275 ರನ್‌ಗಳಿಗೆ ಸರ್ವಪತನವಾಯಿತು. ಬಲಾಢ್ಯ ಬ್ಯಾಟಿಂಗ್ ಪಡೆ ಹೊಂದಿರುವ ಸೌರಾಷ್ಟ್ರ ತಂಡವು ದಿನದಾಟದ ಕೊನೆಗೆ 66.3 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 227 ರನ್‌ ಗಳಿಸಿದೆ. ಇನಿಂಗ್ಸ್‌ನಲ್ಲಿ ಮುನ್ನಡೆ ಗಳಿಸಲು ಸೌರಾಷ್ಟ್ರಕ್ಕೆ ಇನ್ನೂ 48 ರನ್‌ಗಳು ಬೇಕು. ಕರ್ನಾಟಕಕ್ಕೆ ಮೂರು ವಿಕೆಟ್‌ಗಳ ಅವಶ್ಯಕತೆ ಇದೆ.

ಮೊದಲ ದಿನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ್ದ ಕರ್ನಾಟಕ ತಂಡವು 9 ವಿಕೆಟ್‌ಗಳಿಗೆ 264 ರನ್‌ ಗಳಿಸಿತ್ತು. ಎರಡನೇ ದಿನ ಇನಿಂಗ್ಸ್‌ ಆರಂಭಿಸಿದ ಕರ್ನಾಟಕದ ಶರತ್ ಶ್ರೀನಿವಾಸ್ ಮತ್ತು ರೋನಿತ್ ಮೋರೆ ಸುಮಾರು 47 ನಿಮಿಷಗಳ ಕ್ರೀಸ್‌ನಲ್ಲಿದ್ದರು. ಆದರೆ ಹೆಚ್ಚು ರಕ್ಷಣಾತ್ಮಕ ಆಟಕ್ಕೆ ಒತ್ತು ಕೊಟ್ಟರು. ಇದರಿಂದಾಗಿ 10.3 ಓವರ್‌ಗಳಲ್ಲಿ ಕೇವಲ 11 ರನ್‌ಗಳು ಮಾತ್ರ ತಂಡದ ಖಾತೆ ಸೇರಿದವು. ಧರ್ಮೇಂದ್ರಸಿಂಹ ಜಡೇಜ ಎಸೆತದಲ್ಲಿ ರೋನಿತ್ (2; 30ಎಸೆತ) ಔಟಾದರು. 83 ರನ್ ಗಳಿಸಿದ ಶರತ್ ಔಟಾಗದೆ ಉಳಿದರು.

ADVERTISEMENT

ನಂತರ ಬ್ಯಾಟಿಂಗ್ ಆರಂಭಿಸಿದ ಸೌರಾಷ್ಟ್ರ ತಂಡಕ್ಕೆ ಹರ್ವಿಕ್ ದೇಸಾಯಿ ಮತ್ತು ಸ್ನೆಲ್ ಪಟೇಲ್ ಉತ್ತಮ ಆರಂಭ ನೀಡಿದರು. ಹತ್ತನೇ ಓವರ್‌ನಲ್ಲಿ ರೋನಿತ್ ಮೊದಲ ಯಶಸ್ಸು ಗಳಿಸಿದರು. ಮನೀಷ್ ಪಾಂಡೆ ಸ್ಲಿಪ್‌ನಲ್ಲಿ ಪಡೆದ ಕ್ಯಾಚ್‌ಗೆ ಹರ್ವಿಕ್ ಔಟಾದರು. ಕ್ರೀಸ್‌ಗೆ ಬಂದ ವಿಶ್ವರಾಜ್ ಜಡೇಜ ನಿಧಾನವಾಗಿ ಆಡಿದರು. ಆದರೆ ಅವರಿಗೂ 18ನೇ ಓವರ್‌ನಲ್ಲಿ ರೋನಿತ್ ಪೆವಿಲಿಯನ್ ದಾರಿ ತೋರಿಸಿದರು. ಸ್ನೆಲ್ ಪಟೇಲ್ ಜೊತೆಗೂಡಿದ ಚೇತೇಶ್ವರ್ ಪೂಜಾರಬೌಲರ್‌ಗಳನ್ನು ದಿಟ್ಟತನದಿಂದ ಎದುರಿಸಿದರು. ಸ್ನೆಲ್ (85; 131ಎಸೆತ, 15ಬೌಂಡರಿ) ತಾಳ್ಮೆಯ ಅರ್ಧಶತಕ ಗಳಿಸಿದರು.

ಇನ್ನೊಂದೆಡೆ ಪೂಜಾರ ಕೂಡ ತಮ್ಮ ಅನುಭವದ ಆಟವಾಡಿದರು. ಮೂರನೇ ವಿಕೆಟ್ ಜೊತೆಯಾಟದಲ್ಲಿ 74 ರನ್‌ಗಳು ಸೇರಿದವು. 45ನೇ ಓವರ್‌ನಲ್ಲಿ ಸ್ನೆಲ್ ಪಟೇಲ್ ಆಟಕ್ಕೆ ಸ್ಪಿನ್ನರ್ ಶ್ರೇಯಸ್ ಗೋಪಾಲ್ ತಡೆಯೊಡ್ಡಿದರು. ಇದರೊಂದಿಗೆ ಊಟಕ್ಕೆ ನಡೆದರು.

