ADVERTISEMENT

ಕೇರಳ ವಿರುದ್ಧ ಕರ್ನಾಟಕಕ್ಕೆ ಇನಿಂಗ್ಸ್ ಹಾಗೂ 164 ರನ್ ಅಂತರದ ಭರ್ಜರಿ ಗೆಲುವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ನವೆಂಬರ್ 2025, 15:14 IST
Last Updated 4 ನವೆಂಬರ್ 2025, 15:14 IST
<div class="paragraphs"><p>ಕರುಣ್ ನಾಯರ್</p></div>

ಕರುಣ್ ನಾಯರ್

   

ತಿರುವನಂತಪುರ: ಮೊಹ್ಸಿನ್ ಖಾನ್ (23.3–14–29–6) ಅವರ ಸ್ಪಿನ್‌ ಮೋಡಿಗೆ ಸಿಲುಕಿದ ಕೇರಳ ತಂಡವು ಹೋರಾಟ ತೋರದೇ ಶರಣಾಯಿತು. ಕರ್ನಾಟಕ ತಂಡ ರಣಜಿ ಟ್ರೋಫಿ ಬಿ ಗುಂಪಿನ ಈ ಪಂದ್ಯವನ್ನು ಮಂಗಳವಾರ ಇನಿಂಗ್ಸ್‌ ಮತ್ತು 164 ರನ್‌ಗಳಿಂದ ಗೆದ್ದುಕೊಂಡಿತು. ಇದು ಈ ಋತುವಿನಲ್ಲಿ ಕರ್ನಾಟಕಕ್ಕೆ ಮೊದಲ ಜಯವಾಯಿತು.

ಮಂಗಲಪುರಂನ ಕೆಸಿಎ ಮೈದಾನದಲ್ಲಿ ಮೂರನೇ ದಿನದ ಕೊನೆಯ ಅವಧಿಯಲ್ಲಿ ಸ್ವಲ್ಪ ಪ್ರತಿರೋಧ ತೋರಿದ್ದ ಕೇರಳ ತಂಡ, ಫಾಲೊಆನ್‌ಗೆ ಒಳಗಾದ ನಂತರ ಅಷ್ಟೇನೂ ಪ್ರತಿಹೋರಾಟ ತೋರಲಿಲ್ಲ. ಕರ್ನಾಟಕ ಹಿಡಿತ ಸಾಧಿಸಿ ಪೂರ್ಣ ಏಳು ಪಾಯಿಂಟ್ಸ್‌ ಪಡೆಯಿತು.

ADVERTISEMENT

ಕರ್ನಾಟಕ ಈಗ ಗುಂಪಿನಲ್ಲಿ 11 ಪಾಯಿಂಟ್‌ಗಳೊಡನೆ ಎರಡನೇ ಸ್ಥಾನದಲ್ಲಿದೆ. ಇಷ್ಟೇ ಪಾಯಿಂಟ್ಸ್ ಪಡೆದಿರುವ ಗೋವಾ ರನ್‌ ಕೋಷ್ಟಕದ ಆಧಾರದಲ್ಲಿ ಮುಂದಿದೆ.

ಮೊದಲ ಇನಿಂಗ್ಸ್‌ನಲ್ಲಿ 348 ರನ್‌ಗಳ ಭಾರಿ ಅಂತರದಿಂದ ಹಿಂದೆ ಉಳಿದಿದ್ದ ಕೇರಳದ ಮುಂದೆ ಡ್ರಾಕ್ಕೆ ಪ್ರಯತ್ನಿಸುವ ಮಾರ್ಗವೊಂದೇ ಉಳಿದಿತ್ತು. ವಿಕೆಟ್‌ ನಷ್ಟವಿಲ್ಲದೇ 10 ರನ್‌ಗಳಿಂದ ಅಂತಿಮ ದಿನದಾಟ ಮುಂದುವರಿಸಿದ ಆತಿಥೇಯ ತಂಡಕ್ಕೆ ದಿನದ ಎರಡನೇ ಓವರಿನಲ್ಲಿ ವಿದ್ವತ್ ಕಾವೇರಪ್ಪ ಪೆಟ್ಟು ನೀಡಿದರು. ಆ ಓವರಿನ ಎರಡನೇ ಎಸೆತದಲ್ಲಿ ಎಂ.ಡಿ.ನಿಧೀಶ್ ಅವರ ವಿಕೆಟ್‌ ಪಡೆದ ಕರ್ನಾಟಕ ವೇಗಿ ಮರು ಎಸೆತದಲ್ಲೇ ಅಕ್ಷಯ್ ಚಂದ್ರನ್ ವಿಕೆಟ್‌ ಸಹ ಪಡೆದರು.

