ಮಯಂಕ್ ಅಗರವಾಲ್
(ಪಿಟಿಐ ಚಿತ್ರ)
ಬೆಂಗಳೂರು: ಕರ್ನಾಟಕದ ವಾಸುಕಿ ಕೌಶಿಕ್ ಹಾಗೂ ಅಭಿಲಾಷ್ ಶೆಟ್ಟಿ ಮಾರಕ ದಾಳಿಗೆ ತತ್ತರಿಸಿರುವ ಪಂಜಾಬ್ ತಂಡವು ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಟೂರ್ನಿಯ ಪಂದ್ಯದಲ್ಲಿ ಕೇವಲ 55 ರನ್ನಿಗೆ ಆಲೌಟ್ ಆಗಿದೆ.
ಎಲೈಟ್ 'ಸಿ' ಗುಂಪಿನ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕದ ನಾಯಕ ಮಯಂಕ್ ಅಗರವಾಲ್ ಮೊದಲು ಫೀಲ್ಡಿಂಗ್ ಆಯ್ದುಕೊಂಡರು.
ಅಮೋಘ ದಾಳಿ ನಡೆಸಿದ ಕರ್ನಾಟಕದ ಬೌಲರ್‌ಗಳು ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಂಡರು. ಪಂಜಾಬ್ ತಂಡದ ನಾಯಕ ಶುಭಮನ್ ಗಿಲ್ ಕೇವಲ 4 ರನ್ ಗಳಿಸಿ ಔಟ್ ಆದರು.
ಪಂಜಾಬ್ ಪರ ರಮನದೀಪ್ ಸಿಂಗ್ (16) ಹಾಗೂ ಮಯಂಕ್ ಮಾರ್ಕಂಡೆ (12) ಹೊರತುಪಡಿಸಿ ಇತರೆ ಯಾವ ಬ್ಯಾಟರ್ ಎರಡಂಕಿಯನ್ನು ದಾಟಲಿಲ್ಲ.
ನಿಖರ ದಾಳಿ ಸಂಘಟಿಸಿದ ಕೌಶಿಕ್ ಕೇವಲ 16 ರನ್ ತೆತ್ತು ನಾಲ್ಕು ವಿಕೆಟ್ ಕಿತ್ತು ಮಿಂಚಿದರು. ಅವರಿಗೆ ಉತ್ತಮ ಸಾಥ್ ನೀಡಿದ ಅಭಿಲಾಷ್ ಶೆಟ್ಟಿ 19 ರನ್ ನೀಡಿ ಮೂರು ವಿಕೆಟ್ ಗಳಿಸಿದರು. ವೇಗಿ ಪ್ರಸಿದ್ಧ ಕೃಷ್ಣ ಎರಡು ವಿಕೆಟ್ ಗಳಿಸಿದರು.
ಬಳಿಕ ಉತ್ತರ ನೀಡಿದ ಕರ್ನಾಟಕ ತಾಜಾ ವರದಿಯ ವೇಳೆಗೆ 16 ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 66 ರನ್ ಗಳಿಸಿದೆ. ಆ ಮೂಲಕ ಇನಿಂಗ್ಸ್ ಮುನ್ನಡೆ ಗಳಿಸಿದೆ.
ನಾಯಕ ಮಯಂಕ್ ಅಗರವಾರ್ 20 ಮತ್ತು ಅನೀಶ್ ಕೆ.ವಿ 33 ರನ್ ಗಳಿಸಿ ಔಟ್ ಆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.