ರೋಹಿತ್ ಶರ್ಮಾ, ರವೀಂದ್ರ ಜಡೇಜ, ರಿಷಭ್ ಪಂತ್
(ಪಿಟಿಐ ಚಿತ್ರಗಳು)
ಮುಂಬೈ: ರಣಜಿ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿ ಮುಂಬೈ ತಂಡವನ್ನು ಪ್ರತಿನಿಧಿಸುತ್ತಿರುವ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, ಸತತ ಎರಡನೇ ಇನಿಂಗ್ಸ್‌ನಲ್ಲೂ ವೈಫಲ್ಯ ಅನುಭವಿಸಿದ್ದಾರೆ.
ಬಾಂದ್ರಾ–ಕುರ್ಲಾ ಸೆಂಟರ್ ಕ್ರೀಡಾಂಗಣದಲ್ಲಿ ಜಮ್ಮು ಮತ್ತು ಕಾಶ್ಮೀರದ ವಿರುದ್ಧ ನಡೆಯುತ್ತಿರುವ ರಣಜಿ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಕೇವಲ ಮೂರು ರನ್ ಗಳಿಸಿ ಔಟ್ ಆಗಿದ್ದ ರೋಹಿತ್, ದ್ವಿತೀಯ ಇನಿಂಗ್ಸ್‌ನಲ್ಲೂ ವೈಫಲ್ಯ ಕಂಡಿದ್ದಾರೆ.
35 ಎಸೆತಗಳನ್ನು ಎದುರಿಸಿದ ರೋಹಿತ್ 28 ರನ್ ಗಳಿಸಿ ಔಟ್ ಆದರು. ಆಕ್ರಮಣಕಾರಿ ಆಟಕ್ಕೆ ಮುಂದಾದ ರೋಹಿತ್ ಮೂರು ಸಿಕ್ಸರ್ ಹಾಗೂ ಎರಡು ಬೌಂಡರಿಗಳನ್ನು ಬಾರಿಸಿದರು.
ಯಶಸ್ವಿ ಜೈಸ್ವಾಲ್ ಜೊತೆ ಕ್ರೀಸಿಗಿಳಿದ ರೋಹಿತ್ ಮೊದಲ ವಿಕೆಟ್‌ಗೆ 54 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು. ಮತ್ತೊಂದೆಡೆ ಯಶಸ್ವಿ 26 ರನ್ ಗಳಿಸಿ ಔಟ್ ಆದರು.
ಬಳಿಕ ದಿಢೀರ್ ಕುಸಿತ ಕಂಡಿರುವ ಮುಂಬೈ 101 ರನ್ ಗಳಿಸುವಷ್ಟರಲ್ಲಿ ಏಳು ವಿಕೆಟ್‌ಗಳನ್ನು ಕಳೆದುಕೊಂಡಿತು. ಈ ಹಂತದಲ್ಲಿ ಜೊತೆಗೂಡಿದ ಶಾರ್ದೂಲ್ ಠಾಕೂರ್ (60*) ಮತ್ತು ತನುಷ್ ಕೋಟ್ಯಾನ್ (39*) ತಂಡಕ್ಕೆ ಆಸರೆಯಾಗಿದ್ದಾರೆ. ಆ ಮೂಲಕ ಮುಂಬೈ ದ್ವಿತೀಯ ಇನಿಂಗ್ಸ್‌ನಲ್ಲಿ ಏಳು ವಿಕೆಟ್ ನಷ್ಟಕ್ಕೆ 200ರ ಗಡಿ ತಲುಪಿದೆ.
