
ಗೋವಾ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿ ಸಂಭ್ರಮಿಸಿದ ಕರ್ನಾಟಕ ತಂಡದ ಕರುಣ್ ನಾಯರ್
ಚಿತ್ರ: ಕೃಷ್ಣ ಕುಮಾರ್ ಪಿ.ಎಸ್.
ಶಿವಮೊಗ್ಗ: ಕರ್ನಾಟಕ ತಂಡದ ಉಪ ನಾಯಕ ಕರುಣ್ ನಾಯರ್ (ಔಟಾಗದೆ 174; 267ಎ, 14ಬೌಂ, 3ಸಿ) ತಮ್ಮ ನೆಚ್ಚಿನ ಅಂಗಳದಲ್ಲಿ ಭಾನುವಾರ ಅಚ್ಚಳಿಯದ ಹೆಜ್ಜೆ ಗುರುತು ಮೂಡಿಸಿದರು. ಸಂಕಷ್ಟದಲ್ಲೂ ಸೊಬಗಿನ ಇನಿಂಗ್ಸ್ ಕಟ್ಟಿ ಪ್ರೇಕ್ಷಕರ ಮನ ಗೆದ್ದರು. ತಾಳ್ಮೆಯಿಂದ ಆಡಿದರೆ ಎಂತಹ ಸವಾಲನ್ನಾದರೂ ಮೆಟ್ಟಿ ನಿಲ್ಲಬಹುದು ಎಂಬುದನ್ನು ತೋರಿಸಿಕೊಟ್ಟರು.
ಇವರ ಏಕಾಂಗಿ ಹೋರಾಟದಿಂದಾಗಿ ಆತಿಥೇಯರು ಇಲ್ಲಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಗೋವಾ ವಿರುದ್ಧದ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 110.1 ಓವರ್‌ಗಳಲ್ಲಿ 371ರನ್ ಕಲೆಹಾಕಿದ್ದಾರೆ. ಪ್ರಥಮ ಇನಿಂಗ್ಸ್ ಶುರುಮಾಡಿರುವ ಗೋವಾ 13 ಓವರ್‌ಗಳಲ್ಲಿ 1 ವಿಕೆಟ್‌ಗೆ 28 ರನ್ ಗಳಿಸಿದೆ.
ಮೊದಲ ದಿನವೇ (ಶನಿವಾರ) ಮೇಲುಗೈ ಸಾಧಿಸುವ ಗೋವಾ ತಂಡದ ಕನಸಿಗೆ ತಣ್ಣೀರೆರಚಿದ್ದ ಕರುಣ್, ಭಾನುವಾರವೂ ಕಲಾತ್ಮಕ ಆಟ ಆಡಿದರು. 69 ಓವರ್‌ಗಳಲ್ಲಿ 5 ವಿಕೆಟ್‌ಗೆ 222ರನ್‌ಗಳಿಂದ ಎರಡನೇ ದಿನದಾಟ ಮುಂದುವರಿಸಿದ ಮಯಂಕ್ ಅಗರವಾಲ್ ಬಳಗ ದಿನದ 9ನೇ ಓವರ್‌ನಲ್ಲಿ ಆಘಾತ ಅನುಭವಿಸಿತು. ಛಲದ ಆಟ ಆಡಿದ ಶ್ರೇಯಸ್ ಗೋಪಾಲ್ (57; 109ಎ, 6ಬೌಂ, 1ಸಿ) ಅರ್ಧಶತಕ ಗಳಿಸಿ ಔಟಾದರು. ಇನಿಂಗ್ಸ್‌ನ 78ನೇ ಓವರ್ ಬೌಲ್ ಮಾಡಿದ ವಿಜೇಶ್ ಪ್ರಭುದೇಸಾಯಿ ಎರಡನೇ ಎಸೆತದಲ್ಲಿ ಶ್ರೇಯಸ್ ವಿಕೆಟ್ ಉರುಳಿಸಿ, 117ರನ್‌ಗಳ ಆರನೇ ವಿಕೆಟ್ ಜೊತೆಯಾಟ ಮುರಿದರು.
ನಂತರ ಕರುಣ್, ‘ಬಾಲಂಗೋಚಿ’ಗಳ ಜೊತೆ ಸೇರಿ ಇನಿಂಗ್ಸ್ ಬೆಳೆಸಿದರು. 7ನೇ ವಿಕೆಟ್‌ಗೆ ಯಶೋವರ್ಧನ್ ಪರಂತಾಪ್ (14; 24ಎ, 2ಬೌಂ) ಜೊತೆ 26 ರನ್, 8ನೇ ವಿಕೆಟ್‌ಗೆ ವೈಶಾಖ್ ವಿಜಯಕುಮಾರ್ (31; 53ಎ, 4ಬೌಂ) ಜೊತೆ 99 ಎಸೆತಗಳಲ್ಲಿ 60 ರನ್ ದಾಖಲಿಸಿ ತಂಡದ ಮೊತ್ತವನ್ನು 300ರ ಗಡಿ ದಾಟಿಸಿದರು.
