ಜಿತೇಶ್ ಶರ್ಮಾ
ಚಿತ್ರ: X / @RCBTweets
ನವದೆಹಲಿ: ಕೆಳಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದು ತುಂಬಾ ಕಷ್ಟ. ಹೆಚ್ಚು ಸಮಯ ಸಿಗದ ಕಾರಣ ಮೈಲುಗಲ್ಲುಗಳನ್ನು ತಲುಪುವುದು ಅಸಾಧ್ಯ. ಹಾಗಾಗಿ, ಗಳಿಸುವ 30 ಅಥವಾ 40 ರನ್‌ಗಳನ್ನೇ ಅರ್ಧಶತಕವೆಂದುಕೊಳ್ಳುತ್ತೇನೆ ಎಂದು ಈ ಬಾರಿಯ ಐಪಿಎಲ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪರ ಫಿನಿಷರ್ ಪಾತ್ರ ನಿಭಾಯಿಸುತ್ತಿರುವ ಜಿತೇಶ್ ಶರ್ಮಾ ಹೇಳಿದ್ದಾರೆ.
ಜಿತೇಶ್ ಈ ಬಾರಿ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಮುಂಬೈ ವಿರುದ್ಧದ ಪಂದ್ಯದಲ್ಲಿ 19 ಎಸೆತಗಳಲ್ಲಿ 40 ರನ್ ಗಳಿಸಿದ್ದು, ಈ ಆವೃತ್ತಿಯಲ್ಲಿ ಅವರ ಗರಿಷ್ಠ ಮೊತ್ತವಾಗಿದೆ. ಆ ಪಂದ್ಯದಲ್ಲಿ ಆರ್‌ಸಿಬಿ 12 ರನ್ ಅಂತರದ ಜಯ ಸಾಧಿಸಿತ್ತು.
ಆರ್‌ಸಿಬಿಯ ಬೋಲ್ಡ್ ಡೈರೀಸ್‌ನಲ್ಲಿ ಮಾತನಾಡಿರುವ ಜಿತೇಶ್, 'ಇದೀಗ ಪ್ರತಿಯೊಬ್ಬರೂ ಫಿನಿಷರ್ ರೀತಿ ಆಡುತ್ತಿದ್ದಾರೆ. ಆದರೆ, 6, 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದು ತುಂಬಾ ಕಷ್ಟ. ಏಕೆಂದರೆ, ನಾನು ಫಿನಿಷರ್ ಪಾತ್ರ ನಿಭಾಯಿಸಲಾರಂಭಿಸಿದಾಗಿನಿಂದ ಅರ್ಧಶತಕ ಗಳಿಸಿಲ್ಲ. ನಾನು ಆರಂಭಿಕ ಬ್ಯಾಟರ್ ಆಗಿದ್ದವ. ಈ ಮೊದಲು ಶತಕ, ಅರ್ಧಶತಕಗಳನ್ನು ಬಾರಿಸುತ್ತಿದ್ದೆ' ಎಂದಿದ್ದಾರೆ.
31 ವರ್ಷದ ಈ ಬ್ಯಾಟರ್, ವೈಯಕ್ತಿಕ ಸಾಧನೆಗಿಂತ ತಂಡದ ಗೆಲುವಿಗಾಗಿ ಆಡುವುದು ಖುಷಿ ನೀಡುತ್ತಿದೆ ಎಂದೂ ಹೇಳಿದ್ದಾರೆ.
'ನಾನು ಮೈಲುಗಲ್ಲುಗಳನ್ನು ಮುಟ್ಟಿದಾಗ, ಬ್ಯಾಟ್ ಎತ್ತಿ ಹಿಡಿಯುವುದನ್ನು ಆನಂದಿಸುತ್ತೇನೆ. ಆದರೆ, ಫಿನಿಷರ್ ಆದಾಗಿನಿಂದ ಅರ್ಧಶತಕ ಗಳಿಸುವ ಅವಕಾಶವೇ ಸಿಕ್ಕಿಲ್ಲ. 10 ಎಸೆತಗಳಲ್ಲಿ 30 ರನ್, 20 ಎಸೆತಗಳಲ್ಲಿ 40 ರನ್ ಗಳಿಸುವುದೇ ಆಗಿದೆ. ಇದೇ ನನಗೆ 50 ರನ್ ಇದ್ದಂತೆ. ಒಂದು ವೇಳೆ 30 ಎಸೆತಗಳಲ್ಲಿ 60–70 ರನ್‌ಗಳನ್ನು ಗಳಿಸಿದರೆ, ಅದು 100 ರನ್‌ಗೆ ಸಮ. ತಂಡ ಗೆಲುವು ಸಾಧಿಸಿದರೆ, ಆ ರೀತಿಯ ಬ್ಯಾಟಿಂಗ್ ಅನ್ನು ತುಂಬಾ ಸಂತೋಷದಿಂದ ಮಾಡುತ್ತೇನೆ' ಎಂದು ಹೇಳಿಕೊಂಡಿದ್ದಾರೆ.
'ವಿಕೆಟ್ ಕೀಪರ್ ಆಗಿರುವುದು ಅನುಕೂಲ'
ವಿಕೆಟ್ ಕೀಪರ್ ಆಗಿರುವುದರಿಂದ ಸಾಕಷ್ಟು ಅನುಕೂಲಗಳಿವೆ. ಪಿಚ್ ಹೇಗೆ ವರ್ತಿಸುತ್ತಿದೆ, ಎದುರಾಳಿ ಬ್ಯಾಟರ್‌ಗಳು ಹೇಗೆ ಆಡುತ್ತಿದ್ದಾರೆ ಎಂಬುದನ್ನು ಅವಲೋಕಿಸಲು ಅವಕಾಶ ಸಿಗುತ್ತಿದೆ ಎಂದಿದ್ದಾರೆ.
'ಪಿಚ್ ಗತಿ ಅರಿತು ಆಡಲು ಹೊಸ ಬ್ಯಾಟರ್‌ಗೆ ನಾಲ್ಕರಿಂದ ಆರು ಎಸೆತಗಳು ಬೇಕಾಗುತ್ತವೆ. ಆದರೆ, ನನಗೆ ಎರಡೇ ಎಸೆತಗಳು ಸಾಕಾಗುತ್ತವೆ. ಏಕೆಂದರೆ, ಅದಕ್ಕೂ ಮೊದಲು ವಿಕೆಟ್ ಕೀಪಿಂಗ್ ಮಾಡಿರುತ್ತೇನೆ. ಸರಿಸುಮಾರು 240 ಎಸೆತಗಳವರೆಗೆ ಅಲ್ಲೇ ಇರುತ್ತೇನೆ. ಇದಂತು ನನ್ನ ಪಾಲಿಗೆ ಮೋಜಿನ ಸಂಗತಿ' ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.