ಉಮರ್ ನಜೀರ್ (41ಕ್ಕೆ 4) ಹಾಗೂ ಯಧುವೀರ್ ಸಿಂಗ್ (31ಕ್ಕೆ 4) ದಾಳಿಗೆ ನಲುಗಿದ ಮುಂಬೈ ಮೊದಲ ಇನಿಂಗ್ಸ್‌ನಲ್ಲಿ 120ಕ್ಕೆ ಆಲೌಟ್ ಆಗಿತ್ತು. ಇದಕ್ಕೆ ಉತ್ತರ ಜಮ್ಮು ಮತ್ತು ಕಾಶ್ಮೀರ 206 ರನ್ನಿಗೆ ಸರ್ವಪತನ ಕಂಡಿತ್ತು. ಆದರೂ ಮೊದಲ ಇನಿಂಗ್ಸ್‌ನಲ್ಲಿ 86 ರನ್‌ಗಳ ಮುನ್ನಡೆ ಗಳಿಸಿತ್ತು. ಮುಂಬೈ ಪರ ಮೋಹಿತ್ ಅವಸ್ತಿ ಐದು ವಿಕೆಟ್ ಕಬಳಿಸಿ ಮಿಂಚಿದರು.
ಆಸ್ಟ್ರೇಲಿಯಾದಲ್ಲಿ ಈಚೆಗೆ ನಡೆದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಭಾರತ ತಂಡವು ಬ್ಯಾಟರ್‌ಗಳ ವೈಫಲ್ಯದಿಂದಾಗಿ ಹೀನಾಯ ಸೋಲನುಭವಿಸಿತ್ತು. ಅದರಿಂದಾಗಿ ತಂಡದ ಆಟಗಾರರು ದೇಶಿ ಕ್ರಿಕೆಟ್‌ನಲ್ಲಿ ಆಡುವುದನ್ನು ಬಿಸಿಸಿಐ ಕಡ್ಡಾಯಗೊಳಿಸಿತ್ತು.
ಜಡೇಜ ಮೋಡಿ, ಪಂತ್ ವೈಫಲ್ಯ...
ಮತ್ತೊಂದೆಡೆ ರವೀಂದ್ರ ಜಡೇಜ ಸ್ಪಿನ್ ಮೋಡಿ ನೆರವಿನಿಂದ ಸೌರಾಷ್ಟ್ರ ತಂಡವು ಡೆಲ್ಲಿ ವಿರುದ್ಧ ನಡೆದ ಪಂದ್ಯದಲ್ಲಿ 10 ವಿಕೆಟ್ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿದೆ.
ಮೊದಲ ಇನಿಂಗ್ಸ್‌ನಲ್ಲಿ ಐದು ವಿಕೆಟ್ ಗಳಿಸಿದ್ದ ಜಡೇಜ, ದ್ವಿತೀಯ ಇನಿಂಗ್ಸ್‌ನಲ್ಲೂ ಏಳು ವಿಕೆಟ್ ಸಾಧನೆ ಮಾಡಿದರು. ಆ ಮೂಲಕ ಪಂದ್ಯದಲ್ಲಿ ಒಟ್ಟು 12 ವಿಕೆಟ್‌ಗಳನ್ನು ಗಳಿಸಿದರು. ಅಲ್ಲದೆ ಬ್ಯಾಟಿಂಗ್‌ನಲ್ಲೂ 38 ರನ್‌ಗಳ ಉಪಯುಕ್ತ ಕೊಡುಗೆ ನೀಡಿದರು.
ಡೆಲ್ಲಿ ತಂಡದ ವಿಕೆಟ್ ಕೀಪರ್, ಬ್ಯಾಟರ್ ರಿಷಬ್ ಪಂತ್ ಪ್ರಭಾವಿ ಎನಿಸಿಕೊಳ್ಳುವಲ್ಲಿ ವಿಫಲರಾದರು. ಮೊದಲ ಇನಿಂಗ್ಸ್‌ನಲ್ಲಿ 1 ಮತ್ತು ಎರಡನೇ ಇನಿಂಗ್ಸ್‌ನಲ್ಲಿ 17 ರನ್ ಗಳಿಸಿ ಔಟ್ ಆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.