10ನೇ ವಿಕೆಟ್‌ಗೆ ವಿದ್ವತ್ ಕಾವೇರಪ್ಪ ಜೊತೆಗೂಡಿ ಕಲೆಹಾಕಿದ ಅಷ್ಟೂ ರನ್‌ಗಳು (29) ಕರುಣ್ ಬ್ಯಾಟ್‌ನಿಂದಲೇ ಸಿಡಿದವು. ಅರ್ಜುನ್ ತೆಂಡೂಲ್ಕರ್ ಮಾಡಿದ 105ನೇ ಓವರ್‌ನಲ್ಲಿ ಎರಡು ಸಿಕ್ಸರ್ ಮತ್ತು ಒಂದು ಬೌಂಡರಿ ಬಾರಿಸಿ ಪ್ರೇಕ್ಷಕರ ಸಿಳ್ಳೆ, ಚಪ್ಪಾಳೆ ಗಿಟ್ಟಿಸಿದರು. 111ನೇ ಓವರ್‌ನಲ್ಲಿ ವಿದ್ವತ್, ರನೌಟ್ ಆಗುತ್ತಿದ್ದಂತೆ ಕರ್ನಾಟಕದ ಇನಿಂಗ್ಸ್‌ಗೆ ತೆರೆಬಿತ್ತು.
ಆರಂಭಿಕ ಆಘಾತ: ಗೋವಾ ತಂಡದ ಆರಂಭ ಉತ್ತಮವಾಗಿರಲಿಲ್ಲ. ಇನಿಂಗ್ಸ್‌ನ ನಾಲ್ಕನೇ ಓವರ್‌ನ 5ನೇ ಎಸೆತದಲ್ಲಿ ಮಂಥನ್ ಖುತ್ಕರ್ ವಿಕೆಟ್ ಪಡೆದ ಅಭಿಲಾಷ್ ಶೆಟ್ಟಿ ಆತಿಥೇಯರಿಗೆ ಮೇಲುಗೈ ತಂದುಕೊಟ್ಟರು. ನಂತರ ಸುಯಾಶ್ ಎಸ್.ಪ್ರಭುದೇಸಾಯಿ ಮತ್ತು ಅಭಿನವ್ ತೇಜ್‌ರಾಣಾ ಎಚ್ಚರಿಕೆಯಿಂದ ಆಡಿದರು. ಮಧ್ಯಾಹ್ನ 2.40ರಿಂದ ಮಳೆ ಬಿರುಸಾಗಿ ಸುರಿದು ‘ಔಟ್‌ಫೀಲ್ಡ್’ ಒದ್ದೆಯಾಗಿದ್ದರಿಂದ ಕೊನೆಯ ಅವಧಿಯ ಆಟ ನಡೆಯಲಿಲ್ಲ.
ನವುಲೆಯ ಮೈದಾನದಲ್ಲಿ ಕರುಣ್ ಎರಡನೇ ಶತಕ ಸಿಡಿಸಿದರು. ಭಾನುವಾರ ಗಳಿಸಿದ 174ರನ್ ಈ ಅಂಗಳದಲ್ಲಿ ಅವರ ವೈಯಕ್ತಿಕ ಗರಿಷ್ಠ ಮೊತ್ತವೂ ಆಯಿತು. 2017ರಲ್ಲಿ ಹೈದರಾಬಾದ್ ವಿರುದ್ಧದ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಅವರು 134ರನ್ ಬಾರಿಸಿದ್ದರು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಕರುಣ್ ದಾಖಲಿಸಿದ 25ನೇ ಶತಕ ಇದಾಗಿದೆ.
