ADVERTISEMENT

ಆಸ್ಟ್ರೇಲಿಯಾ ಎದುರು ಭಾರತಕ್ಕೆ ಜಯ; ಪಂದ್ಯ ಶ್ರೇಷ್ಠ ರವೀಂದ್ರ ಜಡೇಜಗೆ ದಂಡ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಫೆಬ್ರುವರಿ 2023, 14:17 IST
Last Updated 11 ಫೆಬ್ರುವರಿ 2023, 14:17 IST
ರವೀಂದ್ರ ಜಡೇಜ (ಪಿಟಿಐ ಚಿತ್ರ)
ರವೀಂದ್ರ ಜಡೇಜ (ಪಿಟಿಐ ಚಿತ್ರ)   

ನಾಗ್ಪುರ: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಬಾರ್ಡರ್‌–ಗಾವಸ್ಕರ್ ಟೆಸ್ಟ್ ಕ್ರಿಕೆಟ್‌ ಸರಣಿಯ ಮೊದಲ ಪಂದ್ಯದಲ್ಲಿ ಆಲ್‌ರೌಂಡ್‌ ಆಟದ ಮೂಲಕ ಭಾರತಕ್ಕೆ ಜಯ ತಂದುಕೊಟ್ಟ ರವೀಂದ್ರ ಜಡೇಜ ಅವರಿಗೆ ಅಂತರರಾಷ್ಟ್ರೀಯ ಕ್ರಿಕೆಟ್‌ ಮಂಡಳಿ (ಐಸಿಸಿ) ದಂಡ ವಿಧಿಸಿದೆ.

'ವಿದರ್ಭ ಕ್ರಿಕೆಟ್ ಸಂಸ್ಥೆ' ಕ್ರೀಡಾಂಗಣದಲ್ಲಿ ಗುರುವಾರ ಆರಂಭವಾದ ಪಂದ್ಯದ ಮೊದಲ ದಿನದಾಟದ ವೇಳೆ ಜಡೇಜ ಅವರ ಎಡಗೈ ತೋರುಬೆರಳಿಗೆ ಗಾಯವಾಗಿತ್ತು. ಆಗ ಸಹ ಆಟಗಾರ ಮೊಹಮ್ಮದ್ ಸಿರಾಜ್ ಕೊಟ್ಟ ಮುಲಾಮನ್ನು ಉಜ್ಜಿಕೊಂಡಿದ್ದರು. ಈ ವಿಡಿಯೊ ಸಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಈ ಬಗ್ಗೆ ಆಸ್ಟ್ರೇಲಿಯಾದ ಮಾಧ್ಯಮಗಳು ಮತ್ತು ಮಾಜಿ ಆಟಗಾರರು ಅನುಮಾನ ವ್ಯಕ್ತಪಡಿಸಿದ್ದರು.

‘ಜಡೇಜ ಅವರ ಬೆರಳಿನ ನೋವಿನ ಶಮನಕ್ಕಾಗಿ ಮುಲಾಮು ಲೇಪಿಸಲಾಗಿದೆ’ ಎಂದು ಬಿಸಿಸಿಐ ಮೂಲಗಳು ಪ್ರತಿಕ್ರಿಯಿಸಿದ್ದವು.

ADVERTISEMENT

ಸದ್ಯ ಜಡೇಜ ವಿರುದ್ಧ ಶಿಸ್ತು ಕ್ರಮ ಕೈಗೊಂಡಿರುವ ಐಸಿಸಿ, ಭಾರತದ ಕ್ರಿಕೆಟಿಗನ (ರವೀಂದ್ರ ಜಡೇಜ) ನಡೆಯು ಆಟಗಾರರು ಮತ್ತು ಸಹಾಯಕ ಸಿಬ್ಬಂದಿಗಾಗಿ ಇರುವ ಐಸಿಸಿಯ ನೀತಿ ಸಂಹಿತೆಯ (ಅನುಚ್ಛೇದ 2.20) ಉಲ್ಲಂಘನೆಯಾಗಿದೆ. ಇದು ಕ್ರೀಡಾಸ್ಫೂರ್ತಿಗೆ ವಿರುದ್ಧವಾದದ್ದು ಎಂದು ಹೇಳಿಕೆ ಬಿಡುಗಡೆ ಮಾಡಿದೆ.

ಕ್ರೀಡಾಂಗಣದಲ್ಲಿದ್ದ ಅಂಪೈರ್‌ಗಳ ಅನುಮತಿಯಿಲ್ಲದೆ ಮುಲಾಮು ಹಚ್ಚಿಕೊಂಡ ಜಡೇಜ ಅವರಿಗೆ ಪಂದ್ಯದ ಶುಲ್ಕದ ಶೇ 25 ರಷ್ಟು ದಂಡ ವಿಧಿಸಲಾಗಿದೆ. ಶಿಸ್ತು ಕ್ರಮದ ಭಾಗವಾಗಿ ಒಂದು ಡಿ–ಮೆರಿಟ್‌ ಅಂಕವನ್ನು ನೀಡಲಾಗಿದೆ ಎಂದೂ ತಿಳಿಸಿದೆ.

ಭಾರತಕ್ಕೆ ಜಯ
ಭಾರತ ಈ ಪಂದ್ಯವನ್ನು ಇನಿಂಗ್ಸ್‌ ಹಾಗೂ 132 ರನ್ ಅಂತರದಿಂದ ಗೆದ್ದುಕೊಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ, ಮೊದಲ ಇನಿಂಗ್ಸ್‌ನಲ್ಲಿ 177 ರನ್‌ ಗಳಿಸಿ ಆಲೌಟ್‌ ಆಗಿತ್ತು. ಇದಕ್ಕುತ್ತರವಾಗಿ ಭಾರತ ತಂಡ 400 ರನ್‌ ಕಲೆಹಾಕಿತ್ತು. 228 ರನ್‌ಗಳ ಹಿನ್ನಡೆಯೊಂದಿಗೆ ಮೂರನೇ ದಿನ ಎರಡನೇ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ 91 ರನ್‌ ಗಳಿಸಿ ಆಲೌಟ್‌ ಆಗುವುದರೊಂದಿಗೆ ಇನಿಂಗ್ಸ್‌ ಹಾಗೂ 132 ರನ್‌ ಅಂತರದ ಸೋಲೊಪ್ಪಿಕೊಂಡಿದೆ.

ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 47 ರನ್‌ ನೀಡಿ 5 ವಿಕೆಟ್ ಉರುಳಿಸಿದ್ದ ಜಡೇಜ, 70 ರನ್‌ ಸಹ ಗಳಿಸಿದ್ದರು. ಎರಡನೇ ಇನಿಂಗ್ಸ್‌ನಲ್ಲಿಯೂ ಮಿಂಚಿದ್ದ ಅವರು 34 ರನ್‌ ನೀಡಿ 2 ವಿಕೆಟ್‌ ಕಬಳಿಸಿದ್ದರು. ಹೀಗಾಗಿ ಪಂದ್ಯ ಶ್ರೇಷ್ಠ ಆಟಗಾರ ಎನಿಸಿಕೊಂಡರು.

ಈ ಜಯದೊಂದಿಗೆ ಭಾರತ ತಂಡ ಸರಣಿಯಲ್ಲಿ 1–0 ಅಂತರದ ಮುನ್ನಡೆ ಸಾಧಿಸಿದೆ. ಮುಂದಿನ ಪಂದ್ಯವು ದೆಹಲಿಯ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ಫೆಬ್ರುವರಿ 17ರಿಂದ 21ರ ವರೆಗೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.