ಬೆಂಗಳೂರು: ಐಪಿಎಲ್ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸ್ (ಆರ್‌ಸಿಬಿ) ತಲಾ ₹ 25 ಲಕ್ಷ ಪರಿಹಾರ ಘೋಷಿಸಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 (ಐಪಿಎಲ್) ಕ್ರಿಕೆಟ್ ಟೂರ್ನಿಯಲ್ಲಿ ಸತತ 17 ಆವೃತ್ತಿಗಳಲ್ಲಿ ಪ್ರಶಸ್ತಿ ಬರ ಅನುಭವಿಸಿದ್ದ ಆರ್‌ಸಿಬಿ 2025ರಲ್ಲಿ ಚಾಂಪಿಯನ್ ಪಟ್ಟಕ್ಕೇರಿತ್ತು. ಜೂನ್ 3ರಂದು ನಡೆದ ಫೈನಲ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು 6 ರನ್ ಅಂತರದಿಂದ ಮಣಿಸುವ ಮೂಲಕ ಚೊಚ್ಚಲ ಪ್ರಶಸ್ತಿಗೆ ಮುತ್ತಿಕ್ಕಿತ್ತು.
ಹೀಗಾಗಿ, ವಿಶ್ವದಾದ್ಯಂತ ಆರ್‌ಸಿಬಿ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ಮರುದಿನ (ಜೂನ್ 4ರಂದು) ಬೆಂಗಳೂರಿನಲ್ಲಿ ಆಯೋಜಿಸಿದ್ದ ವಿಜಯೋತ್ಸವದಲ್ಲಿ ನಿರೀಕ್ಷೆಗೂ ಮೀರಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಪಾಲ್ಗೊಂಡಿದ್ದರು. ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಂಭವಿಸಿದ ಕಾಲ್ತುಳಿತಲ್ಲಿ 11 ಮಂದಿ ಮೃತಪಟ್ಟು ಸಾಕಷ್ಟು ಜನರು ಗಾಯಗೊಂಡಿದ್ದರು.
ತಕ್ಷಣವೇ ಮೃತರ ಕುಟುಂಬಗಳಿಗೆ ತಲಾ ₹10 ಲಕ್ಷ ಪರಿಹಾರ ಘೋಷಿಸಿದ್ದ ಆರ್‌ಸಿಬಿ, ಮೂರು ತಿಂಗಳಿನಿಂದ ತನ್ನ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿಯೂ ಯಾವುದೇ ಪೋಸ್ಟ್ ಹಂಚಿಕೊಂಡಿರಲಿಲ್ಲ.
ಆದರೆ, ಶುಕ್ರವಾರ ಅಭಿಮಾನಿಗಳನ್ನುದ್ದೇಶಿಸಿ ಪೋಸ್ಟ್ ಮಾಡಿರುವ ಫ್ರಾಂಚೈಸಿ, ಕಳೆದ ಮೂರು ತಿಂಗಳಿನಿಂದ ಖಾಲಿತನವಷ್ಟೇ ಅಲ್ಲ, ತೀವ್ರ ದುಃಖ ನಮ್ಮನ್ನು ಆವರಿಸಿದೆ ಎಂದು ಹೇಳಿತ್ತು.
ಹಾಗೆಯೇ, ಈ ಮಾಧ್ಯಮದ ಮೂಲಕ ನಾವು ನಿಮ್ಮೊಂದಿಗೆ ಪ್ರತಿ ವಿಷಯಗಳನ್ನೂ ಹಂಚಿಕೊಳ್ಳುತ್ತಿದ್ದೆವು. ಆದರೆ, ಜೂನ್ 4ರ ದುರಂತ ಎಲ್ಲವನ್ನೂ ಬದಲಿಸಿತು. ನಮ್ಮ ಹೃದಯವನ್ನೇ ಒಡೆದುಹಾಕಿತು. ಮೂರು ತಿಂಗಳ ಅವಧಿಯಲ್ಲಿ ಸಾಕಷ್ಟು ವಿಚಾರಗಳನ್ನು ಕಲಿತಿದ್ದೇವೆ. ನೋವನ್ನೇ ನಂಬಿಕೆಯನ್ನಾಗಿ ರೂಪಿಸಲು ತೀರ್ಮಾನಿಸಿದ್ದೇವೆ. ಅದರ ಫಲವಾಗಿ, ಅಭಿಮಾನಿಗಳಿಗಾಗಿ, ನಮ್ಮ ಸಮುದಾಯಕ್ಕಾಗಿ 'ಆರ್‌ಸಿಬಿ ಕೇರ್ಸ್' ಆರಂಭಿಸುವುದಾಗಿ ಆರ್‌ಸಿಬಿ ತಿಳಿಸಿತ್ತು.