ನವುಲೆಯ ಮೈದಾನ ಮೊದಲ ಎರಡು ದಿನ ವೇಗಿಗಳಿಗೆ ಹೆಚ್ಚಿನ ನೆರವು ನೀಡಿದೆ. ಒಟ್ಟು 10 ವಿಕೆಟ್‌ಗಳಲ್ಲಿ 8 ವಿಕೆಟ್‌ಗಳು ವೇಗದ ಬೌಲರ್‌ಗಳ ಪಾಲಾಗಿವೆ. ಗೋವಾದ ಅರ್ಜುನ್ ತೆಂಡೂಲ್ಕರ್ ಮತ್ತು ವಿ.ಕೌಶಿಕ್ ತಲಾ ಮೂರು ವಿಜೇಶ್ ಪ್ರಭುದೇಸಾಯಿ ಮತ್ತು ಕರ್ನಾಟಕದ ಅಭಿಲಾಷ್ ಶೆಟ್ಟಿ ತಲಾ ಒಂದು ವಿಕೆಟ್ ಪಡೆದಿದ್ದಾರೆ.
ಸ್ಕೋರ್ ಕಾರ್ಡ್
ಮೊದಲ ಇನಿಂಗ್ಸ್
ಕರ್ನಾಟಕ: 110.1 ಓವರ್ ಗಳಲ್ಲಿ 371 (ಶನಿವಾರ 69 ಓವರ್‌ಗಳಲ್ಲಿ 5 ವಿಕೆಟ್‌ಗೆ 222)
ಕರುಣ್ ನಾಯರ್ ಔಟಾಗದೆ 174 (267ಎ, 4X14, 6X3)
ಶ್ರೇಯಸ್ ಗೋಪಾಲ್ ಸಿ ಸ್ನೇಹಲ್ ಬಿ ವಿಜೇಶ್ 57 (109ಎ, 4X6, 6X1)
ಯಶೋವರ್ಧನ್ ಪರಂತಾಪ್ ಸಿ ವಿಜೇಶ್ ಬಿ ಕೌಶಿಕ್ 14 (24ಎ, 4X2)
ವೈಶಾಖ ಎಲ್‌ಬಿಡಬ್ಲ್ಯು ದರ್ಶನ್ 31 (53ಎ, 4X4)
ಅಭಿಲಾಷ್ ಶೆಟ್ಟಿ ಸಿ ಅಭಿನವ್ ಬಿ ದರ್ಶನ್ 02 (10ಎ)
ವಿದ್ವತ್ ಕಾವೇರಪ್ಪ ರನೌಟ್ ಅಭಿನವ್ 00 (9ಎ)
ಇತರೆ: 22 (ನೋಬಾಲ್ 6, ವೈಡ್ 2, ಬೈ 5, ಲೆಗ್ ಬೈ 9).
ವಿಕೆಟ್ ಪತನ: 6–245 (ಶ್ರೇಯಸ್; 77.2), 7–271 (ಯಶೋವರ್ಧನ್; 83.1), 8–331 (ವೈಶಾಖ; 99.2), 9–342 (ಅಭಿಲಾಷ್; 103.3), 10–371 (ವಿದ್ವತ್; 110.1).
ಬೌಲಿಂಗ್: ಅರ್ಜುನ್ ತೆಂಡೂಲ್ಕರ್ 29–6–100–3, ವಿ.ಕೌಶಿಕ್ 27.1–11–35–3, ವಿಜೇಶ್ ಪ್ರಭುದೇಸಾಯಿ 20–3–86–1, ದರ್ಶನ್ ಮಿಸಾಳ್ 18–0–74–2, ಮೋಹಿತ್ ರೆಡ್ಕರ್ 9–0–35–0, ಸುಯಶ್ ಎಸ್.ಪ್ರಭುದೇಸಾಯಿ 4–0–8–0, ಲಲಿತ್ ಯಾದವ್ 3–0–19–0.
ಗೋವಾ: 13 ಓವರ್‌ಗಳಲ್ಲಿ 1 ವಿಕೆಟ್‌ಗೆ 28
ಮಂಥನ್ ಖುತ್ಕರ್ ಸಿ ಶ್ರೀಜಿತ್ ಬಿ ಅಭಿಲಾಷ್ 9 (17ಎ, 4X1)
ಸುಯಶ್ ಬ್ಯಾಟಿಂಗ್ 11 (36ಎ, 4X1)
ಅಭಿನವ್ ತೇಜ್‌ರಾಣಾ ಬ್ಯಾಟಿಂಗ್ 8 (25ಎ, 4X1).
ವಿಕೆಟ್ ಪತನ: 1–9 (ಮಂಥನ್; 3.5).
ಬೌಲಿಂಗ್: ವಿದ್ವತ್ ಕಾವೇರಪ್ಪ 6–1–11–0, ಅಭಿಲಾಷ್ ಶೆಟ್ಟಿ 5–2–9–1, ಯಶೋವರ್ಧನ್ ಪರಂತಾಪ್ 1–0–3–0, ವೈಶಾಖ ವಿಜಯಕುಮಾರ್ 1–0–5–0.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.