ADVERTISEMENT

Ranji Trophy: ರಣಜಿ ಅಂಗಳದಲ್ಲಿಯೂ ಮಂಕಾದ ತಾರೆಗಳು!

ಭಾರತ ತಂಡದ ನಾಯಕ–ಉಪನಾಯಕ ವೈಫಲ್ಯ; ಮಿಂಚಿದ ಜಡೇಜ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಜನವರಿ 2025, 9:24 IST
Last Updated 23 ಜನವರಿ 2025, 9:24 IST
<div class="paragraphs"><p>ಯಶಸ್ವಿ ಜೈಸ್ವಾಲ್, ರೋಹಿತ್ ಶರ್ಮಾ, ಶುಭಮನ್ ಗಿಲ್</p></div>

ಯಶಸ್ವಿ ಜೈಸ್ವಾಲ್, ರೋಹಿತ್ ಶರ್ಮಾ, ಶುಭಮನ್ ಗಿಲ್

   

(ಪಿಟಿಐ ಚಿತ್ರಗಳು)

ಬೆಂಗಳೂರು: ರಣಜಿ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿಯಲ್ಲೂ ಟೀಮ್ ಇಂಡಿಯಾದ ಸ್ಟಾರ್ ಆಟಗಾರರು ವೈಫಲ್ಯವನ್ನು ಅನುಭವಿಸಿದ್ದಾರೆ.

ADVERTISEMENT

ಮುಂಬೈ ಪರ ಆಡುತ್ತಿರುವ 'ಹಿಟ್‌ಮ್ಯಾನ್' ಖ್ಯಾತಿಯ ರೋಹಿತ್ ಶರ್ಮಾ, ವಾಣಿಜ್ಯ ನಗರಿಯಲ್ಲಿ ಜಮ್ಮು ಮತ್ತು ಕಾಶ್ಮೀರ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಕೇವಲ ಮೂರು ರನ್ ಗಳಿಸಿ ಔಟ್ ಆಗಿದ್ದಾರೆ.

19 ಎಸೆತಗಳನ್ನು ಎದುರಿಸಿದ ಟೀಮ್ ಇಂಡಿಯಾ ನಾಯಕ ರೋಹಿತ್ ಪ್ರಭಾವಿ ಎನಿಸಿಕೊಳ್ಳುವಲ್ಲಿ ವಿಫಲರಾದರು. ರೋಹಿತ್ ಜೊತೆ ಆರಂಭಿಕನಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್ ಸಹ ಕೇವಲ ನಾಲ್ಕು ರನ್ ಗಳಿಸಿ ಔಟ್ ಆದರು.

ಅಲ್ಲದೆ ಜಮ್ಮುವಿನ ಉಮರ್ ನಜೀರ್ (41ಕ್ಕೆ 4) ಹಾಗೂ ಯಧುವೀರ್ ಸಿಂಗ್ (31ಕ್ಕೆ 4) ದಾಳಿಗೆ ತತ್ತರಿಸಿರುವ ಮುಂಬೈ ಕೇವಲ 120ಕ್ಕೆ ಆಲೌಟ್ ಆಗಿದೆ.

ಮತ್ತೊಂದೆಡೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಪಂಜಾಬ್ ತಂಡವನ್ನು ಮುನ್ನಡೆಸುತ್ತಿರುವ ಆರಂಭಿಕ ಬ್ಯಾಟರ್ ಶುಭಮನ್ ಗಿಲ್ ನಾಲ್ಕು ರನ್ ಗಳಿಸಿ ಔಟ್ ಆಗಿದ್ದಾರೆ.

ಗಿಲ್ ಅವರನ್ನು ಕರ್ನಾಟಕದ ವೇಗಿ ಅಭಿಲಾಷ್ ಶೆಟ್ಟಿ ಹೊರದಬ್ಬಿದರು. ವಾಸುಕಿ ಕೌಶಿಕ್ (16ಕ್ಕೆ 4) ಹಾಗೂ ಅಭಿಲಾಷ್ ಶೆಟ್ಟಿ (19ಕ್ಕೆ 3) ದಾಳಿಗೆ ನಲುಗಿದ ಪಂಜಾಬ್ ಕೇವಲ 55ಕ್ಕೆ ಆಲೌಟ್ ಆಯಿತು. ಇದಕ್ಕೆ ಉತ್ತರವಾಗಿ ಕರ್ನಾಟಕ ಇನಿಂಗ್ಸ್ ಮುನ್ನಡೆ ಗಳಿಸುವಲ್ಲಿ ಯಶಸ್ವಿಯಾಗಿದೆ.

ರಾಜ್‌ಕೋಟ್‌ನಲ್ಲಿ ಸೌರಾಷ್ಟ್ರ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಡೆಲ್ಲಿ ತಂಡವನ್ನು ಪ್ರಿತಿನಿಧಿಸುತ್ತಿರುವ ರಿಷಭ್ ಪಂತ್ 1 ರನ್ ಗಳಿಸಿ ನಿರಾಸೆ ಮೂಡಿಸಿದರು. ಜಡೇಜ ಸ್ಪಿನ್ ಮೋಡಿಗೆ (66ಕ್ಕೆ 5) ಸಿಲುಕಿದ ಡೆಲ್ಲಿ 188ಕ್ಕೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.

ಇತ್ತೀಚೆಗೆ ನಡೆದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಬ್ಯಾಟರ್‌ಗಳ ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿ ಆಡುವುದನ್ನು ಬಿಸಿಸಿಐ ಕಡ್ಡಾಯಗೊಳಿಸಿದೆ ಎಂದು ವರದಿಯಾಗಿದೆ. ಆದರೆ ಟೀಮ್ ಇಂಡಿಯಾದ ಸ್ಟಾರ್ ಆಟಗಾರರ ವೈಫಲ್ಯ ಮುಂದುವರಿದಿದೆ.

ಅಂಕಿತ್ ಭಾವ್ನೆ ಅಮಾನತು

ಪುಣೆ: ಮಹಾರಾಷ್ಟ್ರ ತಂಡದ ಆಟಗಾರ ಅಂಕಿತ್ ಭಾವ್ನೆ ಅವರಿಗೆ ಒಂದು ಪಂದ್ಯದಿಂದ ಅಮಾನತು  ಮಾಡಲಾಗಿದೆ. ಹೋದ ನವೆಂಬರ್‌ನಲ್ಲಿ ಎಂಸಿಎ ಕ್ರೀಡಾಂಗಣದಲ್ಲಿ ನಡೆದಿದ್ದ ಸರ್ವಿಸಸ್ ವಿರುದ್ಧದ ರಣಜಿ ಪಂದ್ಯದಲ್ಲಿ  ಅಂಕಿತ್ ಅವರು  ಅಂಪೈರ್ ನೀಡಿದ್ದ ಔಟ್ ತೀರ್ಪಿಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಕ್ರೀಸ್‌ನಲ್ಲಿಯೇ ನಿಂತಿದ್ದರು. ಇದನ್ನು ಅಶಿಸ್ತು ಎಂದು ಪರಿಗಣಿಸಿ ಅವರನ್ನು ಒಂದು ಪಂದ್ಯದಿಂದ ಅಮಾನತು ಮಾಡಲಾಗಿದೆ. ಜ. 30ರಿಂದ ನಡೆಯುವ ಬರೋಡಾ ಎದುರಿನ ಪಂದ್ಯದಲ್ಲಿ ಅವರು ಕಣಕ್ಕಿಳಿಯುವುದಿಲ್ಲ ಎಂದು ಗುರುವಾರ ಬಿಸಿಸಿಐ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.