ಕೇರಳ ನಾಯಕ ಮೊಹಮ್ಮದ್ ಅಜರುದ್ದೀನ್ ಅವರು ಸ್ಪಿನ್ನರ್ ಶಿಖರ್ ಶೆಟ್ಟಿ ಬೌಲಿಂಗ್‌ನಲ್ಲಿ ವಿಕೆಟ್‌ ಕೀಪರ್‌ಗೆ ಕ್ಯಾಚಿತ್ತರು.

ಆರಂಭ ಆಟಗಾರ ಕೃಷ್ಣ ಪ್ರಸಾದ್ (33, 87ಎ) ಜೊತೆಗೂಡಿದ ಅಹಮದ್‌ ಇಮ್ರಾನ್‌ (23, 76ಎ) ಐದನೇ ವಿಕೆಟ್‌ಗೆ 57 ರನ್ ಸೇರಿಸಿ ಕೆಲಕಾಲ ಕುಸಿತ ತಡೆದರು. ಈ ಹಂತದಲ್ಲಿ ಆಫ್‌ ಸ್ಪಿನ್ನರ್ ಮೊಹ್ಸಿನ್ ಅವರು ಕೇರಳದ ಕುಸಿತಕ್ಕೆ ನಾಂದಿಹಾಡಿದರು. ಕರಾರುವಾಕ್ ದಾಳಿಯಲ್ಲಿ ಏಳು ವಿಕೆಟ್‌ಗಳಲ್ಲಿ ಆರನ್ನು ಕಬಳಿಸಿದರು.

ಇನಿಂಗ್ಸ್‌ನ 32ನೇ ಓವರಿನಲ್ಲಿ ಕೃಷ್ಣ ಪ್ರಸಾದ್ ವಿಕೆಟ್‌ ಪಡೆದ ಈ ಯುವ ಬೌಲರ್‌ ಎರಡು ಓವರುಗಳ ನಂತರ ಇಮ್ರಾನ್ ಅವರನ್ನು ತಮ್ಮದೇ ಬೌಲಿಂಗ್‌ನಲ್ಲಿ ಕ್ಯಾಚ್‌ ಹಿಡಿದು ಔಟ್ ಮಾಡಿದರು.

ಸಚಿನ್ ಬೇಬಿ ಮತ್ತು ಬಾಬಾ ಅಪರಾಜಿತ್‌ ಕೆಲಕಾಲ ಪ್ರತಿರೋಧ ತೋರಿದರಷ್ಟೇ. ಆದರೆ ಇವರಿಬ್ಬರ ವಿಕೆಟ್‌ಗಳೂ ಮೊಹ್ಸಿನ್ ಪಾಲಾದವು. ಇನ್ನೊಂದು ಕಡೆ ಅನುಭವಿ ಶ್ರೇಯಸ್ ಗೋಪಾಲ್ ಸಹ ವಿಕೆಟ್‌ ಸುಗ್ಗಿಯಲ್ಲಿ ಸೇರಿಕೊಂಡರು.

ಆದರೆ ಕೊನೆಯ ವಿಕೆಟ್‌ ಪಡೆಯಲು ಕರ್ನಾಟಕ 23 ಓವರುಗಳ ಕಾಲ ಶ್ರಮಹಾಕಬೇಕಾಯಿತು. ಹರಿಕೃಷ್ಣನ್ ಎಂ.ಯು. (6, 94ಎ, 4x1) ಜೊತೆಗೂಡಿದ ಏಡನ್ ಆಪ್ಪಿಲ್ ಟೋಂ (ಅಜೇಯ 39, 68ಎ, 4x7) ಅವರು ತಂಡ ಆಲೌಟ್‌ ಆಗುವ ಮುನ್ನ 44 ರನ್ ಸೇರಿಸಿದರು. ಈ ಜೊತೆಯಾಟ ಸಹ ಮುರಿದ ಮೊಹ್ಸಿನ್, ತಮ್ಮ ನಾಲ್ಕನೇ ಪ್ರಥಮ ದರ್ಜೆ ಪಂದ್ಯದಲ್ಲೇ ಜೀವನ ಶ್ರೇಷ್ಠ ಸಾಧನೆ ದಾಖಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.