ADVERTISEMENT

ರಣಜಿ ಟ್ರೋಫಿ: ಪ್ರಾಬಲ್ಯ ಮುಂದುವರಿಸುವತ್ತ ಮಯಂಕ್ ಪಡೆ ಚಿತ್ತ

ಕರ್ನಾಟಕ–ಮಧ್ಯಪ್ರದೇಶ ಹಣಾಹಣಿ ಇಂದಿನಿಂದ

ಗಿರೀಶ ದೊಡ್ಡಮನಿ
Published 21 ಜನವರಿ 2026, 23:30 IST
Last Updated 21 ಜನವರಿ 2026, 23:30 IST
ಮಯಂಕ್ ಅಗರವಾಲ್ 
ಮಯಂಕ್ ಅಗರವಾಲ್    

ಆಲೂರು (ಬೆಂಗಳೂರು): ಮಯಂಕ್ ಅಗರವಾಲ್ ನಾಯಕತ್ವದ ಕರ್ನಾಟಕ ತಂಡವು ಈ ಋತುವಿನ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಎರಡನೇ ಚರಣದಲ್ಲಿಯೂ ತನ್ನ ಪ್ರಾಬಲ್ಯವನ್ನು ಮುಂದುವರಿಸುವ ಛಲದಲ್ಲಿದೆ. 

ಅಕ್ಟೋಬರ್ ನವೆಂಬರ್‌ನಲ್ಲಿ ನಡೆದಿದ್ದ ಎಲೀಟ್ ಬಿ ಗುಂಪಿನ ಮೊದಲ ಚರಣದಲ್ಲಿ ಅಗ್ರಸ್ಥಾನ ಪಡೆದಿರುವ ಕರ್ನಾಟಕ ಗುರುವಾರದಿಂದ ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದಲ್ಲಿ ಮಧ್ಯಪ್ರದೇಶ ತಂಡವನ್ನು ಎದುರಿಸಲಿದೆ. ಮೊದಲ ಹಂತದಲ್ಲಿ ಐದು ಪಂದ್ಯಗಳಲ್ಲಿ ಎರಡರಲ್ಲಿ ಜಯಿಸಿತ್ತು. ಉಳಿದ ಮೂರರಲ್ಲಿ ಡ್ರಾ  ಸಾಧಿಸಿತ್ತು.  ಇದರಿಂದಾಗಿ ಒಟ್ಟು 21 ಅಂಕಗಳು ಕರ್ನಾಟಕದ ಖಾತೆಯಲ್ಲಿವೆ. ಎರಡನೇ ಹಂತದಲ್ಲಿ ಮಧ್ಯಪ್ರದೇಶ ಮತ್ತು ಪಂಜಾಬ್ (ಮುಲ್ಲನಪುರದಲ್ಲಿ ನಡೆಯಲಿದೆ) ಎದುರಿನ ಪಂದ್ಯಗಳು ಬಾಕಿ ಇವೆ. 

ಕಳೆದ 11 ವರ್ಷಗಳ ನಂತರ ರಣಜಿ ಟ್ರೋಫಿ ಜಯಿಸುವ ಛಲದಲ್ಲಿದೆ. ಬಲಗೈ ಬ್ಯಾಟರ್ ಕರುಣ್ ನಾಯರ್ ಅವರು ರಣಜಿ ಟೂರ್ನಿಯಲ್ಲಿ ಅತ್ಯಧಿಕ ರನ್ ಗಳಿಸಿರುವ ಬ್ಯಾಟರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಐದು ಪಂದ್ಯಗಳಿಂದ 602 ರನ್ ಪೇರಿಸಿದ್ದಾರೆ. ಅದರಲ್ಲಿ ಎರಡು ಶತಕಗಳಿವೆ. ಆದರೆ ಅಮೋಘ ಲಯದಲ್ಲಿದ್ದ ಬ್ಯಾಟರ್ ಸ್ಮರಣ್ ರವಿಚಂದ್ರನ್ (595 ರನ್) ಅವರು ಲಭ್ಯರಿಲ್ಲ. ಗಾಯದಿಂದಾಗಿ ವಿಶ್ರಾಂತಿ ಪಡೆದಿದ್ದಾರೆ. ನಿಕಿನ್ ಜೋಸ್ ತಂಡಕ್ಕೆ ಮರಳಿರುವುದು ಸಮಾಧಾನದ ಸಂಗತಿ. ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ 700ಕ್ಕೂ ಹೆಚ್ಚು ರನ್ ಗಳಿಸಿದ ದೇವದತ್ತ ಪಡಿಕ್ಕಲ್ ಅವರು ಕೆಂಪು ಚೆರ್ರಿ ಚೆಂಡಿನಲ್ಲಿ ತಮ್ಮ ಸಾಮರ್ಥ್ಯವನ್ನು ಪಣಕ್ಕೊಡ್ಡಲು ಸಿದ್ಧರಾಗಿದ್ದಾರೆ. 

