ADVERTISEMENT

ರವಿಶಾಸ್ತ್ರಿಗೆ ಫುಲ್‌ಮಾರ್ಕ್ಸ್‌ ಕೊಟ್ಟ ಕಪಿಲ್ ಬಳಗ

ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಮುಂದುವರಿಯಲು ರವಿಶಾಸ್ತ್ರಿಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2019, 14:41 IST
Last Updated 16 ಆಗಸ್ಟ್ 2019, 14:41 IST
   

ಮುಂಬೈ: ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಮುಂದುವರಿಯಲು ರವಿಶಾಸ್ತ್ರಿ ಅವರಿಗೆ ಅವಕಾಶ ಸಿಗುವುದು ಬಹುತೇಕ ಖಚಿತವಾಗಿದೆ.

ಶುಕ್ರವಾರಕಪಿಲ್ ದೇವ್ ನೇತೃತ್ವದ ಕ್ರಿಕೆಟ್ ಸಲಹಾ ಸಮಿತಿಯು ಆರು ಮಂದಿ ಹಿರಿಯ ಕೋಚ್‌ಗಳನ್ನು ಸಂದರ್ಶಿಸಿದ ನಂತರ ರವಿಶಾಸ್ತ್ರಿ ಹೆಸರನ್ನು ಶಿಫಾರಸು ಮಾಡಿದೆ. ಸಂದರ್ಶನ ಪ್ರಕ್ರಿಯೆ ನಂತರ ಸಮಿತಿಯು ಸುದ್ದಿಗೋಷ್ಠಿ ನಡೆಸಿತು.

‘ಈ ಆಯ್ಕೆಯು ಬಹಳ ಕಠಿಣವಾಗಿತ್ತು. ಏಕೆಂದರೆ ಎಲ್ಲರೂ ಉತ್ತಮ ಜ್ಞಾನ ಮತ್ತು ಅನುಭವ ಹೊಂದಿದವರಾಗಿದ್ದಾರೆ. ಅದರಲ್ಲಿಯೇ ಮೂವರನ್ನು ಅಂತಿಮಗೊಳಿಸಿದ್ದೇವೆ. ಅದರಲ್ಲಿ ಮೊದಲ ಸ್ಥಾನದಲ್ಲಿ ರವಿಶಾಸ್ತ್ರಿ, ಎರಡನೇ ಸ್ಥಾನದಲ್ಲಿ ಟಾಮ್‌ ಮೂಡಿ ಮತ್ತು ಮೂರನೇ ಸ್ಥಾನದಲ್ಲಿ ಮೈಕ್ ಹೆಸನ್ ಇದ್ದಾರೆ’ ಎಂದು ಕಪಿಲ್ ದೇವ್ ಹೇಳಿದರು.

ADVERTISEMENT

‘ನಾನು, ಅನ್ಷುಮನ್ ಗಾಯಕವಾಡ್ ಮತ್ತು ಶಾಂತಾ ರಂಗಸ್ವಾಮಿ ಅವರು ಪ್ರತ್ಯೇಕವಾಗಿ ಅಂಕಗಳನ್ನು ನೀಡಿದ್ದೆವು. ಪ್ರತಿಯೊಬ್ಬ ಅಭ್ಯರ್ಥಿಗೂ ಗರಿಷ್ಠ 100 ಅಂಕಗಳನ್ನು ನಿಗದಿಪಡಿಸಲಾಗಿತ್ತು. ಅವರ ಅನುಭವ, ಆಟದ ಕುರಿತ ಜ್ಞಾನ, ಸಂವಹನ ಕಲೆ, ತಂಡವನ್ನು ಒಗ್ಗೂಡಿಸಿ ಮುನ್ನಡೆಸುವ ತಂತ್ರಗಳು ಮತ್ತಿತರ ವಿಷಯಗಳ ಕುರಿತು ಅವರು ನೀಡಿದ ಪ್ರಾತ್ಯಕ್ಷಿಕೆ ಮತ್ತು ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಯಿತು. ಅದರ ಆಧಾರದ ಮೇಲೆ ಅಂಕಗಳನ್ನು ನೀಡಲಾಯಿತು. ನಾವು ಮೂರು ಜನರು ಅಂಕಗಳನ್ನು ನೀಡುವ ಕುರಿತು ಯಾವುದೇ ಹಂತದಲ್ಲಿಯೂ ಪರಸ್ಪರ ಮಾತನಾಡಿಲ್ಲ ಅಥವಾ ಪೂರ್ವನಿರ್ಧಾರಗಳನ್ನೂ ಮಾಡಿರಲಿಲ್ಲ. ಆದರೆ ಅಂತಿಮ ಅಂಕಪಟ್ಟಿ ಸಿದ್ಧವಾದಾಗ ಎಲ್ಲರ ನಿರ್ಧಾರವೂ ಒಂದೇ ಆಗಿತ್ತು’ ಎಂದು ಕಪಿಲ್ ಹೇಳಿದರು.

‘ಸುಮಾರು ಆರು ತಾಸುಗಳ ಈ ಸಂದರ್ಶನದಲ್ಲಿ ಸಾಕಷ್ಟು ಉತ್ತಮ ಅಂಶಗಳ ವಿಚಾರ ವಿನಿಮಯ ನಡೆಯಿತು. ನಾವು ಕೂಡ ಬಹಳಷ್ಟು ಹೊಸ ವಿಷಯಗಳನ್ನು ಕಲಿತೆವು. ಮೂವರು ಅಭ್ಯರ್ಥಿಗಳು ಪಡೆದಿರುವ ಅಂಕಗಳಲ್ಲಿ ದೊಡ್ಡ ವ್ಯತ್ಯಾಸವೇನಿಲ್ಲ. ಕೂದಲೆಳೆಯಷ್ಟು ಅಂತರ ಇದೆ’ ಎಂದು ಹೇಳಿದರು.

‘ನಾವು ನಮ್ಮ ಕೆಲಸವನ್ನು ಪೂರ್ತಿ ಮಾಡಿದ್ದೇವೆ. ಬಿಸಿಸಿಐಗೆ ವರದಿ ನೀಡಿದ್ದೇವೆ. ಈಗ ಮಂಡಳಿಯು ಅಂತಿಮ ನಿರ್ಧಾರ ಕೈಗೊಳ್ಳುವುದು. ಕೋಚ್ ಆಯ್ಕೆ, ಕಾರ್ಯದ ಅವಧಿ ಮತ್ತು ವೇತನಗಳ ಕುರಿತು ಮಂಡಳಿಯೇ ನಿರ್ಧರಿಸುವುದು’ ಎಂದು ಕಪಿಲ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಹಿರಿಯ ಕ್ರಿಕೆಟಿಗರಾದ ರಾಬಿನ್ ಸಿಂಗ್, ಲಾಲ್‌ಚಂದ್ ರಜಪೂತ್ ಮತ್ತು ವಿಂಡೀಸ್‌ನ ಫಿಲ್ ಸಿಮನ್ಸ್‌ ಕೂಡ ಕೋಚ್ ಹುದ್ದೆಯ ರೇಸ್‌ನಲ್ಲಿದ್ದರು.

ಪತ್ರಿಕಾಗೋಷ್ಠಿಯಲ್ಲಿ ಅನ್ಷುಮನ್ ಗಾಯಕವಾಡ್ ಮತ್ತು ಶಾಂತಾ ರಂಗಸ್ವಾಮಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.