ನಂತರ ಪೂಜಾರ ರನ್‌ ಗಳಿಕೆಯ ಹೊಣೆ ಹೊತ್ತರು. ಅವರೊಂದಿಗೆ ಶೆಲ್ಡನ್ ಜ್ಯಾಕ್ಸನ್ ಜೊತೆಗೂಡಿದರು. ಆದರೆ ತಮ್ಮ ಜನ್ಮದಿನದಂದು ಅರ್ಧಶತಕ ಗಳಿಸಲು ಪೂಜಾರಗೆ(45; 160ನಿ, 99ಎ, 4ಬೌಂ,1ಸಿ) ಸಾಧ್ಯವಾಗಲಿಲ್ಲ. ಅಭಿಮನ್ಯು ಮಿಥುನ್ ಅವರ ಎಸೆತವನ್ನು ಲಾಂಗ್ ಆಫ್‌ ಬೌಂಡರಿ ದಾಟಿಸುವ ಇರಾದೆಯಲ್ಲಿ ಬ್ಯಾಟ್ ಬೀಸಿದರು. ಅಂಚಿಗೆ ತಗುಲಿದ ಚೆಂಡು ಮೇಲಕ್ಕೆ ಚಿಮ್ಮಿತು. ಸ್ವತಃ ಮಿಥುನ್ ಕ್ಯಾಚ್ ಪಡೆದು ಕುಣಿದಾಡಿದರು.

ಇದಾದ ನಂತರ ರೋನಿತ್ ಆಟರಂಗೇರಿತು. ಶೆಲ್ಡನ್ ಜ್ಯಾಕ್ಸನ್, ಪ್ರೇರಕ್ ಮಂಕಡ್ ಮತ್ತು ಕಮಲೇಶ್ ಮಕ್ವಾನ ಅವರ ವಿಕೆಟ್‌ಗಳನ್ನು ಕಬಳಿಸಿದರು. ಇದರಿಂದಾಗಿ ಕರ್ನಾಟಕವು ಮೊದಲ ಇನಿಂಗ್ಸ್‌ ಮುನ್ನಡೆ ಪಡೆಯುವ ಆಸೆ ಇನ್ನೂ ಇದೆ. ಪಂದ್ಯದಲ್ಲಿ ಇನ್ನೂ ಮೂರು ದಿನಗಳು ಬಾಕಿ ಇದ್ದು, ಇನಿಂಗ್ಸ್‌ ಮುನ್ನಡೆಯು ಮಹತ್ವದ್ದಾಗಿದೆ. ಹಿನ್ನಡೆ ಅನುಭವಿಸುವ ತಂಡವು ಪಂದ್ಯ ಗೆದ್ದರೆ ಮಾತ್ರ ಫೈನಲ್‌ಗೆ ತೆರಳುತ್ತದೆ.

ವಯನಾಡಿನಲ್ಲಿ ನಡೆಯುತ್ತಿದ್ದ ಇನ್ನೊಂದು ಸೆಮಿಫೈನಲ್‌ನಲ್ಲಿ ಗೆದ್ದಿರುವ ಹಾಲಿ ಚಾಂಪಿಯನ್ ವಿದರ್ಭ ತಂಡವು ಫೈನಲ್ ತಲುಪಿದೆ. ಉಮೇಶ್ ಯಾದವ್ ಮೊದಲ ಇನಿಂಗ್ಸ್‌ನಲ್ಲಿ ಏಳು ಮತ್ತು ಎರಡನೇ ಇನಿಂಗ್ಸ್ ನಲ್ಲಿ ಐದು ವಿಕೆಟ್ ಕಬಳಿಸಿ ತಂಡಕ್ಕೆ ಗೆಲುವಿನ ಕಾಣಿಕೆ ನೀಡಿದ್ದಾರೆ. ಎರಡೇ ದಿನಗಳಲ್ಲಿ ಪಂದ್ಯ ಮುಗಿದಿದೆ.

ಮೊದಲ ಇನಿಂಗ್ಸ್

ಕರ್ನಾಟಕ 275ರನ್‌ಗೆ ಆಲೌಟ್‌

ಸೌರಾಷ್ಟ್ರ:7ವಿಕೆಟ್‌ಗೆ 227ರನ್‌

ಸ್ನೆಲ್ ಪಟೇಲ್ 85ರನ್‌,ಚೇತೇಶ್ವರ್ ಪೂಜಾರ 45ರನ್‌,ಶೆಲ್ಡನ್ ಜ್ಯಾಕ್ಸನ್ 46ರನ್‌,ಅರ್ಪಿತ್ ವಾಸವದಾ ಔಟಾಗದೆ 26

ಇತರೆ: 03 (ಬೈ 1, ಲೆಗ್‌ಬೈ 2)

ವಿಕೆಟ್ ಪತನ: 1–43 (ದೇಸಾಯಿ; 9.5), 2–63 (ವಿಶ್ವರಾಜಸಿಂಹ; 17.6), 3–137 (ಪಟೇಲ್;44.6), 4–178 (ಪೂಜಾರ; 54.3), 5–223 (ಶೆಲ್ಡನ್;62.6), 6–223 (ಪ್ರೇರಕ್; 64.2), 7–227 (ಮಕ್ವಾನ;66.3)

ಬೌಲಿಂಗ್

ಅಭಿಮನ್ಯು ಮಿಥುನ್‌ 44ರನ್‌ಗೆ 1ವಿಕೆಟ್‌,ರೋನಿತ್ ಮೋರೆ54ರನ್‌ಗೆ 5ವಿಕೆಟ್‌, ಶ್ರೇಯಸ್ ಗೋಪಾಲ್ 35ರನ್‌ಗೆ 1 ವಿಕೆಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.