ವಿದ್ವತ್ ಕಾವೇರಪ್ಪ
ಶಿವಮೊಗ್ಗ: ವಿದ್ವತ್ ಕಾವೇರಪ್ಪ (51ಕ್ಕೆ5) ಮಿಂಚಿನ ಬೌಲಿಂಗ್ ಬಲದಿಂದ ಕರ್ನಾಟಕ ತಂಡ ಇಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯದಲ್ಲಿ ಗೋವಾ ತಂಡವನ್ನು 217ರನ್‌ಗಳಿಗೆ ಆಲೌಟ್ ಮಾಡಿದೆ. ಆ ಮೂಲಕ ಎದುರಾಳಿಗಳ ಮೇಲೆ ಫಾಲೋ ಆನ್ ಹೇರಿದೆ.
ಗೋವಾ ತಂಡ ಫಾಲೋ ಆನ್ ತಪ್ಪಿಸಿಕೊಳ್ಳಲು 222 ರನ್‌ಗಳನ್ನು ಕಲೆಹಾಕಬೇಕಿತ್ತು. ಮೋಹಿತ್ ರೆಡ್ಕರ್ (53; 77ಎ, 3ಬೌಂ, 3ಸಿ) ಈ ನಿಟ್ಟಿನಲ್ಲಿ ದಿಟ್ಟ ಹೋರಾಟ ತೋರಿದರು.
ಆದರೆ ಕರ್ನಾಟಕದ ವೇಗಿ ವಿದ್ವತ್ 87ನೇ ಓವರ್‌ನಲ್ಲಿ ಎರಡು ವಿಕೆಟ್ ಉರುಳಿಸಿ ಗೋವಾ ತಂಡಕ್ಕೆ ಬಲವಾದ ಪೆಟ್ಟು ನೀಡಿದರು.
ಸೋಮವಾರದ ಅಂತ್ಯಕ್ಕೆ 77 ಓವರ್‌ಗಳಲ್ಲಿ 6 ವಿಕೆಟ್‌ಗೆ 171ರನ್‌ಗಳನ್ನು ಕಲೆಹಾಕಿದ್ದ ಗೋವಾ, ಈ ಮೊತ್ತಕ್ಕೆ 14ರನ್ ಸೇರಿಸುವಷ್ಟರಲ್ಲಿ ಅರ್ಜುನ್ ತೆಂಡೂಲ್ಕರ್ (47; 122ಎ, 6ಬೌಂ, 1ಸಿ) ವಿಕೆಟ್ ಕಳೆದುಕೊಂಡಿತು.
ವಿದ್ವತ್ ಹಾಕಿದ ಅಂತಿಮ ದಿನದಾಟದ ಎರಡನೇ ಓವರ್‌ನ ಕೊನೆಯ ಎಸೆತದಲ್ಲಿ ಅರ್ಜುನ್ ಪೆವಿಲಿಯನ್ ಸೇರಿದರು. ಬೌನ್ಸರ್‌ನಲ್ಲಿ ಅವರ ಬ್ಯಾಟಿನ ಮೇಲಂಚನ್ನು ಸವರಿಕೊಂಡು ಬಂದ ಚೆಂಡನ್ನು ವಿಕೆಟ್ ಕೀಪರ್ ಕೆ.ಎಲ್.ಶ್ರೀಜಿತ್ ಹಿಡಿತಕ್ಕೆ ಪಡೆದರು.
ವಿದ್ವತ್ ಹಾಕಿದ ಇದೇ ಓವರ್‌ನ ಎರಡನೇ ಎಸೆತದಲ್ಲಿ ಮಿಡ್ ವಿಕೆಟ್ ಕ್ಷೇತ್ರದಲ್ಲಿ ನಿಂತಿದ್ದ ಆರ್.ಸ್ಮರಣ್, ಮೋಹಿತ್ ರೆಡ್ಕರ್‌ಗೆ ಜೀವದಾನ ನೀಡಿದರು. ಇದರ ಲಾಭ ಪಡೆದ ಮೋಹಿತ್, ಬೌಂಡರಿ, ಸಿಕ್ಸರ್‌ಗಳನ್ನು ಸಿಡಿಸಿದರು. ವೈಶಾಖ್ ವಿಜಯಕುಮಾರ್ ಬೌಲ್ ಮಾಡಿದ 86ನೇ ಓವರ್‌ನ 5ನೇ ಎಸೆತವನ್ನು ಎಕ್ಸ್ಟ್ರಾ ಕವರ್‌ನತ್ತ ಸಿಕ್ಸರ್‌ಗೆ ಅಟ್ಟಿ ಅರ್ಧಶತಕ ಪೂರೈಸಿದರು.
ಮರು ಓವರ್‌ನಲ್ಲಿ (87) ದಾಳಿಗಿಳಿದ ವಿದ್ವತ್ ಎರಡನೇ ಎಸೆತದಲ್ಲಿ ಮೋಹಿತ್ ವಿಕೆಟ್ ಉರುಳಿಸಿದರು. ಮೂರು ಎಸೆತಗಳ ಅಂತರದಲ್ಲೇ (86.5) ವಿಕೆಟ್ ಕೀಪರ್ ಸಮರ್ ದುಭಾಶಿಗೂ (6) ಪೆವಿಲಿಯನ್ ಹಾದಿ ತೋರಿಸಿದರು.
ವೈಶಾಖ್ 88ನೇ ಓವರ್‌ನಲ್ಲಿ ದಾಳಿಗಿಳಿದಾಗ ಫಾಲೋ ಆನ್ ತಪ್ಪಿಸಿಕೊಳ್ಳಲು ಗೋವಾ ತಂಡಕ್ಕೆ 9 ರನ್‌ಗಳು ಬೇಕಿದ್ದವು. ಗೋವಾ ಪರ ಆಡುತ್ತಿರುವ ಕನ್ನಡಿಗ ವಿ.ಕೌಶಿಕ್ ಮೊದಲ ಎಸೆತವನ್ನೇ ಬೌಂಡರಿಗಟ್ಟಿದರು. ಮರು ಎಸೆತದಲ್ಲೇ ವೈಶಾಖ್, ಅವರನ್ನು ಬೌಲ್ಡ್ ಮಾಡಿ ಆತಿಥೇಯರ ಪಾಳಯದಲ್ಲಿ ಸಂಭ್ರಮದ ಹೊನಲು ಹರಿಯುವಂತೆ ಮಾಡಿದರು.
ಎರಡನೇ ಇನಿಂಗ್ಸ್ ಆರಂಭಿಸಿರುವ ಗೋವಾ 6 ಓವರ್‌ಗಳಲ್ಲಿ 1 ವಿಕೆಟ್ ಕಳೆದುಕೊಂಡು 20ರನ್ ಗಳಿಸಿದೆ.
ಇನಿಂಗ್ಸ್‌ನ 6ನೇ ಓವರ್‌ನ ಎರಡನೇ ಎಸೆತದಲ್ಲಿ ವೈಶಾಖ್ ವಿಜಯಕುಮಾರ್, ಸುಯಶ್ ಪ್ರಭುದೇಸಾಯಿ (13: 15ಎ, 2ಬೌಂ) ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದರು.
ಕರ್ನಾಟಕ ತಂಡ ಮೊದಲ ಇನಿಂಗ್ಸ್‌ನಲ್ಲಿ 110.1 ಓವರ್‌ಗಳಲ್ಲಿ 371 ರನ್ ಗಳಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.