ವಿಜಯ್ ಮಲ್ಯ
ನವದೆಹಲಿ: ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ 18ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಫೈನಲ್‌ನಲ್ಲಿ ಪಂಜಾಬ್ ವಿರುದ್ಧ 6 ರನ್‌ಗಳ ಜಯ ಸಾಧಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಐಪಿಎಲ್) ತಂಡ ಚೊಚ್ಚಲ ಕಪ್‌ಗೆ ಮುತ್ತಿಕ್ಕಿದೆ.
ಐಪಿಎಲ್ ಆರಂಭವಾದ ಕಳೆದ 18 ವರ್ಷಗಳಲ್ಲಿ ಮೊದಲ ಬಾರಿ ಚಾಂಪಿಯನ್ ಆಗಿದ್ದು, ಅಭಿಮಾನಿಗಳಲ್ಲಿ ಖುಷಿ ಇಮ್ಮಡಿಸಿದೆ.
ಆರ್‌ಸಿಬಿ ಗೆಲುವನ್ನು ಸಂಭ್ರಮಿಸಿರುವ ತಂಡದ ಮಾಜಿ ಮಾಲೀಕ, ಉದ್ಯಮಿ ವಿಜಯ್ ಮಲ್ಯ, 'ನಾನು ಆರ್‌ಸಿಬಿಯನ್ನು ಸ್ಥಾಪಿಸಿದಾಗ ಬೆಂಗಳೂರಿಗೆ ಐಪಿಎಲ್ ಟ್ರೋಫಿ ಬರಬೇಕು ಎಂಬುದು ನನ್ನ ಕನಸಾಗಿತ್ತು. ಯುವಕನಾಗಿದ್ದ ಕಿಂಗ್ ಕೊಹ್ಲಿಯನ್ನು ಆಯ್ಕೆ ಮಾಡಿದ್ದೆ, ಅವರು 18 ವರ್ಷಗಳ ಕಾಲ ಆರ್‌ಸಿಬಿಯೊಂದಿಗೆ ಇದ್ದು ಚಾಂಪಿಯನ್ ಆಗಿದ್ದಾರೆ’ ಎಂದು ಬರೆದುಕೊಂಡಿದ್ದಾರೆ.
‘ಆರ್‌ಸಿಬಿ ಇತಿಹಾಸದಲ್ಲಿ ಕ್ರಿಸ್ ಗೇಲ್ ಮತ್ತು ಮಿಸ್ಟರ್ 360 ಎಬಿ ಡಿವಿಲಿಯರ್ಸ್ ಅಳಿಸಲಾಗದ ಭಾಗವಾಗಿದ್ದಾರೆ. ಕೊನೆಗೂ ಐಪಿಎಲ್ ಟ್ರೋಫಿ ಬೆಂಗಳೂರಿಗೆ ಆಗಮಿಸುತ್ತಿದೆ. ನನ್ನ ಕನಸನ್ನು ನನಸಾಗಿಸಿದ ಎಲ್ಲರಿಗೂ ಅಭಿನಂದನೆಗಳು, ಮತ್ತೊಮ್ಮೆ ಧನ್ಯವಾದಗಳು. ಆರ್‌ಸಿಬಿ ಅಭಿಮಾನಿಗಳು ಟ್ರೋಫಿಗೆ ಅರ್ಹರು. ಈ ಸಲ ಕಪ್ ಬೆಂಗಳೂರಿಗೆ ಬರುತ್ತೆ’ ಎಂದು ಬರೆದುಕೊಂಡಿದ್ದಾರೆ.
ಇನ್ನೊಂದು ಪೋಸ್ಟ್‌ನಲ್ಲಿ, ‘ಆರ್‌ಸಿಬಿ 18 ವರ್ಷಗಳ ಬಳಿಕ ಐಪಿಎಲ್ ಚಾಂಪಿಯನ್ ಆಗಿದೆ. 2025ರ ಟೂರ್ನಿ ಅದ್ಭುತವಾಗಿತ್ತು. ಆರ್‌ಸಿಬಿ ಉತ್ತಮ ತರಬೇತಿ ಮತ್ತು ಪ್ರೋತ್ಸಾಹ ಹೊಂದಿರುವ ಸಮತೋಲಿತ ತಂಡವಾಗಿದೆ. ಎಲ್ಲರಿಗೂ ಅಭಿನಂದನೆಗಳು’ ಎಂದು ಹೇಳಿದ್ದಾರೆ.
2008ರಲ್ಲಿ ಐಪಿಎಲ್ ಆರಂಭವಾದಾಗ ವಿಜಯ್ ಮಲ್ಯ ಅವರು ಆರ್‌ಸಿಬಿಯ ಮೊದಲ ಮಾಲೀಕರಾಗಿದ್ದರು. ವಿರಾಟ್ ಕೊಹ್ಲಿಯನ್ನು ತಂಡಕ್ಕೆ ಆಯ್ಕೆ ಮಾಡಿದ್ದರು. ನಂತರದ ವರ್ಷಗಳಲ್ಲಿ, ಎಬಿ ಡಿವಿಲಿಯರ್ಸ್ ಮತ್ತು ಕ್ರಿಸ್ ಗೇಲ್ ಅವರಂತಹ ಆಟಗಾರರು ಫ್ರಾಂಚೈಸಿಗೆ ಸೇರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.