ADVERTISEMENT

ವಿದ್ವತ್ ಕಾವೇರಪ್ಪ (14 ವಿಕೆಟ್) ಅವರಿಗೂ ಲಯಕ್ಕೆ ಮರಳಲು ಇದು ಉತ್ತಮಅವಕಾಶವಾಗಿದೆ. ಮೊದಲ ಹಂತದಲ್ಲಿ ಸ್ಪಿನ್ನರ್‌ಗಳಾದ ಶ್ರೇಯಸ್ ಗೋಪಾಲ್ (27 ವಿಕೆಟ್), ಮೊಹಸಿನ್ ಖಾನ್ (12) ಮತ್ತು ಶಿಖರ್ ಶೆಟ್ಟಿ (12) ಮೂವರೂ ಸೇರಿ 51 ವಿಕೆಟ್‌ ಹಂಚಿಕೊಂಡಿದ್ದರು. ಆಲೂರಿನ ಕ್ರೀಡಾಂಗಣದಲ್ಲಿಯೂ ಅವರು ಮಿಂಚುವ ನಿರೀಕ್ಷೆ ಇದೆ. 

ಮಧ್ಯಪ್ರದೇಶ ತಂಡದ ಬ್ಯಾಟಿಂಗ್ ವಿಭಾಗ ಬಲಿಷ್ಠವಾಗಿದೆ. ರಜತ್ ಪಾಟೀದಾರ್, ವೆಂಕಟೇಶ್ ಅಯ್ಯರ್, ಹಿಮಾಂಶು ಮಂತ್ರಿ, ನಾಯಕ ಶುಭಂ ಶರ್ಮಾ, ಹರ್ಷ ಗವಳಿ ಅವರು ದೀರ್ಘ ಇನಿಂಗ್ಸ್ ಆಡಬಲ್ಲರು. ಸ್ಪಿನ್ನರ್ ಕುಮಾರ ಕಾರ್ತಿಕೇಯ (21 ವಿಕೆಟ್) ಮತ್ತು ಸಾರಾಂಶ್ ಜೈನ್ (19 ವಿಕೆಟ್) ಅವರು ಜೊತೆಯಾಟಗಳನ್ನು ಮುರಿಯುವ ಸಮರ್ಥರಾಗಿದ್ದಾರೆ. ಮಧ್ಯಪ್ರದೇಶ ತಂಡವು ಆಡಿರುವ 5 ಪಂದ್ಯಗಳಲ್ಲಿ 1ರಲ್ಲಿ ಗೆದ್ದಿದೆ. ಉಳಿದ ಪಂದ್ಯಗಳು ಡ್ರಾ ಆಗಿವೆ. ಒಟ್ಟು 16 ಅಂಕ ಗಳಿಸಿದೆ. 

ಮಯಂಕ್ ಬಳಗವು ಇತ್ತೀಚೆಗೆ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಹೇಳಿಕೊಳ್ಳುವಂತಹ ಸಾಧನೆ ಮಾಡಿಲ್ಲ. ವಿಜಯ್ ಹಜಾರೆ ಏಕದಿನ ಟ್ರೋಫಿ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್‌ನಲ್ಲಿ ವಿದರ್ಭ ಎದುರು ಸೋತಿತ್ತು.  

ಕರುಣ್ ನಾಯರ್ 

ತಂಡಗಳು

ಕರ್ನಾಟಕ: ಮಯಂಕ್ ಅಗರವಾಲ್ (ನಾಯಕ) ನಿಕಿನ್ ಜೋಸ್ ದೇವದತ್ತ ಪಡಿಕ್ಕಲ್ ಕರುಣ್ ನಾಯರ್ ಕೆ.ಎಲ್. ಶ್ರೀಜಿತ್ ಅಭಿನವ್ ಮನೋಹರ್ ಶ್ರೇಯಸ್ ಗೋಪಾಲ್ ವಿದ್ಯಾಧರ್ ಪಾಟೀಲ ವಿದ್ವತ್ ಕಾವೇರಪ್ಪ ಅಭಿಲಾಷ್ ಶೆಟ್ಟಿ ಮೊಹಸಿನ್ ಖಾನ್ ಶ್ರೀಕರ್ ಶೆಟ್ಟಿ ಕೃತಿಕ್ ಕೃಷ್ಣ ಕೆ.ವಿ. ಅನೀಶ್ ಎಂ. ವೆಂಕಟೇಶ್.

ಮಧ್ಯಪ್ರದೇಶ: ಹರ್ಷ್ ಗವಳಿ ಯಶ್ ದುಬೆ ಶುಭಂ ಶರ್ಮಾ ಹಿಮಾಂಶು ಮಂತ್ರಿ ರಜತ್ ಪಾಟೀದಾರ್ ವೆಂಕಟೇಶ್ ಅಯ್ಯರ್ ಹರಪ್ರೀತ್ ಸಿಂಗ್ ಸಾಗರ್ ಸೋಳಂಕಿ ಕುಮಾರ ಕಾರ್ತಿಕೇಯ ಸಾರಾಂಶ್ ಜೈನ್ ಅಧೀರ್ ಪ್ರತಾಪ್ ಆರ್ಯನ್ ಪಾಂಡ್ಯ ಅನುಭವ್ ಅಗರವಾಲ್ ಕುಲದೀಪ್ ಸೇನ್ ಅರ್ಷದ್ ಖಾನ್. 

ಪಂದ್ಯ ಆರಂಭ : ಬೆಳಿಗ್ಗೆ 9.30

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.