
ಹುಬ್ಬಳ್ಳಿ: ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಜಮ್ಮು–ಕಾಶ್ಮೀರ ತಂಡವು ಉತ್ತಮ ಬ್ಯಾಟಿಂಗ್ ಮೂಲಕ ಎರಡನೇ ದಿನವೂ ಮೇಲುಗೈ ಸಾಧಿಸಿದೆ.
ಮೊದಲ ದಿನ ಶುಭಂ ಪುಂಡಿರ್ ಅವರ ಶತಕದ ನೆರವಿನಿಂದ 87 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 284 ರನ್ ಗಳಿಸಿದ್ದ ಜಮ್ಮು– ಕಾಶ್ಮೀರ ತಂಡವು, ಎರಡನೇ ದಿನವೂ ಸಂಘಟಿತ ಬ್ಯಾಟಿಂಗ್ ಪ್ರದರ್ಶನ ತೋರಿಸಿತು. 156 ಓವರ್‌ಗಳ ಅಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 527 ರನ್ ಗಳಿಸಿದೆ.
ಮೊದಲ ದಿನ ಅಜೇಯ 117 ರನ್ ಗಳಿಸಿದ್ದ ಶುಭಂ ಪುಂದಿರ, 121 ರನ್ ಗಳಿಸಿದ್ದ ವೇಳೆ ವಿದ್ಯಾಧರ ಪಾಟೀಲ ಅವರಿಗೆ ವಿಕೆಟ್ ಒಪ್ಪಿಸಿದರು. ಮೊದಲ ದಿನ ಅರ್ಧಶತಕ ಸಿಡಿಸಿದ್ದ ಬ್ಯಾಟಿಂಗ್ ಕಾಯ್ದುಕೊಂಡಿದ್ದ ಅನುಭವಿ ಆಟಗಾರ ಅಬ್ದುಲ್ ಸಮದ್, 61 ರನ್ ಗಳಿಸಿ ಪ್ರಸಿದ್ಧ ಕೃಷ್ಣಗೆ ವಿಕೆಟ್ ಒಪ್ಪಿಸಿದರು.
ಮೊದಲ ದಿನ ಮೈದಾನದಲ್ಲಿ ಗಾಯಗೊಂಡು ಹೊರನಡೆದಿದ್ದ ನಾಯಕ ಪರಾಸ್ ಡೋಗ್ರಾ (70 ರನ್: 166 ಎಸೆತ), ವಿಕೆಟ್ ಕೀಪರ್ ಬ್ಯಾಟರ್ ಕನ್ಹಯ್ಯಾ ವಾಧವನ್ (70 ರನ್: 109 ಎಸೆತ) ಹಾಗೂ ಸಾಹಿಲ್ ಲೋತ್ರಾ (ಅಜೇಯ 57 ರನ್: 93 ಎಸೆತ) ಅವರು ಅರ್ಧಶತಕ ಸಿಡಿಸಿದರು.
ಅಬಿದ್ ಮುಷ್ತಾಕ್ (ಅಜೇಯ 20 ರನ್: 31 ಎಸೆತ) ಹಾಗೂ ಸಾಹಿಲ್ ಲೋತ್ರಾ ಕ್ರೀಸ್‌ನಲ್ಲಿದ್ದಾರೆ.
ಮೊದಲ ದಿನ ಎರಡು ಅರ್ಧಶತಕ ಹಾಗೂ ಒಂದು ಶತಕ ದಾಖಲಾಗಿದ್ದರೆ, ಎರಡನೇ ದಿನವೂ 3 ಅರ್ಧಶತಕಗಳನ್ನು ಜಮ್ಮು– ಕಾಶ್ಮೀರ ಬ್ಯಾಟರ್‌ಗಳು ಹೊಡೆದಿದ್ದಾರೆ.
ಕರ್ನಾಟಕ ಪರ ಅನುಭವಿ ಬೌಲರ್ ಪ್ರಸಿದ್ಧ ಕೃಷ್ಣ 3 ವಿಕೆಟ್ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.