ಅಭಿಮಾನಿಗಳೊಂದಿಗೆ ನಿಲ್ಲುವ ಭರವಸೆ ನೀಡಿ, ಕರ್ನಾಟಕದ ಹೆಮ್ಮೆಯಾಗಿ ಮುನ್ನಡೆಯುವ ಆಶಯವನ್ನೂ ವ್ಯಕ್ತಪಡಿಸಿತ್ತು.
ಇದೀಗ, ಮೃತರ ಕುಟುಂಬಗಳಿಗೆ ಅದೇ 'ಆರ್‌ಸಿಬಿ ಕೇರ್ಸ್' ಮೂಲಕ ತಲಾ ₹ 25 ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಿದೆ.
ರಾಜ್ಯ ಸರ್ಕಾರವೂ ಮೃತರ ಕುಟುಂಬಗಳಿಗೆ ತಲಾ ₹ 25 ಲಕ್ಷ ಪರಿಹಾರ ಘೋಷಿಸಿತ್ತು.
ಆರ್‌ಸಿಬಿ ಹಂಚಿಕೊಂಡಿರುವ ಪೋಸ್ಟ್‌ನಲ್ಲೇನಿದೆ?
'ಜೂನ್ 4, 2025 – ಈ ದಿನ ನಮ್ಮ ಹೃದಯದಲ್ಲಿ ಶಾಶ್ವತವಾಗಿ ಉಳಿಯಲಿದೆ.
ನಾವು ಕಳೆದುಕೊಂಡಿದ್ದು 11 ಅಭಿಮಾನಿಗಳನ್ನಷ್ಟೇ ಅಲ್ಲ... ಅವರು ನಮ್ಮ ಕುಟು೦ಬದ ಸದಸ್ಯರಾಗಿದ್ದರು, ನಮ್ಮ ಹೃದಯದ ಭಾಗವಾಗಿದ್ದರು. ಅವರ ಉತ್ಸಾಹವೇ ನಮ್ಮ ಊರು, ಸಮುದಾಯ ಮತ್ತು ತಂಡಕ್ಕೆ ಜೀವ ತುಂಬುವ ಬೆಳಕಾಗಿತ್ತು. ನಮ್ಮ ನೆನಪುಗಳಲ್ಲಿ ಅವರು ಸದಾ ಜೀವಂತವಾಗಿರುತ್ತಾರೆ.
ಅವರ ಜಾಗವನ್ನು ಯಾವ ಸಹಾಯವೂ ತುಂಬಲಾರದು. ಆದರೆ ಮೊದಲನೇ ಮತ್ತು ಗೌರವದ ಸಂಕೇತವಾಗಿ, ಆರ್‌ಸಿಬಿ ಪ್ರತಿ ಕುಟುಂಬಕ್ಕೆ ತಲಾ ₹25 ಲಕ್ಷ ನೆರವನ್ನು ನೀಡಿದೆ. ಇದು ಕೇವಲ ಆರ್ಥಿಕ ಸಹಾಯವಲ್ಲ; ಕರುಣೆ, ಒಗ್ಗಟ್ಟು ಮತ್ತು ನಿರಂತರ ಕಾಳಜಿಯ ಭರವಸೆ.
ಇದು ಆರ್‌ಸಿಬಿ ಕೇರ್ಸ್‌ನ ಆರಂಭವೂ ಹೌದು. ಅವರ ನೆನಪನ್ನು ಗೌರವಿಸುವ ಮೂಲಕ ಶುರುವಾದ ಈ ಪ್ರಯತ್ನ, ಅಭಿಮಾನಿಗಳ ಭಾವನೆ, ನಂಬಿಕೆ ಮತ್ತು ಸುರಕ್ಷತೆ ಪ್ರತಿಬಿಂಬಿಸುವ ದೀರ್ಘಕಾಲದ ಬದ್ಧತೆ.
ಆರ್‌ಸಿಬಿ ಕೇರ್ಸ್ ಕುರಿತು ಇನ್ನಷ್ಟು ವಿವರಗಳು ಶೀಘ್ರದಲ್ಲೇ...'
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.